ಮೂಡುಬಿದಿರೆಯ ಕೋಟಿ -ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಇರುವ ವಿಶೇಷ ಅತ್ಯಾಕರ್ಷಣೆ
ಮೂಡುಬಿದಿರೆಯ ಕೋಟಿ- ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಅದರದ್ದೇ ಆದ ವಿಶೇಷ ಆಕರ್ಷಣೆಯಿದೆ. ಕರಾವಳಿ ಜಿಲ್ಲೆಗಳ ಕಾರ್ಕಳದ ಮೀಯರಿನ ಲವ -ಕುಶ ಮತ್ತು ಮೂಡುಬಿದಿರೆಯ ಕೋಟಿ -ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಇರುವ ಅತ್ಯಾಕರ್ಷಣೆ ಬೇರಾವ ಕಂಬಳಕ್ಕೂ ಇಲ್ಲವಾಗಿದೆ.
ಮೂಡಬಿದಿರೆಯ ಕೋಟಿ ಚೆನ್ನಯ್ಯ ಕಂಬಳದ ಪ್ರಧಾನ ರೂವಾರಿ ಕೆ. ಗುಣಪಾಲ ಕಡಂಬ . ಅದಕ್ಕೂ ಹಿಂದೆ ನಾರಂಪಾಡಿಯ ಕಂಬಳ ಗದ್ದೆಯಲ್ಲಿ ಜಯ -ವಿಜಯ ಕಂಬಳ ಏರ್ಡುತ್ತಿತ್ತು,ಕ್ರಮೇಣ ಅದು ನಿಲ್ಲುವ ಪರಿಸ್ಥಿತಿಗೆ ಬಂದ ನಂತರ ಮೂಡುಬಿದಿರೆಯಲ್ಲಿ ಕೂಡಾ ಸಾರ್ವಜನಿಕ ಸಮಿತಿಯ ಕಂಬಳ ಸ್ಥಾಪನೆಯಾಗಬೇಕು ಎಂದು ಮೂಡುಬಿದಿರೆಯ ಪ್ರಭಾವಿ ವ್ಯಕ್ತಿಗಳೊಡನೆ ಸಮಾಲೋಚನೆ ಕೈಗೊಂಡು ಕಾರ್ಯೋನ್ಮುಖರಾದವರು ಕೆ. ಗುಣಪಾಲು ಕಡಂಬ.
ಕಡಲಕೆರೆ ನಿಸರ್ಗಧಾಮದ ಬಳಿಯಲ್ಲಿಯೇ ಕಂಬಳ ನಿರ್ಮಾಣವಾಗುವುದು ಬಹಳ ಸೂಕ್ತ ಎಂದು ಸ್ಥಳವನ್ನು ಆರಿಸಿಕೊಂಡು ಅದಕ್ಕೆ ಪೂರಕವಾದ ದಾಖಲೆ ಪತ್ರಗಳ ತಯಾರಿ ಮಾಡುವಲ್ಲಿ ಕೆ. ಗುಣಪಾಲ ಕಡಂಬರವರು ಬಹಳಷ್ಟು ಸಾಹಸ ಕೆಲಸ ಮಾಡಿದ್ದರು.ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಆ ಜಾಗದಲ್ಲಿ ಅರಣ್ಯ ಬೆಳೆಸುವ ,ಪರಿಸರಕ್ಕೆ ಹಸಿರು ಮರಗಿಡಗಳನ್ನು ಕೊಡುವ ಕೆಲವೊಂದು ಯೋಜನೆಗಳನ್ನೂ ಮುಂದಿಡಲಾಗಿತ್ತು. ಸ್ಥಳೀಯವಾಗಿ ಅರಣ್ಯಾಧಿಕಾರಿಗಳು ಒಪ್ಪಿಗೆ ಕೊಡುವಲ್ಲಿ ಮೀನ ಮೇಷ ಎಣಿಸುತ್ತಿರುವುದು ,ಕಿರುಕುಳ ಕೊಡುತ್ತಿರುವುದು ಕಂಬಳ ನಿರ್ಮಾಣಕ್ಕೆ ಹಿನಡೆಯಾಗಿ ಕಂಡುಬರುತ್ತಲೇ ಇತ್ತು. ಆಗ ಸರಕಾರದ ಅರಣ್ಯ ಖಾತೆಯಲ್ಲಿ ಮುಖ್ಯಕಾರ್ಯದರ್ಶಿಯಾಗಿದ್ದ ಸತ್ಯಮೂರ್ತಿಯವರು ಮೂಡುಬಿದಿರೆಯ ಜೈನ್ ಜ್ಯೂನಿಯರ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಅಧ್ಯಾಪಕರಾಗಿ ಕೆಲವು ಸಮಯ ದುಡಿದಿದ್ದರು. ಕೆ. ಎ. ಎಸ್. ತೇರ್ಗಡೆಯಾದ ಅವರು ಮುಂದೆ ಸರಕಾರದಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆಗೆ ತೊಡಗಿದರು. ಕಾಲೇಜಿನಲ್ಲಿ ಸಹೋದ್ಯೋಗಿಯಾಗಿದ್ದ ಸತ್ಯಮೂರ್ತಿಯವರಿಂದ ಕಂಬಳ ನಿರ್ಮಾಣಕ್ಕೆ ಸೂಕ್ತವಾದ ಬೆಂಬಲ ದೊರಕಿದ್ದೇ ಕಡಂಬರ ಸಾಧನೆಗೆ ಸಿಕ್ಕ ಜಯವಾಯಿತು.
ಮೂಡುಬಿದಿರೆಯ ಕೋಟಿ ಚೆನ್ನಯ್ಯ ಕಂಬಳ ನಿರ್ಮಾಣದಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಪಾತ್ರವು ಕೂಡಾ ಅಷ್ಟೇ ಪ್ರಧಾನವಾಗಿತ್ತು. ಆಗಿನ ಶಾಸಕ ಕೆ. ಅಭಯಚಂದ್ರ ಜೈನ್ ಅವರ ಉಸ್ತುವಾರಿಯಲ್ಲಿಯೆ ನಡೆಯುತ್ತ ಬಂದ ಕಂಬಳ ಉಮಾನಾಥ ಕೋಟ್ಯಾನ್ ಶಾಸಕನಾಗಿ ಆಯ್ಕೆಯಾದ ಮೇಲೆ ಉಸ್ತುವಾರಿ ಬದಲಾಯಿತು. ನಂತರ ಬಂದ ಕೋಟ್ಯಾನ್ ಅವರು ಕೂಡಾ ಕೋಟಿ ಚೆನ್ನಯ್ಯ ಕಂಬಳ ಕರೆಯ ವಿಚಾರದಲ್ಲಾಗಲಿ,ಮಂಜೊಟ್ಟಿ (ಕರೆಯಲ್ಲಿ ಓಡಿಬರುವ ಕೋಣಗಳು ಒಟವನ್ನು ನಿಲ್ಲಿಸಿ ಮೇಲಕ್ಕೆ ಬರುವ ಜಾಗ) ಎದುರಿನ ಸಭಾ ವೇದಿಕೆಯ ನಿರ್ಮಾಣದಲ್ಲಾಗಲಿ ತುಂಬಾ ಕೆಲಸ ಮಾಡಿದ್ದಾರೆ. ಮಂಗಳೂರಿನ ಎಂ. ಸಿ. ಎಫ್. ಅವರ ದೇಣಿಗೆಯನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ವೇದಿಕೆ ಅಭೂತಪೂರ್ವವಾಗಿದೆ. ಸಾಂಪ್ರಾದಯಿಕ ಮನೆತನದ ದೊಡ್ಡ ಚಾವಡಿಯ ಹಾಗೆ ರಚಿಸಲ್ಪಟ್ಟಿದೆ. ಜೋಡು ಕರೆಯ ರಚನೆಯಲ್ಲೂ ಅಗತ್ಯ ಬದಲಾವಣೆಗಳು ಮಾಡಬೇಕಾಗಿ ಬಂದಿರುವ ಬೇಡಿಕೆಯನ್ನು ಶಾಸಕ ಕೋಟ್ಯಾನ್ ನೆರವೇರಿಸಿದ್ದಾರೆ. ಇಲ್ಲಿನ ಕಂಬಳದ ವಿಶೇಷತೆಗಳಲ್ಲಿ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನ ,ರಾತ್ರಿಯ ಊಟದ ವ್ಯವಸ್ಥೆ ಬಹಳ ಪ್ರಶಂಸನೀಯವಾಗಿದೆ.ಕೇವಲ ಪೊಟ್ಟು (ಕೆಂಪು)ಚಹ ಮತ್ತು ಅವಲಕ್ಕಿ ಸಜ್ಜಿಗೆ ವಿತರಿಸದೆ ಬಹಳ ಅಚ್ಚುಕಟ್ಟಾದ ಆಹಾರ ತಿಂಡಿಗಳನ್ನು ಮಾಡಲಾಗುತ್ತದೆ. ವಿ ಐ ಪಿ ಎಂದಷ್ಟೇ ಅಲ್ಲ ,ಪ್ರತಿಯೊಬ್ಬನಿಗೂ ಒಂದೇ ರೀತಿಯಲ್ಲಿ ಉಪಾಹಾರ ನೀಡಲಾಗುತ್ತಿರುವುದು ಶ್ಲಾಘನೀಯ.
