ಜಿಲ್ಲಾ ಸುದ್ದಿಗಳು

ಕಾನೂನು ಹೋರಾಟದ ಬಳಿಕ ಚೈತ್ರಾ ಕುಂದಾಪುರ ‘ನಿರ್ದೋಷಿ’ ಎಂದು ಕೋರ್ಟ್ ತೀರ್ಪು

ಗಂಗಾವತಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ದ್ವೇಷ ಭಾಷಣದ ಆರೋಪದ ಮೇಲೆ ಕಳೆದ 9 ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದೂ ಪರ ಭಾಷಣಗಾರ್ತಿ, ಬಿಗ್ ಬಾಸ್ ಪ್ರಖ್ಯಾತಿಯ ಚೈತ್ರಾ ಕುಂದಾಪುರ ಅವರು ಇದೀಗ ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆಗೊಂಡಿದ್ದಾರೆ. ಚೈತ್ರಾ ಕುಂದಾಪುರ ಸೇರಿದಂತೆ ಪ್ರಕರಣದ 1 ರಿಂದ 3ನೇ ಆರೋಪಿಗಳು ‘ನಿರ್ದೋಷಿ’ ಎಂದು ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.


ಕಳೆದ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ ಮತ್ತು ಬಿಜೆಪಿಯ ಪರಣ್ಣ ಮುನವಳ್ಳಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಈ ವೇಳೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಆಗಮಿಸಿದ್ದ ಚೈತ್ರಾ ಕುಂದಾಪುರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದ್ವೇಷ ಭಾಷಣ ಹಾಗೂ ಪರಸ್ಪರ ನಿಂದನೆ ಆರೋಪದಡಿ ಗಂಗಾವತಿಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು.   
 

ಕೋರ್ಟ್ ತೀರ್ಪಿನಲ್ಲಿ ಏನಿದೆ?:

ದಂಡ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 248(1) ರ ಅಡಿಯಲ್ಲಿ ನ್ಯಾಯಾಲಯವು ತೀರ್ಪು ನೀಡಿದ್ದು, “ಆರೋಪಿತರು ಭಾರತೀಯ ದಂಡ ಸಂಹಿತೆ (IPC) ಕಲಂ 171H, 171G ಮತ್ತು ಜನತಾ ಪ್ರಾತಿನಿಧ್ಯ ಅಧಿನಿಯಮ 1951ರ ಕಾಯ್ದೆ ಕಲಂ 125, 127ರ ಅಡಿಯ ಶಿಕ್ಷಾರ್ಹ ಅಪರಾಧಗಳನ್ನು ಎಸಗಿಲ್ಲ ಎಂದು ತೀರ್ಮಾನಿಸಿ ಬಿಡುಗಡೆಗೊಳಿಸಲಾಗಿದೆ. ಆರೋಪಿಗಳು ಹಾಗೂ ಜಾಮೀನುದಾರರ ಮುಚ್ಚಳಿಕೆ ಪತ್ರಗಳನ್ನು ರದ್ದುಗೊಳಿಸಲಾಗಿದ್ದು, ಜಪ್ತಿ ಮಾಡಲಾಗಿದ್ದ ಸೀಡಿ (CD) ಯನ್ನು ಅಪೀಲು ಅವಧಿ ಮುಗಿದ ನಂತರ ನಾಶಪಡಿಸಲು ಆದೇಶಿಸಲಾಗಿದೆ” ಎಂದು ಉಲ್ಲೇಖಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಭಾವುಕ ಪೋಸ್ಟ್:

ಕೋರ್ಟ್ ತೀರ್ಪಿನ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಚೈತ್ರಾ ಕುಂದಾಪುರ, “ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗಿನ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ. 9 ವರ್ಷಗಳು ಬರೋಬ್ಬರಿ 5 ಕೇಸುಗಳು.. ಹಾ ಇವೆಲ್ಲವೂ ಒಂದು ಚಿಂತನೆಗಾಗಿ, ಪಕ್ಷಕ್ಕಾಗಿ ಹಾಕಿಸಿಕೊಂಡದ್ದು. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟದ ನಡುವೆ ರಾಜಕೀಯ ಪಿತೂರಿಗಳು ನನಗೆ ಬದುಕು ಕಲಿಸಿವೆ. ಈ ಸಂಚಿನಲ್ಲಿ ಭಾಗಿಯಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆಗುಂಪಾಗಿದ್ದಾರೆ. ಇದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನ” ಎಂದು ಬರೆದುಕೊಂಡಿದ್ದಾರೆ.

ಕಾಮೆಂಟ್ ಬಿಡಿ

Join Us