ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಮತ್ತೆ ಶೃಂಗೇರಿಯ ಶಾಸಕರಾಗಿ ಅಧಿಕಾರ
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಮರುಎಣಿಕೆ ಪ್ರಕ್ರಿಯೆಯ ಸಂಬಂಧ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪು ನೀಡುವ ಮೂಲಕ ಬಿಜೆಪಿಯ ಡಿ.ಎನ್. ಜೀವರಾಜ್ ಅವರಿಗೆ ತೀವ್ರ ಹಿನ್ನಡೆ ಉಂಟುಮಾಡಿದೆ. ಮೇ 2ರಂದು ನಡೆದ ಮರುಎಣಿಕೆಯಲ್ಲಿ ಜೀವರಾಜ್ ಜಯಗಳಿಸಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಈ ಇಡೀ ಪ್ರಕ್ರಿಯೆಗೆ ಈಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು ಮರುಎಣಿಕೆಗೂ ಮುನ್ನ ಇದ್ದ ಸ್ಥಿತಿಯನ್ನೇ ಮರುಸ್ಥಾಪಿಸುವಂತೆ ಆದೇಶಿಸಿದೆ. ಇದರ ನೇರ ಪರಿಣಾಮವಾಗಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಮತ್ತೆ ಶೃಂಗೇರಿಯ ಶಾಸಕರಾಗಿ ಅಧಿಕಾರ ಮುಂದುವರಿಸಲಿದ್ದಾರೆ.
ವಿಚಾರಣೆ ವೇಳೆ ಚುನಾವಣಾಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲು ಬಿಡುವುದಿಲ್ಲ ಎಂಬ ಖಡಕ್ ಎಚ್ಚರಿಕೆ ನೀಡಿದೆ. ಕೇವಲ ತಿರಸ್ಕೃತಗೊಂಡಿದ್ದ ಅಂಚೆ ಮತಗಳ ಮರುಪರಿಶೀಲನೆಗೆ ಹೈಕೋರ್ಟ್ ಸೂಚಿಸಿದ್ದರೂ, ಅಧಿಕಾರಿಗಳು ರಾಜೇಗೌಡ ಅವರ ಪರವಾಗಿದ್ದ ಸಿಂಧು ಮತಗಳನ್ನು ಮರುಎಣಿಕೆ ಮಾಡಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈಗಾಗಲೇ ಸಿಂಧು ಎಂದು ಘೋಷಿಸಲಾದ ಮತಗಳನ್ನು ಮೆತ್ತೆ ಪರಿಶೀಲಿಸುವ ಅಗತ್ಯವೇ ಇರಲಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಮರುಎಣಿಕೆ ಪ್ರಕ್ರಿಯೆಯಲ್ಲಿ ರಾಜೇಗೌಡ ಅವರ 248 ಮತಗಳನ್ನು ಕಡಿತಗೊಳಿಸಿ ಜೀವರಾಜ್ ಅವರನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಈ ಆದೇಶದ ಬೆನ್ನಲ್ಲೇ ಜೀವರಾಜ್ ವಿರುದ್ಧ ಮತ ಪೆಟ್ಟಿಗೆ ತಿದ್ದಿದ ಆರೋಪದಡಿ ಎಫ್‌ಐಆರ್ ಕೂಡ ದಾಖಲಾಗಿದ್ದು, ಪ್ರಕರಣವು ಈಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಸದ್ಯಕ್ಕೆ ಸುಪ್ರೀಂ ಕೋರ್ಟ್ ಮರುಎಣಿಕೆ ನಂತರದ ಎಲ್ಲಾ ಬೆಳವಣಿಗೆಗಳನ್ನು ಸ್ಥಗಿತಗೊಳಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿದೆ. ಈ ತೀರ್ಪಿನಿಂದಾಗಿ ಶೃಂಗೇರಿ ಕ್ಷೇತ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಂತಾಗಿದ್ದು, ಸದ್ಯಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.
ಕಾಮೆಂಟ್ ಬಿಡಿ