ಕಂಬಳದ ಓಟಗಾರರು,ಪ್ರೇಕ್ಷಕರು ಮುಂತಾದವರು ಎಲ್ಲರೂ ಉಣ್ಣುವಂತೆ ಗಂಜಿ ಊಟದ ವ್ಯವಸ್ಥೆಯಿರುವುದು ಬಹುಶಃ ಮೂಡುಬಿದಿರೆಯ ಕಂಬಳದಲ್ಲಿ ಮಾತ್ರ ಅನಿಸುತ್ತದೆ. ಶಾಸಕನ ಹೆಚ್ಚಿನ ಜವಾಬ್ದಾರಿಗಳನ್ನು ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಶ್ರದ್ಧೆಯಿಂದ,ನಿಷ್ಠೆಯಿಂದ ಮಾಡಿ ನೆರವೇರಿಸುತ್ತಿರುವುದೇ ಈ ಕಂಬಳದ ಖ್ಯಾತಿ ಮತ್ತು ಗೆಲುವಿನ ರಹಸ್ಯ.
ಮೂಡುಬಿದಿರೆ ಪೇಟೆಯಿಂದ ಬೈಪಾಸ್ ರಿಂಗ್ ರೋಡಿನತ್ತ ತೆರಳುವಾಗ ಮತ್ತು ಕಾರ್ಕಳ ರಸ್ತೆಯ ಆಲಂಗಾರು ಬಸ್ ನಿಲ್ದಾಣದಿಂದ ಬೆಳ್ಮಣ್ ರಸ್ತೆಯಲ್ಲಿ ಒಂದು ಕಿ. ಮೀ. ನಷ್ಟು ಮುಂದುವರಿದಾಗ ಎಡಕ್ಕೆ ಕಂಬಳ ಕಾಣುತ್ತದೆ. ಹಾಲಿ ಸಂಸದ ಕ್ಯಾ।ಬೃಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕಂಬಳ ಸಮಿತಿಯಲ್ಲಿ ಗೌರವ ಅಧ್ಯಕ್ಷರಾಗಿದ್ದು ,ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷನಾಗಿದ್ದಾರೆ. ಕೆ. ಗುಣಪಾಲ ಕಡಂಬ ಪ್ರಧಾನ ಕಾರ್ಯದರ್ಶಿ,ಭಾಸ್ಕರ ಕೋಟ್ಯಾನ್ ಇರ್ವತ್ತೂರು ಕೋಶಾಧಿಕಾರಿಯಾಗಿದ್ದಾರೆ. ಈ ಸರ್ತಿಯದ್ದು 23ನೇ ವರ್ಷದ ಕಂಬಳವಾಗಿದ್ದ ದಿನಾಂಕ 31-01-2026ರ ಶನಿವಾರ ಬೆಳಿಗ್ಗೆ 7ಘಂಟೆಗೆ ಪ್ರಾರಂಭವಾಗಲಿದೆ. ಆ ಪರಿಸರಕ್ಕೆ ‘ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ‘ಎಂಬ ನಾಮಕರಣ ಮಾಡಲಾಗಿದೆ.
-ವಿ. ಕೆ. ವಾಲ್ಪಾಡಿ
ಕಾಮೆಂಟ್ ಬಿಡಿ