ಶಿಕ್ಷಣ

ಬಡ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ 'ಡಿಸ್ಕವರಿ ಸೈನ್ಸ್ ಸೆಂಟರ್' ಆರಂಭ, ಏನಿದರ ವಿಶೇಷತೆ

ಬೆಂಗಳೂರು:  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಅತ್ಯಂತ ಅವಶ್ಯಕ. ಆದರೆ ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇವುಗಳ ಪ್ರಾಯೋಗಿಕ ಕಲಿಕೆ ಮರೀಚಿಕೆಯಾಗಿಯೇ ಉಳಿದಿದೆ. ಈ ಅಂತರವನ್ನು ಸರಿಪಡಿಸುವ ನಿಟ್ಟಿನಲ್ಲಿ ಜಾಗತಿಕ ಟೆಕ್ ಕಂಪನಿ ಎಚ್‌ಸಿಎಲ್‌ನ ಸಿಎಸ್‌ಆರ್ ವಿಭಾಗವಾದ 'ಎಚ್‌ಸಿಎಲ್ ಫೌಂಡೇಶನ್' ಮತ್ತು ಖ್ಯಾತ ಲರ್ನಿಂಗ್ ಕಂಪನಿ 'ಪಿಯರ್ಸನ್' ಮಹತ್ವದ ಹೆಜ್ಜೆ ಇಟ್ಟಿವೆ.

ಬೆಂಗಳೂರಿನಲ್ಲಿ ಅವಕಾಶ ವಂಚಿತ ವಿದ್ಯಾರ್ಥಿಗಳಿಗಾಗಿಯೇ ಮೀಸಲಾದ ಸುಸಜ್ಜಿತ ‘ಡಿಸ್ಕವರಿ ಸೈನ್ಸ್ ಸೆಂಟರ್’ ಅನ್ನು ಸಂಸ್ಥೆಗಳು ಉದ್ಘಾಟಿಸಿವೆ. ಇದೊಂದು ಅತ್ಯಾಧುನಿಕ ಎಸ್‌ಟಿಇಎಂ (STEM) ಲ್ಯಾಬ್ ಆಗಿದ್ದು, ಮಕ್ಕಳಿಗೆ ಕೇವಲ ಥಿಯರಿ ಪಾಠ ಮಾಡದೆ, ಸ್ವತಃ ತಾವೇ ಪ್ರಯೋಗಗಳನ್ನು ಮಾಡಿ ಕಲಿಯುವ ಅವಕಾಶವನ್ನು ಒದಗಿಸುತ್ತದೆ.

ಕೇಂದ್ರದ ವಿಶೇಷತೆಗಳೇನು?

ಈ 'ಡಿಸ್ಕವರಿ ಸೈನ್ಸ್ ಸೆಂಟರ್' ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಬೆಳೆಸಲಿದೆ. ಕೇವಲ ಒಂದು ದಿನದ ತರಬೇತಿಯಲ್ಲದೆ, ವರ್ಷವಿಡೀ ಸ್ಟೆಮ್ ಕ್ಲಬ್‌ಗಳು, ವಿಜ್ಞಾನ ಸ್ಪರ್ಧೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಪ್ರತಿ ವರ್ಷ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೇರ ಲಾಭವಾಗಲಿದ್ದು, ಅವರಲ್ಲಿ ಭವಿಷ್ಯದ ಕೌಶಲ್ಯಗಳು ಬೆಳೆಯಲಿವೆ. ನೋಯ್ಡಾದಲ್ಲಿ ಈಗಾಗಲೇ ಯಶಸ್ವಿಯಾಗಿರುವ ಇದೇ ಮಾದರಿಯ ಕೇಂದ್ರದ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ಇದನ್ನು ಆರಂಭಿಸಲಾಗಿದೆ.


