ಇದು ನನ್ನ ಕಥೆ... ಕಾದಂಬರಿಯಲ್ಲ! ಸಾಧನೆಯ ಹಿಂದೆ ಮರೆಯಾದ ಹೋರಾಟದ ಬದುಕಿನ ಪುಟಗಳು
ಕೆಲವು ಕಥೆಗಳು ಪುಸ್ತಕಗಳಲ್ಲಿ ಹುಟ್ಟುತ್ತವೆ. ಕೆಲವು ಕಥೆಗಳು ಕಲ್ಪನೆಯಲ್ಲಿ ಮೂಡುತ್ತವೆ. ಆದರೆ ಕೆಲವು ಕಥೆಗಳು ಬದುಕಿನ ಗಾಯಗಳಿಂದ ಬರೆಯಲ್ಪಡುತ್ತವೆ. ಇದು ಅಂತಹ ಕಥೆ. ಇದು ನನ್ನ ಬದುಕಿನ ಕಥೆ. ಕಾದಂಬರಿಯಲ್ಲ.
ಇಂದು ಹಲವರು ನನ್ನನ್ನು ಪತ್ರಕರ್ತನಾಗಿ ಗುರುತಿಸುತ್ತಾರೆ. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಲು ಆರಂಭಿಸಿದ ನಂತರ ಮಾತ್ರ "ಹರೀಶ್ ಮುಲ್ಕಿ" ಎಂಬ ಹೆಸರನ್ನು ಕೆಲವರು ನೆನಪಿಸಿಕೊಂಡರು. ಕೆಲವರಲ್ಲಿ ಜಾತಿ ಬಾಂಧವ್ಯದ ಮಾತುಗಳು ಉಕ್ಕಿ ಹರಿಯಲು ಆರಂಭವಾಯಿತು.
ಆದರೆ ನನ್ನ ಪ್ರಶ್ನೆ ಒಂದೇ...
ನಾನು ಹಸಿವಿನೊಂದಿಗೆ ಹೋರಾಡುತ್ತಿದ್ದಾಗ ನೀವು ಎಲ್ಲಿದ್ದಿರಿ?
ನನ್ನ ಕುಟುಂಬ ಬಡತನದೊಂದಿಗೆ ಬದುಕಿಗಾಗಿ ಹೋರಾಡುತ್ತಿದ್ದಾಗ ಆ ಜಾತಿ ಬಾಂಧವ್ಯ ಎಲ್ಲಿತ್ತು?
ನಾವು ಬಡತನದಲ್ಲಿದ್ದಾಗ ನಮ್ಮದೇ ಜಾತಿಯ ಅನೇಕ ಬಾಂಧವರಿಂದ ನಮ್ಮ ಮನೆಗೆ ಮದುವೆಯ ಆಹ್ವಾನವೂ ಬರಲಿಲ್ಲ. ಆ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಮ್ಮೆ ನಮ್ಮ ಸಮಾಜದ ಸಂಘದಲ್ಲಿ ಪುಸ್ತಕ ವಿತರಣೆ ನಡೆಯುತ್ತಿತ್ತು. ತಪ್ಪಾಗಿ ಎರಡು ಪುಸ್ತಕಗಳು ಹೆಚ್ಚು ಬಂದಿದ್ದವು. ಮರುದಿನ ಬೆಳಗ್ಗೆ ಮನೆಗೆ ಬಂದು, ಈಗಾಗಲೇ ಬೈಂಡ್ ಮಾಡಿಸಿದ್ದ ಪುಸ್ತಕವನ್ನೇ ತೆಗೆದುಕೊಂಡು ಹೋದರು. ಆ ದಿನ ನನ್ನ ಕೈಯಿಂದ ತೆಗೆದುಕೊಂಡದ್ದು ಕೇವಲ ಒಂದು ಪುಸ್ತಕವಲ್ಲ; ನನ್ನ ಆತ್ಮಗೌರವದ ಒಂದು ತುಣುಕನ್ನು ಕೂಡ ಕಿತ್ತುಕೊಂಡಿದ್ದರು.
ಆ ಘಟನೆ ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ. ಆದರೆ ನನ್ನ ಜೀವನದಲ್ಲಿ ಅದಕ್ಕಿಂತಲೂ ದೊಡ್ಡ ನೋವನ್ನು ಕೊಟ್ಟ ಮತ್ತೊಂದು ಘಟನೆ ಇದೆ.
ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಂಗಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ನಮ್ಮ ಮನೆಯ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಒಂದು ಹೊತ್ತಿನ ಊಟಕ್ಕೂ ಲೆಕ್ಕ ಹಾಕಬೇಕಾದ ದಿನಗಳು. ನಮ್ಮ ಕಿಲ್ಪಾಡಿ ಗ್ರಾಮದ ಹತ್ತಿರದ ಗ್ರಾಮದ ದೇವಸ್ಥಾನದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತಿತ್ತು. ಶಾಲೆಯ ಮಕ್ಕಳೆಲ್ಲ ಅಲ್ಲಿಗೆ ಊಟಕ್ಕೆ ಹೋಗುತ್ತಿದ್ದೆವು. ನಮಗೆ ಅದು ಸಾಮಾನ್ಯ ಊಟವಲ್ಲ. ಹೊಟ್ಟೆ ತುಂಬ ತಿನ್ನುವ ಅಪರೂಪದ ಅವಕಾಶ. ಅದರಲ್ಲೂ ಪಾಯಸ ಸಿಗುತ್ತದೆ ಎಂದರೆ ಅದು ಹಬ್ಬವೇ. ಆ ದಿನವೂ ನಾವು ಇಬ್ಬರೂ ಸಂತೋಷದಿಂದ ಹೋಗಿದ್ದೆವು. ನೆಲದಲ್ಲಿ ಕುಳಿತು ಊಟಕ್ಕೆ ಕಾಯುತ್ತಿದ್ದೆವು. ಅನ್ನ ಬಡಿಸಿದರು. ನಂತರ ಪಾಯಸ ಬಡಿಸಲು ಆರಂಭಿಸಿದರು. ನನಗೆ ಪಾಯಸ ಹಾಕಿದರು. ಆದರೆ ನನ್ನ ತಂಗಿಯ ಸರದಿ ಬಂದಾಗ,"ಇವಳಿಗೆ ಮೊದಲೇ ಹೆಚ್ಚು ಅನ್ನ ಹಾಕಿದರಿಂದ ಹೆಚ್ಚಾಯಿತು. ಅನ್ನ ಉಳಿಯಿತು ಎಂದು ಹೇಳಿ ಅವಳಿಗೆ ಪಾಯಸ ಹಾಕಲಿಲ್ಲ. ಆ ಕ್ಷಣದಲ್ಲಿ ನನ್ನ ತಂಗಿಯ ಕಣ್ಣಲ್ಲಿ ಮೂಡಿದ ನಿರಾಸೆ, ಅಸಹಾಯಕತೆ ಮತ್ತು ಮೌನದ ನೋವು ನನ್ನ ಹೃದಯವನ್ನು ಚೂರುಚೂರು ಮಾಡಿತು. ಊಟ ಮಾಡದೆ ಎದ್ದು ಹೋಗಲೂ ಬಿಡಲಿಲ್ಲ. ಮತ್ತೆ ಎರಡನೇ ಪಂಕ್ತಿಯಲ್ಲಿ ಜನರು ಕುಳಿತರು. ಕೊನೆಗೆ ಅವಳ ಅನ್ನವನ್ನು ನಾನು ಹಾಕಿ ಕೊಂಡು ಮುಗಿದಸಿದೆ, ಅವಳಿಗೆ ಪಾಯಸ ಹಾಕಿಸಿಕೊಂಡು ಅಲ್ಲಿಂದ ಹೊರಟೆವು.
ಅದು ಆ ದೇವಸ್ಥಾನದಲ್ಲಿ ನಾನು ಮಾಡಿದ ಕೊನೆಯ ಊಟ. ಆ ದಿನದ ನಂತರ ಮತ್ತೆ ಆ ದೇವಸ್ಥಾನದಲ್ಲಿ ಊಟ ಮಾಡುವ ಮನಸ್ಸು ನನಗೆ ಬರಲೇ ಇಲ್ಲ. ಆ ಘಟನೆ ನನಗೆ ಹಸಿವಿನ ಬೆಲೆ, ಬಡತನದ ನೋವು ಮತ್ತು ಆತ್ಮಗೌರವದ ಮೌಲ್ಯವನ್ನು ಕಲಿಸಿತು. ನಾನು ಒಂದು ನಿರ್ಧಾರ ಮಾಡಿದೆ. ಗೌರವವು ಜಾತಿಯಿಂದ ಸಿಗುವುದಿಲ್ಲ. ಗೌರವವು ಮನುಷ್ಯನ ವ್ಯಕ್ತಿತ್ವದಿಂದ ಸಿಗುತ್ತದೆ. ನಮ್ಮ ಬದುಕಿನ ಅತ್ಯಂತ ಕಷ್ಟದ ಸಮಯದಲ್ಲಿ ನಮ್ಮ ಜೊತೆ ನಿಂತವರು ನಮ್ಮ ಅಮ್ಮ-ಅಪ್ಪ. ತಮ್ಮ ಹಸಿವನ್ನೂ ಮರೆತು, ನಮ್ಮ ಭವಿಷ್ಯಕ್ಕಾಗಿ ಹಗಲಿರುಳು ದುಡಿದರು. ಅವರ ತ್ಯಾಗವೇ ಇಂದು ನಾನು ನಿಂತಿರುವ ಅಡಿಪಾಯ.
