ಜಿಲ್ಲಾ ಸುದ್ದಿಗಳು

ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಿಸಿ ಪ್ರಸಂಶೆಗೆ ಪಾತ್ರರಾದ ಗೆಳೆಯರ ಬಳಗ ಸೇವಾ ಸಂಸ್ಥೆ (ರಿ) ನೈನಾಡು

ನೈನಾಡು: ಸುಮಾರು ನಾಲ್ಕುವರೆ ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೆಳೆಯರ ಬಳಗ ಸೇವಾ ಸಂಸ್ಥೆ (ರಿ), ಮತ್ತು ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್ ಪಾಲನ ಸಮಿತಿ, ನೈನಾಡು ವತಿಯಿಂದ ನಿರ್ಮಿಸಲಾದ ಸಂಪರ್ಕ ರಸ್ತೆ ಇಂದು ಉದ್ಘಾಟನೆಗೊಂಡಿದೆ. ಸುಮಾರು 40 ವರ್ಷಗಳಿಂದ ಸಂಪರ್ಕ ರಸ್ತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ನಿನ್ಯಾರು ಮತ್ತು ಕೊಳಕ್ಕೆ ಬೈಲು ಪ್ರದೇಶದ ನಿವಾಸಿಗಳಿಗೆ ಈ ರಸ್ತೆ ಮಹತ್ತರ ಸೌಲಭ್ಯ ಒದಗಿಸಿದೆ.  ಈ ರಸ್ತೆಗೆ ಗೆಳೆಯರ ಬಳಗ ಸೇವಾ ಸಂಸ್ಥೆ ವತಿಯಿಂದ ರೂಪಾಯಿ 4:50 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದ್ದು ,ನಿನ್ನ್ಯಾರು ಹಾಗೂ ಕೊಳಕ್ಕೆ ಬೈಲು ಬಳಿ ನಾಮ ಫಲಕವನ್ನು ಅಳವಡಿಸಲಾಯಿತು.

ನಿನ್ಯಾರು–ಕೊಳಕ್ಕೆ ಬೈಲು ಪ್ರದೇಶದ ಹಲವಾರು ಮನೆಗಳಿಗೆ ರಸ್ತೆ ಸಂಪರ್ಕವಿಲ್ಲದೆ ಹಲವು ವರ್ಷಗಳಿಂದ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಚಾರ ತಿಳಿದು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗೆಳೆಯರ ಬಳಗದ ಗೌರವಾಧ್ಯಕ್ಷರಾದ ನೆಲ್ವಿಸ್ಟರ್ ಪಿಂಟೊ ಅವರ ಮುಂದಾಳತ್ವದಲ್ಲಿ ಹೋರಾಟ ಸಮಿತಿ ರಚಿಸಿ, ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್ ಧರ್ಮ ಗುರುಗಳು ಅನಿಲ್ ಅವಿಲ್ಡ್ ಲೋಬೊ ಮತ್ತು ಪಾಲನ ಸಮಿತಿಯ ಸದಸ್ಯರು, ಗ್ರಾಮ ಪಂಚಾಯತ್ ಪಿಲಾತ್ತಬೆಟ್ಟು ವತಿಯಿಂದ ರಸ್ತೆ ಸಂಪರ್ಕಕ್ಕಾಗಿ ನಿರಂತರ ಕಾನೂನು ಹೋರಾಟ ನಡೆಸಲಾಯಿತು.

ತದನಂತರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಅಮ್ಟೂರ್ ಅವರ ನೇತ್ರತ್ವದಲ್ಲಿ ರಾಜಿ ಸಂಧಾನ ನಡೆಯಿತು. ಇದರ ಫಲವಾಗಿ 14 ಅಡಿ ಅಗಲ ಮತ್ತು 600 ಮೀಟರ್ ಉದ್ದದ ರಸ್ತೆ ನಿರ್ಮಾಣ ಸಾಧ್ಯವಾಯಿತು. ಈ ರಸ್ತೆಗೆ ದಿನೇಶ್ ಅಮ್ಟೂರ್ ರವರು ಅತ್ಯಂತ ಶೀಘ್ರದಲ್ಲಿ ಕಾಂಕ್ರೀಟೀಕರಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಊರ ಸಮಸ್ತರಿಗೆ ಭರವಸೆಯನ್ನು ನೀಡಿರುತ್ತಾರೆ.

