ಶಿಕ್ಷಣ

ಬೆಂಗಳೂರಿನ ಐಐಎಸ್‌ಸಿಗೆ ಬಂತು ಸೂಪರ್ ಕಂಪ್ಯೂಟಿಂಗ್ ಲ್ಯಾಬ್, ಸಂಶೋಧನೆಗೆ ಭರ್ಜರಿ ಬೂಸ್ಟ್ ನೀಡಿದ -ಶೆಫ್ಲರ್ ಇಂಡಿಯಾ

ಬೆಂಗಳೂರು: ದೇಶದ ಹೆಮ್ಮೆಯ ವಿಜ್ಞಾನ ಸಂಸ್ಥೆಯಾಗಿರುವ ಬೆಂಗಳೂರಿನ 'ಭಾರತೀಯ ವಿಜ್ಞಾನ ಸಂಸ್ಥೆʼ (ಐಐಎಸ್‌ಸಿ)ಯ ಕ್ಯಾಂಪಸ್‌ನಲ್ಲಿ ಇದೀಗ ಸಂಶೋಧನೆ ಮತ್ತು ನಾವೀನ್ಯತೆ ಮತ್ತಷ್ಟು ಹೈ-ಟೆಕ್ ಆಗಲಿದೆ. ಪ್ರಖ್ಯಾತ ಮೋಷನ್ ಟೆಕ್ನಾಲಜಿ ಕಂಪನಿಯಾದ 'ಶೆಫ್ಲರ್ ಇಂಡಿಯಾ', ಐಐಎಸ್‌ಸಿಯ 'ಫೌಂಡೇಶನ್ ಫಾರ್ ಸೈನ್ಸ್ ಇನ್ನೋವೇಶನ್ ಅಂಡ್ ಡೆವಲಪ್‌ಮೆಂಟ್' (ಎಫ್‌ಎಸ್‌ಐಡಿ) ಜೊತೆ ಕೈಜೋಡಿಸಿದ್ದು, ಅತ್ಯಾಧುನಿಕ ಕಂಪ್ಯೂಟೇಶನಲ್ ಲ್ಯಾಬ್ ಒಂದನ್ನು ಆರಂಭಿಸಿದೆ. ಶೈಕ್ಷಣಿಕ ಜ್ಞಾನ ಮತ್ತು ಕೈಗಾರಿಕಾ ತಂತ್ರಜ್ಞಾನವನ್ನು ಬೆಸೆಯುವ ಮಹತ್ವದ ಹೆಜ್ಜೆ ಇದಾಗಿದೆ.

ಹೊಸ ಲ್ಯಾಬ್‌ನ ವಿಶೇಷತೆ ಏನು?

ಸಂಶೋಧನೆ ಎಂದರೆ ನೂರಾರು ಲೆಕ್ಕಾಚಾರಗಳು ಹಾಗೂ ಬೃಹತ್ ಡೇಟಾ ವಿಶ್ಲೇಷಣೆ ಅನಿವಾರ್ಯ. ಇದಕ್ಕೆ ಸಹಾಯ ಮಾಡಲು ಈ ಲ್ಯಾಬ್‌ನಲ್ಲಿ 'ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್' (ಎಚ್‌ಪಿಸಿ) ಅಳವಡಿಸಲಾಗಿದೆ. ಇದರೊಂದಿಗೆ ಸುಧಾರಿತ ಲ್ಯಾಬ್ ಸ್ಪೇಸ್, ಇನ್-ರ್ಯಾಕ್ ಕೂಲಿಂಗ್ (ತಾಪಮಾನ ನಿಯಂತ್ರಣ), ಪವರ್ ಬ್ಯಾಕಪ್ ಮತ್ತು ಹೈಬ್ರಿಡ್ ಕಂಪ್ಯೂಟಿಂಗ್ ಕ್ಲಸ್ಟರ್‌ಗಳನ್ನು ನೀಡಲಾಗಿದೆ.

ಇದರಿಂದಾಗಿ ವಿಜ್ಞಾನಿಗಳು ಹೊಸ ವಸ್ತುಗಳ ಮೇಲೆ ಅಧ್ಯಯನ, ಎನರ್ಜಿ ಸಿಸ್ಟಮ್ಸ್ ಹಾಗೂ ಸುಸ್ಥಿರ ಚಲನಶೀಲತೆಯ ಕುರಿತಾದ ಸಂಕೀರ್ಣ ಲೆಕ್ಕಾಚಾರಗಳನ್ನು ಕಣ್ಣು ಮಿಟುಕುವಷ್ಟರಲ್ಲಿ ಅತಿ ವೇಗವಾಗಿ ಮತ್ತು ನಿಖರವಾಗಿ ಮಾಡಲು ಸಾಧ್ಯವಾಗಲಿದೆ.

ಯಾರಿಗೆಲ್ಲಾ ಸಿಗಲಿದೆ ಈ ಸೌಲಭ್ಯದ ಲಾಭ?

