ದೈವದ ನರ್ತನ ಸೇವೆಯಲ್ಲಿ ಜಾತಿ ಪ್ರಮಾಣಪತ್ರ! ಪಂಬದ ಸಮುದಾಯಗಳಿಗೆ ಮಾಡಿರುವ ಅವಮಾನ
ಮಂಗಳೂರು: ಮಂಗಳೂರಿನ ಬೋಳೂರಿನ ಜಾರಂದಾಯ ದೈವಸ್ಥಾನದಲ್ಲಿ ನಡೆದ ಬಂಟ ದೈವದ ನರ್ತನ ಸೇವೆಯಲ್ಲಿ ಕ್ರೈಸ್ತ ಯುವಕ ಭಾಗಿಯಾಗಿದ್ದಾನೆ ಎಂಬ ಆರೋಪವನ್ನು ದೈವ ನರ್ತಕ ಸೂರಜ್ ಚಿಪ್ಪಾರು ಮತ್ತು ಸುಶಾಂತ್ ಬಂಗೇರ ಅವರು ಗಿ ನಿರಾಕರಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಸುಶಾಂತ್ ಪಂಬದ ಜಾತಿಗೆ ಸೇರಿದ ಹಿಂದೂ ಆಗಿದ್ದು, ಅದಕ್ಕೆ ಪೂರಕವಾದ ಜಾತಿ ಪ್ರಮಾಣಪತ್ರ ತಮ್ಮಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಸಂಶೋಧಕಿ ಡಾ. ರತಿ ಅವರು ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು. ಇದು ದೈವಾರಾಧನೆಗೆ ಮಾಡಿದ ಅಪಚಾರ ಎಂದು ಅವರು ದೂರಿದ್ದರು. ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಇತ್ತೀಚೆಗೆ ಪಂಬದ ಸಮುದಾಯ ಡಾ. ರತಿ ಎಂಬವರು ಮಾಡಿರುವ ಆರೋಪವನ್ನು ನಿರಾಕರಿಸಿದ ಅವರು, ಸುಶಾಂತ್ ಬಂಗೇರ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎಂಬುದಕ್ಕೆ ಅಧಿಕೃತ ದಾಖಲೆಯನ್ನು ಮಾಧ್ಯಮದ ಎದುರು ನೀಡಬೇಕು. ನಮ್ಮಲ್ಲಿ ಅವರು ಪಂಬದ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ಅಗತ್ಯ ಕಾನೂನು ದಾಖಲೆಗಳಿವೆ ಎಂದರು.
ದೈವ ನರ್ತಕ ಸೂರಜ್ ಚಿಪ್ಪಾರು ಮಾತನಾಡಿ, “ಸುಶಾಂತ್ ತಂದೆ ಗಣೇಶ್ ಪದವಿನಂಗಡಿ ಅವರು ಕ್ರೈಸ್ತ ಮಹಿಳೆಯನ್ನು ಮದುವೆಯಾಗಿರುವುದು ನಿಜ. ಆದರೆ, ಮದುವೆಯ ನಂತರ ಆಕೆ ಹಿಂದೂ ಸಂಪ್ರದಾಯವನ್ನು ಅಳವಡಿಸಿಕೊಂಡು ಪಂಬದ ಜನಾಂಗದ ನೀತಿ-ನಿಯಮಗಳನ್ನೇ ಪಾಲಿಸುತ್ತಿದ್ದಾರೆ. ಸುಶಾಂತ್ ಹುಟ್ಟಿನಿಂದಲೂ ಹಿಂದೂ ಜೀವನ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ” ಎಂದು ತಿಳಿಸಿದರು. ಕಳೆದ 13 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾರಕೂರಿನಿಂದ ಮಂಗಳೂರುವರೆಗೆ ಬಂಟ, ಪಿಲಿಚಾಮುಂಡಿ ನರ್ತನ ಮಾಡಿಕೊಂಡು ಪ್ರಶಂಸೆಗೂ ಪಾತ್ರರಾಗಿದ್ದಾರೆ. ಹಾಗಿದ್ದರೂ ಅವರು ಕ್ರಿಶ್ಚಿಯನ್ ಎಂಬ ಆರೋಪ ಹೊರಿಸಿರುವುದು ಪಂಬದ ಸಮುದಾಯ ಮಾತ್ರವಲ್ಲದೆ, ದೈವಾರಾಧನೆಯ ನರ್ತನ ಸೇವೆಯಲ್ಲಿ ತೊಡಗಿಕೊಂಡಿರುವ ಎಲ್ಲಾ ಸಮುದಾಯಗಳಿಗೆ ಮಾಡಿರುವ ಅವಮಾನ ಎಂದು ಸೂರಜ್ ಚಿಪ್ಪಾರು ಹೇಳಿದರು.
ಚಿಪ್ಪಾರು ಗಣೇಶ್ ಪಂಬದ ಮಾತನಾಡಿ, ಬೋಳೂರಿನಲ್ಲಿ ನಡೆದ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ. ದೈವದ ಅಪ್ಪಣೆಯಂತೆಯೇ ಶ್ರದ್ಧಾಭಕ್ತಿಯಿಂದ ಸೇವೆ ನಡೆಸಲಾಗಿದೆ. ನಮ್ಮ ಜನಾಂಗದ ವೃತ್ತಿ ಗೌರವಕ್ಕೆ ಧಕ್ಕೆ ತರುವ ಕೆಲಸ ನಾವು ಮಾಡಿಲ್ಲ” ಎಂದು ತಿಳಿಸಿದರು. ಸಂತ್ರಸ್ತ ಯುವಕ ಸುಶಾಂತ್ ಬಂಗೇರ ಮಾತನಾಡಿ, “ನನ್ನನ್ನು ಕ್ರೈಸ್ತ ಎಂದು ಕರೆದು ಅವಮಾನ ಮಾಡಲಾಗಿದೆ. ಇದರಿಂದ ನನ್ನ ಭವಿಷ್ಯ ಮತ್ತು ವೃತ್ತಿಗೆ ತೊಂದರೆಯಾಗುತ್ತಿದೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.
ನಾನು ಮತ್ತು ನನ್ನ ಮಕ್ಕಳು ಯಾವುದೇ ಚರ್ಚ್‌ನಲ್ಲಿ ದಾಖಲಾತಿ ಹೊಂದಿದ್ದಲ್ಲಿ ಅದನ್ನು ಆರೋಪ ಮಾಡಿದವರು ತಂದು ತೋರಿಸಲಿ. ಈ ರೀತಿಯ ಆರೋಪಗಳಿಂದಾಗಿ ನನ್ನ ಮಗ ಕೆಲಸ ಇಲ್ಲದೆ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ. ರತಿ ಎಂಬವರು ನನ್ನ ಹಿರಿಯ ಪುತ್ರನಿಂದ ನೇಮಕ ಕಟ್ಟಿಸಿದ್ದಾರೆ. ಈಗ ಯಾವುದೋ ವೈಯಕ್ತಿಕ ದ್ವೇಷದಿಂದ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಸವಿತಾ ಅವರು ಹೇಳಿದರು.
ಕಾಮೆಂಟ್ ಬಿಡಿ