ಈ ರಸ್ತೆಗೆ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಲಾರ್ಡ್ ಬಿಷಪ್ ಅವರು 5 ಸೆಂಟ್ಸ್ ರಸ್ತೆಗಾಗಿ ಮತ್ತು 16 ಸೆಂಟ್ಸ್ ಜಾಗವನ್ನು ಶ್ಯಾಮರಾಯ ಅವರ ಹೆಸರಿಗೆ ರಸ್ತೆಗೆ ಬಿಟ್ಟ ವರ್ಗ ಜಾಗದ ಬದಲಾಗಿ ಕಡಿಮೆ ಮೊತ್ತಕ್ಕೆ ನೀಡಲು ಒಪ್ಪಿಕೊಂಡಿರುತ್ತಾರೆ, ಜಾರಪ್ಪ ಸಪಲ್ಯ 1.5 ಸೆಂಟ್ಸ್ ರಸ್ತೆಗೆ ಮತ್ತು 7:50 ಸೆಂಟ್ಸ್ ಜಾಗವನ್ನು ಶ್ಯಾಮರಾಯ ಆಚಾರ್ಯ ಅವರಿಗೆ ಉಚಿತವಾಗಿ ರಸ್ತೆಗೆ ಬಿಟ್ಟ ವರ್ಗ ಸ್ಥಳದ ಬದಲು ನೀಡಲು ಒಪ್ಪಿಕೊಂಡಿರುತ್ತಾರೆ ಹಾಗೂ ಅನಿಲ್ ಮೋರಸ್ ಅವರು 2 ಸೆನ್ಸ್ ವರ್ಗ ಜಾಗವನ್ನು ರಸ್ತೆಗಾಗಿ ನೀಡಿರುತ್ತಾರೆ. ಹಾಗೂ ಶ್ಯಾಮರಾಯ ಆಚಾರಿ ಮತ್ತು ಕುಟುಂಬಸ್ಥರು ಸುಮಾರು 23 ಸೆನ್ಸ್ ವರ್ಗ ಸ್ಥಳ ರಸ್ತೆಗಾಗಿ ನೀಡಿರುತ್ತಾರೆ. ಇದರ ಬದಲು ಅವರಿಗೆ ಗೆಳೆಯರ ಬಳಗದ ವತಿಯಿಂದ 3.5 ಲಕ್ಷ ವೆಚ್ಚದಲ್ಲಿ ಬೇರೆ ಜಾಗವನ್ನು  ನೀಡುವ ಒಪ್ಪಂದ ಮಾಡಿಕೊಂಡರು. ಈ ಮೂಲಕ ಚರ್ಚ್ ಪಾಲನ ಸಮಿತಿ, ಗೆಳೆಯರ ಬಳಗ ಸೇವಾ ಸಂಸ್ಥೆ ಹಾಗೂ ಸ್ಥಳ ದಾನಿಗಳು ಸಮಸ್ತ ಊರವರ ಮೆಚ್ಚುಗೆಗೆ ಪಾತ್ರರಾದರು.

ರಸ್ತೆ ಉದ್ಘಾಟನಾ ಸಂದರ್ಭದಲ್ಲಿ ಫಾ. ಅನಿಲ್ ಅವಿಲ್ಡ್ ಲೋಬೋ ರವರು ಈ ರಸ್ತೆ ಹಲವಾರು ಕುಟುಂಬಗಳು ಬೆಸೆಯಲು, ಕೃಷಿ ಚಟುವಟಿಕೆಗೆ ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯೋಗವಾಗಲಿದೆ ಎಂದರು ಹಾಗೂ ಶ್ರಮ ಪಟ್ಟ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಪಂಚಾಯತ್ ಸದಸ್ಯರಾದ ಶಂಕರ ಶೆಟ್ಟಿ ಅವರು ಇಂತಹ ಒಳ್ಳೆಯ ಸೇವಾ ಸಂಸ್ಥೆ ಇದ್ದರೆ ಊರು ಅಭಿವೃದ್ಧಿ ವೇಗ ಪಡೆಯಲಿದೆ ಎಂದರು. ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾ ಹೆಗಡೆ ಅವರು ಮಾತನಾಡಿ ಗೆಳೆಯರ ಬಳಗದ ಯುವಕರಿಗೆ ಅಭಿನಂದನೆಯನ್ನು ಸಲ್ಲಿಸಿದರು ಮತ್ತು ಪೊಲೀಸ್ ಠಾಣೆ, ಹೈಕೋರ್ಟ್ಗಳಲ್ಲಿ ಪ್ರಕರಣ ದಾಖಲಾದರೂ ಎಲ್ಲರೂ ಒಗ್ಗೂಡಿ  ರಾಜಿ ಸಂಧಾನ ನಡೆಸಿ ರಸ್ತೆ ನಿರ್ಮಿಸಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರಾದ ಶಾರದಾ, ಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ಹೆಗ್ಡೆ, ಪಂಚಾಯತ್ ಸದಸ್ಯರಾದ ಪುಷ್ಪಲತಾ ಸಾಲಿಯನ್, ಧರ್ಮ ಗುರುಗಳಾದ ಜೋಸೆಫ್ ಡಿಸೋಜಾ, ಐ ಸಿ ವೈ ಎಂ ಬೆಳ್ತಂಗಡಿ  ಪ್ರಾಂತ್ಯ ಅಧ್ಯಕ್ಷರಾದ ಜೈಸನ್ ರೊಡ್ರಿಗಸ್, ಎಲಿಯಾಸ್ ಕ್ರಾಸ್ತಾ, ಪ್ರಮುಖರಾದ ಮೋಹನ್ ಸಾಲಿಯನ್, ವಿಕ್ಟರ್ ಡೀಸೊಜ, ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.  ಗೆಳೆಯರ ಬಳಗ ಸೇವಾ ಸಂಸ್ಥೆಯ ಅಧ್ಯಕ್ಷ  ಡಾನ್ ಪ್ರವೀಣ್ ಕ್ರಾಸ್ತ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಗೌರವಾಧ್ಯಕ್ಷರಾದ ನೆಲ್ವಿಸ್ಟರ್ ರವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

ಈ ಸಮಾಜಮುಖಿ ಕಾರ್ಯಕ್ಕಾಗಿ ಗ್ರಾಮಸ್ಥರು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರ್, ಧರ್ಮ ಗುರುಗಳು ಅನಿಲ್ ಅವಿಲ್ಡ್ ಲೋಬೊ, ಸ್ಥಳ ದಾನಿಗಳಿಗೆ ಮತ್ತು ಗೆಳೆಯರ ಬಳಗ ಸೇವಾ ಸಂಸ್ಥೆಯ ಸದಸ್ಯರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.


ಕಾಮೆಂಟ್ ಬಿಡಿ

Join Us