ಜಿಲ್ಲಾ ಸುದ್ದಿಗಳು

ತಮಿಳುನಾಡಿನ ನೂತನ ಮುಖ್ಯಮಂತ್ರಿ, ಖ್ಯಾತ ನಟ ವಿಜಯ್‌ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ

ಉಡುಪಿ ಜೂನ್ 12: ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್‌ ಅವರು ಇಂದು (ಶುಕ್ರವಾರ) ಮಧ್ಯಾಹ್ನ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಸಿಎಂ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಮುಖ್ಯ ತಂತ್ರಿಗಳಾದ ನಿತ್ಯಾನಂದ ಅಡಿಗ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಸಿಎಂ ಬಂದಿದ್ದಾರೆ ಎಂದಾಕ್ಷಣ ಕೊಲ್ಲೂರಿನಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ, ಉಳಿದ ಭಕ್ತರಂತೆಯೇ ಅವರೂ ದೇವಿಯ ದರ್ಶನ ಪಡೆಯಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.


ತಮಿಳುನಾಡು ಸಿಎಂ ವಿಜಯ್‌ ಅವರು ಇಂದು ಮಧ್ಯಾಹ್ನ 3:00 ಗಂಟೆಗೆ ಕೊಲ್ಲೂರಿಗೆ ಆಗಮಿಸಲಿದ್ದಾರೆ. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿಯಿಂದ ತಂತ್ರಿಗಳು ಹಾಗೂ ಅರ್ಚಕ ವೃಂದಕ್ಕೆ ಲಿಖಿತ ಮತ್ತು ಮೌಖಿಕ ಆದೇಶಗಳು ಬಂದಿವೆ. ಸಿಎಂ ಅವರನ್ನು ದೇವಸ್ಥಾನದ ವತಿಯಿಂದ ಗೌರವಯುತವಾಗಿ ಬರಮಾಡಿಕೊಳ್ಳಬೇಕಾಗಿದ್ದು, ಸರ್ಕಾರಿ ಪ್ರೋಟೋಕಾಲ್ ಪ್ರಕಾರ ‘ಪೂರ್ಣಕುಂಭ ಸ್ವಾಗತ’ದೊಂದಿಗೆ ಅವರನ್ನು ದೇವಳದೊಳಗೆ ಕರೆತರಲಾಗುವುದು. ಬಳಿಕ ಅವರು ಮೂಕಾಂಬಿಕಾ ದೇವಿಯ ದರ್ಶನ ಪಡೆದು, ದೇವಸ್ಥಾನದ ಆವರಣ ವೀಕ್ಷಿಸಿ ತೆರಳಲಿದ್ದಾರೆ.

ಸಿಎಂ ಭೇಟಿಯ ಕುರಿತು ಮಾತನಾಡಿದ ತಂತ್ರಿ ನಿತ್ಯಾನಂದ ಅಡಿಗ, “ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಗಣ್ಯ ವ್ಯಕ್ತಿಗಳು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಪ್ರಕ್ರಿಯೆ ಇದೆ. ಆದರೆ ಕೊಲ್ಲೂರು ಕ್ಷೇತ್ರದಲ್ಲಿ ಅಂತಹ ಯಾವುದೇ ಪರಿಪಾಠವಿಲ್ಲ. ಯಾರೇ ವಿಐಪಿ ಬಂದರೂ ಸಾಮಾನ್ಯ ಪೂಜಾ ಪ್ರಕ್ರಿಯೆಗಳಷ್ಟೇ ನಡೆಯಲಿವೆ. ಒಂದು ವೇಳೆ ಮಹಾಮಂಗಳಾರತಿಯ ಸಮಯದಲ್ಲಿ ಸಿಎಂ ವಿಜಯ್‌ ಅವರು ದೇವಸ್ಥಾನದ ಒಳಗಿದ್ದರೆ, ಅವರಿಗೆ ಮಂಗಳಾರತಿ ವೀಕ್ಷಿಸುವ ಅವಕಾಶ ಸಿಗಲಿದೆ. ಇಂದು ಶುಕ್ರವಾರವಾಗಿರುವುದರಿಂದ ಸಂಜೆ ಪ್ರದೋಷ ಕಾಲಕ್ಕೂ ಮುನ್ನ ದೇವಿಯ ಉತ್ಸವ ಎಂದಿನಂತೆ ನಡೆಯಲಿದ್ದು, ಇದು ಸಿಎಂ ಆಗಮನಕ್ಕೋಸ್ಕರ ಮಾಡುತ್ತಿರುವ ವಿಶೇಷ ಸಿದ್ಧತೆಯಲ್ಲ” ಎಂದಿದ್ದಾರೆ.

“ತಮಿಳುನಾಡಿನಿಂದ ಕೊಲ್ಲೂರಿಗೆ ದೊಡ್ಡ ನಟರು, ಪ್ರಭಾವಿಗಳು ಬರುವುದು ಸರ್ವೇಸಾಮಾನ್ಯ. ಈ ಹಿಂದೆ ಸಂಗೀತ ಮಾಂತ್ರಿಕ ಇಳಯರಾಜ, ಡ್ರಮ್ಮರ್ ಶಿವಮಣಿ, ಮಾಜಿ ಸಿಎಂ ಜಯಲಲಿತಾ ಹಾಗೂ ಪ್ರಸ್ತುತ ಸಿಎಂ ಸ್ಟಾಲಿನ್ ಅವರ ಪತ್ನಿ ಮತ್ತು ಕುಟುಂಬದವರು ಬಂದು ದರ್ಶನ ಪಡೆದಿದ್ದಾರೆ. ಸಿಎಂ ವಿಜಯ್ ಅವರ ಕುಟುಂಬದವರೂ ಈ ಹಿಂದೆ ಹಲವು ಬಾರಿ ಬಂದು ಹೋಗಿದ್ದಾರೆ. ಆದರೆ ನಮ್ಮ ರಾಜ್ಯದ ಹೆಮ್ಮೆಯ ಸಾಧಕಿ ಸಾಲುಮರದ ತಿಮ್ಮಕ್ಕ ಅವರಂತಹ ಮಹನೀಯರು ಇಲ್ಲಿಗೆ ಬಂದಾಗ ಅದು ದೊಡ್ಡ ಸುದ್ದಿಯಾಗಲಿಲ್ಲ ಎನ್ನುವ ಬೇಸರ ನಮಗಿದೆ. ದೇವರ ಮೇಲೆ ವಿಶ್ವಾಸ ಇರುವ ಪ್ರತಿಯೊಬ್ಬರೂ ಮೂಕಾಂಬಿಕೆಯ ಸನ್ನಿಧಿಗೆ ಬರುತ್ತಾರೆ” ಎಂದು ಅಡಿಗರು ತಿಳಿಸಿದ್ದಾರೆ.

ಕಾಮೆಂಟ್ ಬಿಡಿ

Join Us