ದೇಶ

ಅಚ್ಚೇ ದಿನಗಳ ಬಗ್ಗೆ ಬಿಜೆಪಿ ನಾಯಕರ ಗಾಢಮೌನ;ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಬೆಂಗಳೂರು:  ಗೃಹಬಳಕೆಯ 14.2 ಕೆ.ಜಿ. ತೂಕದ ಎಲ್‌ಪಿಜಿ (LPG) ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್‌ಗೆ 29 ರೂಪಾಯಿಯಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ‘ಕಡಿಮೆ ಊಟ ಮಾಡಿ‘ ಎಂಬ ಆತ್ಮನಿರ್ಭರತೆಯ ಉಚಿತ ಸಲಹೆ ನೀಡಿದರೂ ಅಚ್ಚರಿಯಿಲ್ಲ” ಎಂದು ಅವರು ಲೇವಡಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ರಾಜ್ಯ ಬಿಜೆಪಿ ನಾಯಕರ ಮೌನವನ್ನು ಕಟುವಾಗಿ ಟೀಕಿಸಿದ್ದಾರೆ.


ಮೂರು ತಿಂಗಳಲ್ಲಿ ಎರಡನೇ ಬಾರಿ ಬರೆ: “ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ, ಈಗ ಗೃಹಬಳಕೆಯ ಸಿಲಿಂಡರ್ ಬೆಲೆಯೂ ಕಳೆದ 3 ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ 29 ರೂಪಾಯಿಯಷ್ಟು ಏರಿಕೆಯಾಗಿದೆ. ಬಹುಶಃ ರಾತ್ರಿ 8 ಗಂಟೆಗೆ ಪ್ರಧಾನಿಯವರು ಮತ್ತೊಮ್ಮೆ ಟಿವಿಯಲ್ಲಿ ಬಂದು ಕುಳಿತು ದೇಶದ ಜನತೆಗೆ ‘ಕಡಿಮೆ ಊಟ ಮಾಡಿ‘ ಎಂಬ ಆತ್ಮನಿರ್ಭರತೆಯ ಉಚಿತ ಸಲಹೆಯನ್ನು ನೀಡಬಹುದು!” ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಅಚ್ಚೇ ದಿನಗಳ ಬಗ್ಗೆ ಬಿಜೆಪಿ ನಾಯಕರ ಗಾಢಮೌನ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ ಕುಟುಕಿರುವ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ, ಈಗ ಜನರ ಅನ್ನದ ತಟ್ಟೆಯನ್ನೇ ಕಸಿಯುತ್ತಿದ್ದಾರೆ. ಕೇಂದ್ರದ ಈ ಜನವಿರೋಧಿ ಬೆಲೆ ಏರಿಕೆಯ ‘ಅಚ್ಚೇ ದಿನಗಳ’ ಬಗ್ಗೆ ಕರ್ನಾಟಕದ ಬಿಜೆಪಿ ನಾಯಕರು ಗಾಢಮೌನಕ್ಕೆ ಶರಣಾಗಿದ್ದಾರೆ. ಇದು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ” ಎಂದು ಸಚಿವರು ಆಕ್ರೋಶ ಹೊರಹಾಕಿದ್ದಾರೆ.

ಕಾಮೆಂಟ್ ಬಿಡಿ

Join Us