ಈ ಉಪಕ್ರಮದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಪಿಯರ್ಸನ್ ಇಂಡಿಯಾದ ಅಧ್ಯಕ್ಷ ವಿಶಾಲ್ ಗುಪ್ತಾ, “ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶ ಸಿಗಬೇಕು. ಅವಕಾಶ ವಂಚಿತ ಸಮುದಾಯದ ಮಕ್ಕಳಿಗೆ ತಮ್ಮ ಕೌಶಲ್ಯಗಳನ್ನು ಅನ್ವೇಷಿಸಲು ಈ ಕೇಂದ್ರವು ಒಂದು ವೇದಿಕೆಯಾಗಲಿದೆ. ಗುಣಮಟ್ಟದ ಶಿಕ್ಷಣ ಎಲ್ಲಿ ಅತಿ ಹೆಚ್ಚು ಅಗತ್ಯವಿದೆಯೋ ಅಲ್ಲಿಗೆ ಅದನ್ನು ತಲುಪಿಸಲು ನಾವು ಎಚ್‌ಸಿಎಲ್ ಫೌಂಡೇಶನ್ ಜೊತೆ ಕೈಜೋಡಿಸಿದ್ದೇವೆ,” ಎಂದರು.

ಎಚ್‌ಸಿಎಲ್ ಟೆಕ್‌ನ ಸಿಎಸ್‌ಆರ್ ಗ್ಲೋಬಲ್ ಹೆಡ್ ಆಗಿರುವ ನಿಧಿ ಪುಂಧಿರ್ ಪ್ರತಿಕ್ರಿಯಿಸಿ, “ಡಿಜಿಟಲ್ ಕಲಿಕಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ, ಅತ್ಯಂತ ಹಿಂದುಳಿದ ವಿದ್ಯಾರ್ಥಿಗಳಿಗೂ ಭವಿಷ್ಯದ ಕೌಶಲ್ಯಗಳನ್ನು ಒದಗಿಸುತ್ತಿದ್ದೇವೆ” ಎಂದು ತಿಳಿಸಿದರು.

ವಿಶೇಷ ಚೇತನ ಮಕ್ಕಳಿಗೂ ಆಸರೆ

ಈ 'ಡಿಸ್ಕವರಿ ಸೈನ್ಸ್ ಸೆಂಟರ್' ಕೇವಲ ಒಂದು ದಿನದ ಯೋಜನೆಯಲ್ಲ. ಇದೇ ವರ್ಷದ ಆರಂಭದಲ್ಲಿ, ಎಚ್‌ಸಿಎಲ್ ಫೌಂಡೇಶನ್ ಮತ್ತು ಪಿಯರ್ಸನ್ ಸಂಸ್ಥೆಗಳು ಹಿಂದುಳಿದ ಸಮುದಾಯದ 400 ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಬೋರ್ಡ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಹೊಂದಿರುವ 'ಸ್ಮಾರ್ಟ್ ಕ್ಲಾಸ್‌ರೂಮ್'ಗಳನ್ನು ನಿರ್ಮಿಸಿಕೊಟ್ಟಿದ್ದವು.

ವಿಶೇಷವೆಂದರೆ, ದೃಷ್ಟಿದೋಷ ಇರುವ ಹಾಗೂ ಇತರ ವಿಶೇಷ ಚೇತನ ಮಕ್ಕಳಿಗೆ ತರಗತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವಿಶೇಷ ಸಾಧನಗಳನ್ನು ಒದಗಿಸಲಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು ಮತ್ತು ಅವರು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಮೂಲಕ, ಒಂದು ಸಮಗ್ರ ಕಲಿಕಾ ವಾತಾವರಣವನ್ನು ಸೃಷ್ಟಿಸುವಲ್ಲಿ ಈ ಕಾರ್ಪೊರೇಟ್ ಸಂಸ್ಥೆಗಳು ಯಶಸ್ವಿಯಾಗಿವೆ.

ಕಾಮೆಂಟ್ ಬಿಡಿ

Join Us