ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ವ್ಯವಹಾರಿಕ ಸಂಬಂಧವೂ ಇಲ್ಲ:ಬಿ.ವೈ. ವಿಜಯೇಂದ್ರ
ಧರ್ಮಸ್ಥಳ : ವಿಧಾನಪರಿಷತ್ ಚುನಾವಣೆಯ ಅಡ್ಡ ಮತದಾನದ ಬೆನ್ನಲ್ಲೇ ಸೃಷ್ಟಿಯಾಗಿದ್ದ ‘ಆಣೆ-ಪ್ರಮಾಣ’ದ ರಾಜಕಾರಣ ಹಾಗೂ ಸ್ವಪಕ್ಷದವರ ಆಪಾದನೆಗಳ ಚರ್ಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತಿಶ್ರೀ ಹಾಡಿದ್ದಾರೆ. “ನಾನು ಭಾವನಾತ್ಮಕ ವ್ಯಕ್ತಿ, ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೆ. ಆದರೆ ಪಕ್ಷದ ಹಿರಿಯರ ಸಲಹೆಯಂತೆ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಹಾಗೂ ಆಣೆ-ಪ್ರಮಾಣದ ನಿರ್ಧಾರವನ್ನು ಕೈಬಿಟ್ಟಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು. ಮೂರು ದಿನಗಳ ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಅಡ್ಡ ಮತದಾನದ ಹಿಂದೆ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವಿನ ವ್ಯವಹಾರಿಕ ಸಂಬಂಧ ಹಾಗೂ ಆತ್ಮೀಯತೆ ಕಾರಣ ಎಂಬ ಸ್ವಪಕ್ಷೀಯರ ಆರೋಪಕ್ಕೆ ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮವರೇ ಇಂತಹ ಕೀಳು ಮಟ್ಟದ ಚರ್ಚೆ ಮಾಡುತ್ತಿರುವುದು ಬೇಸರ ತಂದಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆಶೀರ್ವಾದದಿಂದ ನಾನು ಅಧ್ಯಕ್ಷನಾಗಿದ್ದೇನೆ. ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಆತ್ಮೀಯತೆ ಇಲ್ಲ, ವ್ಯವಹಾರಿಕ ಸಂಬಂಧವೂ ಇಲ್ಲ. ಇಂತಹ ಅಪಪ್ರಚಾರ ಮಾಡುವವರಿಗೆ ಭಗವಂತನೇ ಒಳ್ಳೆಯದು ಮಾಡಲಿ” ಎಂದರು.
ಕಾಮೆಂಟ್ ಬಿಡಿ