ಜಿಲ್ಲಾ ಸುದ್ದಿಗಳು

ಮಂಗಳೂರು: ಭಾರೀ ಮಳೆಯ ಪರಿಣಾಮ ತಡೆಗೋಡೆ ಕುಸಿದು ಬಿದ್ದು ಮೂವರ ಸಾವು

ಮಂಗಳೂರು: ಮಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು, ಹಂಚಿನ ಛಾವಣಿಯ ಮನೆ ಕುಸಿದ ಪರಿಣಾಮ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಇನ್ನು ಈ ದುರಂತದಲ್ಲಿ ಉಳಿದ ಮೂವರನ್ನು ರಕ್ಷಿಸಲಾಗಿದೆ. ಬುಧವಾರ ಮುಂಜಾನೆ 4.45 ರಿಂದ 5 ಗಂಟೆ ಮಧ್ಯೆ ಈ ದುರಂತ ಸಂಭವಿಸಿದೆ. ದುರ್ಘಟನೆಯ ವೇಳೆ ಮನೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ – ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತು.

ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳಡಿ ಸಿಲುಕಿಕೊಂಡಿದ್ದ ಅಲ್ಕಾ(14), ಅನುಷ್ಕಾ(11) ಮತ್ತು ಬಾಲಕೃಷ್ಣ(48) ಅವರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಶಾಂತಾ(35), ಅನಾಮಿಕ ಚೌರಾಸಿಯಾ(7) ಮತ್ತು ಬಾಲಕಿ ತನು(3) ಎಂಬ ಮೂವರನ್ನು ಹೊರ ತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಮೂಲತಃ ಬಿಹಾರ ರಾಜ್ಯದವರಾದ ಬಾಲಕೃಷ್ಣ ಅವರ ಕುಟುಂಬ ಕಳೆದ 20 ವರ್ಷಗಳಿಂದ ಕಂಕನಾಡಿ ಗ್ರಾಮದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ಪ್ರದೇಶದ ಮನೆಯಲ್ಲಿ ವಾಸಿಸುತ್ತಿತ್ತು ಎಂದು ತಿಳಿದುಬಂದಿದೆ.

ಜಿಲ್ಲಾಧಿಕಾರಿ ದರ್ಶನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸದಲ್ಲಿರುವ ಆರೋಗ್ಯ ಖಾತೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಅವರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಚಿವರು, ತ್ವರಿತ ಪರಿಹಾರ ಕ್ರಮಗಳಿಗೆ ಸೂಚಿಸಿದರು. ಗಾಯಾಳುಗಳಿಗೆ ಸರಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮೃತರ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಅವರು ನಿರ್ದೇಶಿಸಿದ್ದಾರೆ. ಸಚಿವರು ಇಂದು ಮಧ್ಯಾಹ್ನ ಮಂಗಳೂರು ತಲುಪುವ ನಿರೀಕ್ಷೆ ಇದೆ.

ಕಾಮೆಂಟ್ ಬಿಡಿ

Join Us