ಪದ್ಮವಾಣಿ

ಉಡುಪಿ:ವೃದ್ಧೆ ಗಿರಿಜಾ ಶೆಟ್ಟಿಗಾರ್ ಪರವಾಗಿ ಮುಸ್ಲಿಂ ಮಹಿಳೆಯರು ಧ್ವನಿ

ಉಡುಪಿ:  “ಬಡತನ ಮತ್ತು ಕಷ್ಟಗಳಿಗೆ ಯಾವುದೇ ಧರ್ಮವಿರುವುದಿಲ್ಲ, ಮಾನವೀಯತೆಯೊಂದೇ ಪರಮ ಧರ್ಮ” ಎಂಬುದಕ್ಕೆ ಉಡುಪಿಯ ಬಡಗಬೆಟ್ಟು ಗ್ರಾಮದ ಮುಸ್ಲಿಂ ಮಹಿಳೆಯರು ಸಾಕ್ಷಿಯಾಗಿದ್ದಾರೆ. ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದ ಹಿಂದೂ ವೃದ್ಧೆಯೊಬ್ಬರ ಪರವಾಗಿ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ನ್ಯಾಯಕ್ಕಾಗಿ ಕಣ್ಣೀರಿಟ್ಟ ಅಪರೂಪದ ಘಟನೆ ಜರುಗಿದೆ.

35 ವರ್ಷಗಳ ಸುದೀರ್ಘ ಹೋರಾಟ:ಬಡಗಬೆಟ್ಟು ಗ್ರಾಮದ ನಿವಾಸಿಯಾದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ವಿಧವೆ ಮಹಿಳೆಗೆ 1989ರಲ್ಲೇ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿ ಹಕ್ಕು ಪತ್ರ ಸಿಕ್ಕಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಆ ಜಾಗವನ್ನು ‘ಡೀಮ್ಡ್ ಫಾರೆಸ್ಟ್’ ಎಂದು ಸಬೂಬು ಹೇಳಿ ಮನೆ ನಿರ್ಮಿಸಲು ಅಡ್ಡಿಪಡಿಸುತ್ತಿದ್ದರು. ಇದರಿಂದಾಗಿ ಗಿರಿಜಾ ಅವರು ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಬಾಡಿಗೆ ಮನೆಯಲ್ಲೇ ವಾಸಿಸುತ್ತಾ ಕಷ್ಟ ಅನುಭವಿಸುತ್ತಿದ್ದರು.

ನೆರೆಮನೆಯವರ ಸೌಹಾರ್ದತೆಯ ನಡೆ:ವೃದ್ಧೆಯ ಈ ಸುದೀರ್ಘ ನೋವನ್ನು ಕಂಡ ನೆರೆಮನೆಯ ಮುಸ್ಲಿಂ ಮಹಿಳೆಯರು, ಉಡುಪಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿಸಿ ಮನವಿ ಸಲ್ಲಿಸಿದರು. ಈ ವೇಳೆ ವೃದ್ಧೆಯ ಸಮಸ್ಯೆಯನ್ನು ವಿವರಿಸುವಾಗ ಮುಸ್ಲಿಂ ಮಹಿಳೆಯರು ಭಾವುಕರಾಗಿ ಕಣ್ಣೀರು ಹಾಕಿದರು.

ಇದು ನಮ್ಮ ಹೆಮ್ಮೆಯ ಭಾರತ: ಹಿಂದೂ ಮಹಿಳೆಯ ಕಷ್ಟಕ್ಕೆ ಮುಸ್ಲಿಂ ಸಹೋದರಿಯರು ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವುಕರಾದರು. “ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುವವರು ಸಮಾಜದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ, ಇಂತಹ ಸಾಮಾನ್ಯ ಜನರೇ ನಮ್ಮ ದೇಶದ ನಿಜವಾದ ಸೌಹಾರ್ದತೆಯ ರಾಯಭಾರಿಗಳು. ಇದು ನೋಡಿ ನಮ್ಮ ಹೆಮ್ಮೆಯ ಭಾರತ. ಇದನ್ನು ಉಡುಪಿ ಬಿಜೆಪಿಯವರು ಅರಿತುಕೊಳ್ಳಬೇಕು” ಎಂದು ಮಾರ್ಮಿಕವಾಗಿ ನುಡಿದರು.

ತಕ್ಷಣದ ಕ್ರಮಕ್ಕೆ ಸೂಚನೆ: ಕಷ್ಟದಲ್ಲಿರುವ ಗಿರಿಜಾ ಶೆಟ್ಟಿಗಾರ್ ಅವರಿಗೆ ಕಾನೂನುಬದ್ಧವಾಗಿ ಭೂಮಿಯ ವಾಸ್ತವ್ಯ ದೊರಕಿಸಿಕೊಟ್ಟು, ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ತಕ್ಷಣವೇ ಒದಗಿಸುವಂತೆ ಸಚಿವರು ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಮಾಜದಲ್ಲಿ ದ್ವೇಷ ಬಿತ್ತುವವರಿಗೆ ಈ ಸಾಮಾನ್ಯ ಜನರ ಪ್ರೀತಿ, ಒಗ್ಗಟ್ಟು ಮತ್ತು ಸಾಮರಸ್ಯ ದೊಡ್ಡ ಪಾಠವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಮೆಂಟ್ ಬಿಡಿ

Join Us