ಕ್ರೈಂ

ಬೈಕಂಪಾಡಿ :ಗೋಲ್ಡ್ ಬಿಸ್ಕತ್‌ಗಾಗಿ ಸಿನಿಮೀಯ ಮಾದರಿಯ ದರೋಡೆ ಕೃತ್ಯ

ಮಂಗಳೂರು : ಮಂಗಳೂರಿನ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿ ವಿಕಾಸ್ ಮತ್ತು ಅವರ ಕುಟುಂಬವನ್ನು ಅಡ್ಡಗಟ್ಟಿ ನಡೆಸಲಾದ ಸಿನಿಮೀಯ ಮಾದರಿಯ ದರೋಡೆ ಕೃತ್ಯವು ಪಕ್ಕಾ ಸ್ಕೆಚ್‌ ಹಾಕಿ ನಡೆಸಲಾದ ಪ್ಲಾನ್ಡ್ ಆಪರೇಷನ್ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಇದೀಗ ಬಂಟ್ವಾಳದಲ್ಲಿ ದರೋಡೆಕೋರರು ಅಪಹರಿಸಿದ್ದ ಸ್ವಿಫ್ಟ್ ಡಿಸೈರ್ ಕಾರು ಪತ್ತೆಯಾಗಿದ್ದು, ಹಲವು ಆಘಾತಕಾರಿ ಸುಳಿವುಗಳು ಸಿಕ್ಕಿವೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಪನೆ ಎಂಬ ಸ್ಥಳದ ಬಳಿ ದರೋಡೆಕೋರರು ಕದ್ದೊಯ್ದಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ದರೋಡೆಕೋರರ ಅಸಲಿ ಪ್ಲಾನ್ ಬಯಲಾಗಿದೆ. ಕಾರಿನ ಸೀಟ್ ಕವರ್‌ಗಳು ಹಾಗೂ ಡಿಕ್ಕಿಯ ಕವರ್‌ಗಳನ್ನು ಹರಿದು ಹಾಕಿ, ಕಾರಿನ ಮೂಲೆ ಮೂಲೆಯನ್ನೂ ಜಾಲಾಡಲಾಗಿದೆ. ಕಾರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ‘ಗೋಲ್ಡ್ ಬಿಸ್ಕತ್’  ಅಡಗಿಸಿಡಲಾಗಿದೆ ಎಂಬ ಪಕ್ಕಾ ಮಾಹಿತಿ ದರೋಡೆಕೋರರಿಗೆ ಇತ್ತು ಎಂಬ ಅನುಮಾನವನ್ನು ಇದು ದೃಢಪಡಿಸಿದೆ.

ಈ ದರೋಡೆ ಕೃತ್ಯದಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ, ದರೋಡೆಕೋರರು ವ್ಯಾಪಾರಿ ವಿಕಾಸ್, ಅವರ ಪತ್ನಿ ಮತ್ತು ಮಗ ಧರಿಸಿದ್ದ ಮೈಮೇಲಿನ ಚಿನ್ನಾಭರಣಗಳನ್ನು ಮುಟ್ಟುವ ಗೋಜಿಗೆ ಹೋಗಿಲ್ಲ. ಕೇವಲ ಕಾರನ್ನೇ ಪ್ರಮುಖ ಟಾರ್ಗೆಟ್ ಮಾಡಿದ್ದರು. ಮುಂಜಾನೆ 4 ಗಂಟೆಗೆ ಬೈಕಂಪಾಡಿ ಬಳಿ ವಿಕಾಸ್ ಅವರನ್ನು ಕಾರಿನಿಂದ ಹೊರಗೆ ಎಳೆದು ಹಾಕಿ, ಕಾರಿನೊಳಗೆ ಚಿನ್ನದ ಬಿಸ್ಕತ್‌ಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ಬಳಿಕ ಅಲ್ಲಿಂದ ಎರಡು ಕಿಲೋಮೀಟರ್ ದೂರದವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿ, ಪತ್ನಿ ಮತ್ತು ಮಗನನ್ನು ದಾರಿಯಲ್ಲಿ ಇಳಿಸಿ ಕಾರಿನ ಸಮೇತ ಪರಾರಿಯಾಗಿದ್ದರು.

ಮಹಾರಾಷ್ಟ್ರದಲ್ಲಿ ಮದುವೆ ಮುಗಿಸಿ ಕೇರಳಕ್ಕೆ ಮರಳುತ್ತಿದ್ದ ವಿಕಾಸ್ ಅವರ ಕಾರಿನಲ್ಲಿ ಕೇವಲ 20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣವಿತ್ತೇ ಅಥವಾ ಅವರು ಚಿನ್ನದ ಉದ್ಯಮಿಯಾಗಿರುವುದರಿಂದ ಕಾರಿನ ರಹಸ್ಯ ಜಾಗದಲ್ಲಿ ಬೇರೆ ದೊಡ್ಡ ಮಟ್ಟದ ಚಿನ್ನ ಸಾಗಾಟ ಮಾಡುತ್ತಿದ್ದರೇ ಎಂಬ ನಿಟ್ಟಿನಲ್ಲಿ ಪಣಂಬೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.ದರೋಡೆಕೋರರು ಎರಡು ಇನ್ನೋವಾ ಮತ್ತು ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದು, ಉದ್ಯಮಿಯ ಚಲನವಲನದ ಬಗ್ಗೆ ಇಂಚಿಂಚೂ ಮಾಹಿತಿ ಇದ್ದವರೇ ಈ ಕೃತ್ಯದ ಮಾಸ್ಟರ್ ಮೈಂಡ್ ಇರಬಹುದು ಎಂದು ಶಂಕಿಸಲಾಗಿದೆ.

ಕಾಮೆಂಟ್ ಬಿಡಿ

Join Us