ಡೆತ್ ನೋಟ್: ಹಿಂದುತ್ವ ಸಂಘಟನೆಯಲ್ಲಿದ್ದರೂ ನನ್ನ ಜೊತೆ ಯಾರೂ ಇಲ್ಲ ಅಮ್ಮ
ಸುರತ್ಕಲ್: ಬಾಲಕಿ ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಾನು ಸಂಘ ಪರಿವಾರದಲ್ಲಿದ್ದರೂ ಅವರಾರೂ ಸಹಾಯ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ''ಅಮ್ಮ ನನಗೆ ಈ ತಪ್ಪು ನೋಡಿಕೊಂಡು ಬದುಕಲು ಇಷ್ಟವಿಲ್ಲ. ನನಗೆ ಇನ್ನು ಬದುಕಲು ಆಗುವುದಿಲ್ಲ ಎಂದು ತಿಳಿಯಿತು ಅಮ್ಮ. ಇದಕ್ಕೆ ಕಾರಣ ಯಾರೆಂದು ನಿಮಗೂ ಗೊತ್ತು, ಮಾಡಿದವರಿಗೂ ಗೊತ್ತು. ನಿಮಗೆ ತುಂಬಾ ಕಷ್ಟ ಕೊಟ್ಟೆ ಅಮ್ಮ.
ತಪ್ಪು ಮಾಡಿದವ ಆರಾಮವಾಗಿದ್ದಾನೆ. ನನ್ನ ಜೀವನದ ಹಾಗೆ ನನ್ನ ತಂಗಿಯ ಜೀವನ ಆಗಬಾರದು. ಅವಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ನಂಬಿದ್ದ ಎಲ್ಲರೂ ಕೈಕೊಟ್ಟರು. ಅದು ದೇವರು ಆಗಿರಲಿ, ದೈವವೇ ಆಗಿರಲಿ, ಮನುಷ್ಯರೇ ಆಗಿರಲಿ, ನನಗೆ ಯಾರೂ ಇಲ್ಲ ಅಮ್ಮ, ಹಿಂದುತ್ವ ಸಂಘಟನೆಯಲ್ಲಿದ್ದರೂ ನನ್ನ ಜೊತೆ ಯಾರೂ ಇಲ್ಲ ಅಮ್ಮ'' ಎಂದು ಬಾಲಕಿ ಅಸಹಾಯಕಳಾಗಿ ತನ್ನ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾಳೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ
17 ವರ್ಷದ ಬಾಲಕಿಯೊಬ್ಬಳು ಜು.23ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅನೀಶ್ ಪೂಜಾರಿ ಎಂಬಾತನ ವಿರುದ್ಧ ಪೊಕ್ಸ್, ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕಿ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ 'ನಾನು ತಪ್ಪು ಮಾಡಿದ್ದೇನೆ.ಆದರೆ ನನಗೆ ಮೋಸ ಮಾಡಿದ ವ್ಯಕ್ತಿ ಈಗ ಸಂತೋಷವಾಗಿದ್ದಾನೆ'' ಎಂದು ಉಲ್ಲೇಖಿಸಿದ್ದಾಳೆ. ಅಲ್ಲದೆ, ತಾನು ಹಿಂದೂತ್ವ ಸಂಘಟನೆಯಲ್ಲಿದ್ದರೂ ಆ ಸಂಘಟನೆಯವರು ತನಗೆ ಯಾವುದೇ ಸಹಾಯ ಮಾಡಲಿಲ್ಲ'' ಎಂದು ಬರೆದುಕೊಂಡಿದ್ದಾಳೆ. ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ತನಿಖೆ ಹಾಗೂ ಸಾಕ್ಷ್ಯಾಧಾರಗಳ ದೃಷ್ಟಿಯಿಂದ ವೈದ್ಯರು ಭ್ರೂಣದ ಮಾದರಿಯನ್ನು ಸಂಗ್ರಹಿಸಿದ್ದು, ಡಿಎನ್ಎ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಕಾಮೆಂಟ್ ಬಿಡಿ