ಅದೇ ಸಮಯದಲ್ಲಿ ನಮ್ಮ ನೋವಿಗೆ ಸ್ಪಂದಿಸಿದವರು ಅನೇಕ ಬೇರೆ ಜಾತಿಯ ಒಳ್ಳೆಯ ಹೃದಯದ ಮನುಷ್ಯರು. ಅವರು ನನ್ನನ್ನು ಕಲಿಸಿದ ಪಾಠ ಒಂದೇ—ಒಳ್ಳೆಯತನಕ್ಕೆ ಜಾತಿಯಿಲ್ಲ. ಸಹಾಯಕ್ಕೆ ಧರ್ಮವಿಲ್ಲ. ಮಾನವೀಯತೆಗೆ ಯಾವುದೇ ಗಡಿ ಇಲ್ಲ. ಇಂದು ಯಾರೇ ಕಷ್ಟದಲ್ಲಿದ್ದರೂ, ಅವರ ಜಾತಿ, ಧರ್ಮ, ಭಾಷೆ ಅಥವಾ ಹಿನ್ನೆಲೆಯನ್ನು ನಾನು ನೋಡುವುದಿಲ್ಲ. ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ನಂಬಿದ್ದೇನೆ.
ಯಾಕೆಂದರೆ... ನನ್ನ ಬದುಕು ನನಗೆ ಕಲಿಸಿದ ದೊಡ್ಡ ಸತ್ಯವೇನೆಂದರೆ, "ಮನುಷ್ಯನ ಮೌಲ್ಯ ಅವನ ಜಾತಿಯಲ್ಲಿ ಅಲ್ಲ; ಅವನ ಹೃದಯದಲ್ಲಿದೆ." ನನ್ನನ್ನು ಬೆಳೆಸಿದ್ದು ದೇವರು. ನನ್ನನ್ನು ರೂಪಿಸಿದ್ದು ನನ್ನ ತಂದೆ-ತಾಯಿ. ನನ್ನನ್ನು ಮುನ್ನಡೆಸಿದ್ದು ಕೆಲವು ಒಳ್ಳೆಯ ಹೃದಯದ ಮನುಷ್ಯರು. ಇಂದು ನಾನು ಈ ಹಾದಿಯಲ್ಲಿ ನಿಂತಿದ್ದರೆ, ಅದು ಹೋರಾಟದ ಬೆವರು, ಬಡತನದ ಕಣ್ಣೀರು ಮತ್ತು ನನ್ನ ತಂದೆ-ತಾಯಿಯ ತ್ಯಾಗದ ಫಲ.
ಕೊನೆಯ ಮಾತು ಈ ಲೇಖನ ಯಾರನ್ನೂ ದೂಷಿಸಲು ಬರೆದದ್ದಲ್ಲ. ನಾನು ನಡೆದು ಬಂದ ದಾರಿಯನ್ನು, ಅನುಭವಿಸಿದ ನೋವನ್ನು ಮತ್ತು ಕಲಿತ ಬದುಕಿನ ಪಾಠವನ್ನು ಹಂಚಿಕೊಳ್ಳಲು ಬರೆದದ್ದು. ಜಾತಿ ಮನುಷ್ಯನನ್ನು ದೊಡ್ಡವನನ್ನಾಗಿಸುವುದಿಲ್ಲ. ಹುದ್ದೆ ಮನುಷ್ಯನ ಮೌಲ್ಯವನ್ನು ನಿರ್ಧರಿಸುವುದಿಲ್ಲ. ಮಾನವೀಯತೆಯೇ ಮನುಷ್ಯನ ನಿಜವಾದ ಪರಿಚಯ. "ಮಾನವೀಯತೆಯೇ ನನ್ನ ಜಾತಿ... ಸೇವೆಯೇ ನನ್ನ ಧರ್ಮ."
ಮತೊಂದು ಅನುಭವ ಜೊತೆಗೆ ನಿಮ್ಮ ಮುಂದೆ...
✍️ ಲೇಖನ: ಹರೀಶ್ ಮುಲ್ಕಿ
ಕಾಮೆಂಟ್ ಬಿಡಿ