ಕಿನ್ನಿಗೋಳಿಯ: ಅಲ್ಲಿ ಕ್ರೈಸ್ತರಲ್ಲ, ಮುಸ್ಲಿಮರಿದ್ದರೂ ಬಿಜೆಪಿಯನ್ನೇ ಆಯ್ಕೆ ಮಾಡುತ್ತಿದ್ದರು
ಅಲ್ಲಿ ಕ್ರೈಸ್ತರಲ್ಲ, ಮುಸ್ಲಿಮರಿದ್ದರೂ ಬಿಜೆಪಿಯನ್ನೇ ಆಯ್ಕೆ ಮಾಡುತ್ತಿದ್ದರು!
ಹೌದು, ಯಾರು ಕೂಡಾ ಜೀವನಪೂರ್ತಿ ಒಂದೇ ಪಾರ್ಟಿಗೆ ವೋಟ್ ಹಾಕ್ತೀವಿ ಅಂತಾ ಹಠ ಹಿಡಿದು ಕೂತಿಲ್ಲ. ಅಧಿಕಾರ ಇದ್ದಾಗ ಕೆಲಸ ಮಾಡದೇ ಹೋದರೆ, ಅಂತಹ ಪಕ್ಷ ಯಾವುದಾದರೂ ಸರಿ ಅದನ್ನು ಎಡಗಾಲಲ್ಲಿ ಒದೆಯುವ ತಾಕತ್ತು ಜನರಿಗಿದೆ. ವಿಶೇಷವಾಗಿ ಕರಾವಳಿಯಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ತಮ್ಮ ವೋಟ್ ಕಾಂಗ್ರೆಸ್‌ಗೆ ಹಾಕೋದಾಗಿ ಹಠ ಹಿಡಿದು ಕೂತಿಲ್ಲ. ಅದಕ್ಕೆ ಉದಾಹರಣೆಯೇ ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಎಲೆಕ್ಷನ್. ಬಜಪೆಯಲ್ಲಂತೂ ಕಾಂಗ್ರೆಸ್ ಆಡಿದ ಆಟಕ್ಕೆ ಅಲ್ಲಿನ ಅಲ್ಪಸಂಖ್ಯಾತರು ಸರಿಯಾದ ಪಾಠ ಕಲಿಸಿದ್ದಾರೆ. ಇನ್ನು ಕಿನ್ನಿಗೋಳಿಯ ತಾಳಿಪಾಡಿ-16ನೇ ವಾರ್ಡ್‌ನಲ್ಲಿ ಕ್ರೈಸ್ತರು ಕಾಂಗ್ರೆಸ್‌ಗೆ ಪಾಠ ಕಲಿಸಿದ ಪರಿಣಾಮ 12 ವೋಟ್‌ನಿಂದ ಕಾಂಗ್ರೆಸ್‌ನ ಹಿರಿಯ ಮುಖಂಡರು ಮುಗ್ಗರಿಸುವಂತಾಗಿದೆ. ಅಲ್ಲೊಂದು ಭೀಕರ (ಡ್ರೈನೇಜ್) ಸಮಸ್ಯೆ ಇದೆ ಎಂದು ಗೊತ್ತಾದ ಮೇಲೂ ಕೆಲಸ ಮಾಡದೇ ಚುನಾವಣೆಗೆ ಹೋಗೋದೆ ಮೂರ್ಖತನ (ಈ ಹಿಂದೆ ಕಿನ್ನಿಗೋಳಿಯಲ್ಲಿ ಗ್ರಾಮ ಪಂಚಾಯತ್ ಆಡಳಿತವಿತ್ತು, ಆಗ ಈ ಭಾಗದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಕ್ರೈಸ್ತ ಸಮುದಾಯದ ಸದಸ್ಯರಿದ್ದರು). 70% ಕ್ರೈಸ್ತರು ಇದ್ದಾರೆ ಅಂದ ಮಾತ್ರಕ್ಕೆ ಕಾಂಗ್ರೆಸ್‌ಗೆ ವೋಟ್ ಹಾಕಬೇಕೆನ್ನುವುದು ಮತ್ತೊಂದು ಮೂರ್ಖತನ.
ಬಹುತೇಕ ಕ್ರೈಸ್ತರು ವೋಟ್‌ನಿಂದ ದೂರವುಳಿದಿರುವ ಕಾರಣ, ಮತದಾನದ ಪ್ರಮಾಣವೂ ಆ ವಾರ್ಡ್‌ನಲ್ಲಿ ಕಡಿಮೆಯಾಗಿತ್ತು (ಶೇಕಡಾ 60.10). ಸದ್ಯ ಕಣದಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಬೇಕೆಂದರೆ ಅಲ್ಲಿದ್ದವರಿಗೆ ಪರ್ಯಾಯ ಕಂಡಿದ್ದೇ ಬಿಜೆಪಿ. ಅದಕ್ಕೆ ತಕ್ಕಂತೆ ಶಾಸಕರು, ಹಿರಿಯ ನಾಯಕರು ನೀಡಿದ ಭರವಸೆಯಂತೆ ಯುವಕ ಪ್ರಣೀಕ್ ಅವರನ್ನು 12 ವೋಟ್‌ನ ಅಂತರದಲ್ಲಿ ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲಿ ಕ್ರೈಸ್ತರಲ್ಲ, ಮುಸ್ಲಿಮರಿದ್ದರೂ ಅವರ ಆಯ್ಕೆ ಬಿಜೆಪಿಯೇ ಆಗಿರುತ್ತಿತ್ತೋ ಏನೋ!. ಕಾರಣ, ಆ ವಾರ್ಡ್‌ನಲ್ಲಿರುವ ತ್ಯಾಜ್ಯ ಸಮಸ್ಯೆ ಅಷ್ಟೊಂದು ಘೋರವಾದದ್ದು. ಪ್ರಣೀಕ್ ಇವರ ಅವಧಿಯಲ್ಲಿ ಈ ಸಮಸ್ಯೆ ಬಗೆಹರಿಸುವಂತಾದರೆ ಒಳ್ಳೆಯದು. ಒಂದು ವೇಳೆ ಅದರಲ್ಲಿ ವಿಫಲರಾದರೆ 5 ವರ್ಷದ ನಂತರ ಬಿಜೆಪಿಗೂ ಅದೇ ಗತಿ ಬರಬಹುದು. ಇಲ್ಲಿ ಪಾರ್ಟಿ ಖಂಡಿತಾವಾಗಿಯೂ ಮುಖ್ಯವಲ್ಲ. ಬದಲಿಗೆ ಕೆಲಸವಾಗಬೇಕಷ್ಟೇ. ಊರ ಸಮಸ್ಯೆಯನ್ನು ಬಗೆಹರಿಸುವವನೇ ನಿಜವಾದ ನಾಯಕ ಅನ್ನೋದು ಪ್ರತಿ ಬಾರಿಯೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಬೀತು ಆಗುತ್ತಲೇ ಬಂದಿದೆ.