ಈ ಹೈ-ಟೆಕ್ ಸೌಲಭ್ಯ ಕೇವಲ ಐಐಎಸ್‌ಸಿ ಪ್ರಾಧ್ಯಾಪಕರಿಗಷ್ಟೇ ಸೀಮಿತವಲ್ಲ. ಕ್ಯಾಂಪಸ್‌ನಲ್ಲಿರುವ ಹಾಗೂ ಹೊರಗಿನ ಸ್ಟಾರ್ಟ್‌ಅಪ್‌ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಕೂಡ ಈ ಅತ್ಯಾಧುನಿಕ ಲ್ಯಾಬ್ ಅನ್ನು ಬಳಸಿಕೊಳ್ಳಬಹುದು. ಜೊತೆಗೆ, ಪಿಎಚ್‌ಡಿ ಮತ್ತು ಪದವಿ ವಿದ್ಯಾರ್ಥಿಗಳ ಭವಿಷ್ಯದ ಸಂಶೋಧನಾ ಯೋಜನೆಗಳಿಗೂ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.

ಭವಿಷ್ಯದ ಯೋಜನೆಗಳಿಗೆ ಮಾಸ್ಟರ್ ಅಗ್ರಿಮೆಂಟ್!

ಕೇವಲ ಲ್ಯಾಬ್ ಸ್ಥಾಪನೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಜಂಟಿ ಸಂಶೋಧನೆಗಳನ್ನು ಕೈಗೊಳ್ಳಲು ಐಐಎಸ್‌ಸಿ ಹಾಗೂ ಶೆಫ್ಲರ್ ಇಂಡಿಯಾ 'ಮಾಸ್ಟರ್ ರಿಸರ್ಚ್ ಅಗ್ರಿಮೆಂಟ್' (ಎಂಆರ್‌ಎ)ಗೆ ಸಹಿ ಹಾಕಿವೆ.

ಈ ಬಗ್ಗೆ ಮಾತನಾಡಿದ ಶೆಫ್ಲರ್ ಇಂಡಿಯಾದ ಎಂಡಿ ಮತ್ತು ಸಿಇಒ ಹರ್ಷ ಕದಮ್, "ಭಾರತದ ಉತ್ಪಾದನಾ ವಲಯವನ್ನು ಬಲಪಡಿಸಲು ಶೈಕ್ಷಣಿಕ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಪಾಲುದಾರಿಕೆ ಅತಿ ಮುಖ್ಯ. ನಮ್ಮ ಸಿಎಸ್‌ಆರ್ ಕಾರ್ಯಕ್ರಮವಾದ 'ಹೋಪ್' (HOPE) ಅಡಿಯಲ್ಲಿ ಐಐಎಸ್‌ಸಿಗೆ ಈ ಅತ್ಯಾಧುನಿಕ ಮೂಲಸೌಕರ್ಯ ಒದಗಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ಇದರಿಂದ ಸಂಶೋಧನೆಗಳ ವೇಗ ಮತ್ತು ಗುಣಮಟ್ಟ ಎರಡೂ ಹೆಚ್ಚಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಈ ಸೌಲಭ್ಯದಿಂದ ಐಐಎಸ್‌ಸಿ ಸಂಶೋಧನಾ ತಂಡಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಮತ್ತು ಕೈಗಾರಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ," ಎಂದು ಐಐಎಸ್‌ಸಿಯ ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಸಾಯಿ ಗೌತಮ್ ಗೋಪಾಲಕೃಷ್ಣನ್ ಹೇಳಿದರು.

"ಶೈಕ್ಷಣಿಕ ಕ್ಷೇತ್ರ ಮತ್ತು ಕೈಗಾರಿಕೆಗಳ ನಡುವೆ ಜಂಟಿ ಸಂಶೋಧನೆಗೆ ಈ ಹೊಸ ಮೂಲಸೌಕರ್ಯ ಸೇತುವೆಯಾಗಲಿದೆ. ಇದರಿಂದ ಭವಿಷ್ಯದ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಉನ್ನತ ಮಟ್ಟದ ಡೇಟಾ ಸಂಶೋಧನಾ ಸಾಮರ್ಥ್ಯ ಹೆಚ್ಚಾಗಲಿದೆ,” ಎಂದು ಎಫ್‌ಎಸ್‌ಐಡಿ  ನಿರ್ದೇಶಕ ಪ್ರೊ. ಬಿ. ಗುರುಮೂರ್ತಿ ಸಂತಸ ವ್ಯಕ್ತಪಡಿಸಿದರು.

ಒಟ್ಟಾರೆಯಾಗಿ, ಐಐಎಸ್‌ಸಿ ಮತ್ತು ಶೆಫ್ಲರ್ ಇಂಡಿಯಾದ ಈ ಪಾಲುದಾರಿಕೆಯು, ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ಕೈಗಾರಿಕೆಗಳಿಗೆ ಅಗತ್ಯವಿರುವ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ.

ಕಾಮೆಂಟ್ ಬಿಡಿ

Join Us