ಮಂಗಳೂರು ಮಹಾನಗರ ಪಾಲಿಕೆಗೆ ಕೊನೆಯದಾಗಿ ಚುನಾವಣೆ ನಡೆದಿದ್ದು 2019 ರಲ್ಲಿ. ಅಂದು ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್, ತಿರುವೈಲ್ ವಾರ್ಡ್‌ನಲ್ಲಿ ಬಿಜೆಪಿಯಿಂದ ಪಕ್ಷಾಂತರ ಮಾಡಿದ್ದ ಅಭ್ಯರ್ಥಿಗೆ ಮಣೆ ಹಾಕಿತ್ತು. ಇದು ಸ್ಥಳೀಯ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಏನೇ ಆದ್ರೂ, ಅಲ್ಲಿರೋ ನಿರ್ಣಾಯಕ ಮತದಾರರಾದ ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಇನ್ಯಾವುದಕ್ಕೆ ವೋಟ್ ಹಾಕ್ತಾರೆ ಅಂತಾ ಕೈ ನಾಯಕರು ಭಾವಿಸಿಕೊಂಡಿದ್ದರು. ಫಲಿತಾಂಶ ಬರುವ ದಿನ ಚಿತ್ರಣವೇ ಬದಲಾಗಿತ್ತು. ಕೋಮುಸೂಕ್ಷ್ಮ ಪ್ರದೇಶದಲ್ಲಿ ಹಸಿರು, ಕೇಸರಿ ಧ್ವಜಗಳು ಒಂದಾಗಿದ್ದವು. ಸಾಮಾನ್ಯವಾಗಿ ಈದ್ ಮಿಲಾದ್, ರಾತೀಬ್, ಉರೂಸ್‌ನಂತಹ ಕಾರ್ಯಕ್ರಮದಲ್ಲಿ ಕಾಣುತ್ತಿದ್ದ ಮುಸ್ಲಿಮರು ಬಳಸುವ ಹಸಿರು ಧ್ವಜ ಅಂದು ಬಿಜೆಪಿ ಅಭ್ಯರ್ಥಿ ಹೇಮಲತಾ ರಘು ಸಾಲಿಯಾನ್ ವಿಜಯೋತ್ಸವದ ಮೆರವಣಿಗೆಯಲ್ಲಿ ಕಂಡು ಬಂದಿತ್ತು. ಮುಸ್ಲಿಮರೆಲ್ಲರೂ ಬಹಿರಂಗವಾಗಿಯೇ ಹೇಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ಗೆಲ್ಲಿಸಿಕೊಟ್ಟಿದ್ದರು.
ಹಾಗಾಗಿ ರಾಷ್ಟ್ರೀಯ ಪಕ್ಷಗಳು ಭ್ರಮೆಯಿಂದ ಹೊರಬರಬೇಕಿದೆ. ಅದು ಬಿಜೆಪಿಯಾದರೂ ಅಷ್ಟೇ, ಹಿಂದೂಗಳೆಲ್ಲರೂ ತನಗೆ ವೋಟ್ ಹಾಕ್ತಾರೆ ಅನ್ನೋ ಆ ಭ್ರಮಾಲೋಕದಿಂದ ಹೊರಬರಬೇಕು. ಯಾಕಂದ್ರೆ, ಪ್ರಬುದ್ಧ ಮತದಾರ ಯಾವತ್ತು ಬೇಕಿದ್ದರೂ ಬದಲಾವಣೆ ಬಯಸಬಹುದು. ನಿಮ್ಮಯ ಕಾರ್ಯವೈಖರಿ, ವರ್ತನೆ ಇಷ್ಟವಾಗದಿದ್ದಲ್ಲಿ ಪರ್ಯಾಯವೂ ಅಗತ್ಯ ಎನಿಸಬಹುದು. ಇಲ್ಲೂ ಅಷ್ಟೇ ಆಗಿದೆ. ಮುಸ್ಲಿಮರು ಮತ್ತು ಕ್ರೈಸ್ತರು ಕಾಂಗ್ರೆಸ್‌ಗಷ್ಟೇ ವೋಟ್ ಹಾಕ್ತೀವಿ ಅನ್ನೋ ಹಾಗೆ ಹಠಕ್ಕೆ ಬಿದ್ದಿಲ್ಲ.
-ಇರ್ಷಾದ್ ಕಿನ್ನಿಗೋಳಿ
ಕಾಮೆಂಟ್ ಬಿಡಿ