ವಾಣಿಜ್ಯ

ಬ್ಯಾಂಕ್‌ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಹಣ ಪಾವತಿಸಿ! ಯುಪಿಐನಲ್ಲೇ ಸಿಗಲಿದೆ 45 ದಿನಗಳ ಬಡ್ಡಿ ರಹಿತ ಸಾಲ

ಬೆಂಗಳೂರು: ಅಂಗಡಿಗೆ ಹೋಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಬ್ಯಾಂಕ್ ಅಕೌಂಟ್‌ನಲ್ಲಿ ದುಡ್ಡಿಲ್ಲವೆಂದು ಟೆನ್ಷನ್ ಮಾಡಿಕೊಳ್ಳುವ ಅಗತ್ಯ ಇನ್ಮುಂದೆ ಇಲ್ಲ! ಭಾರತದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ 'ಭಾರತ್‌ಪೇ', ಯೆಸ್ ಬ್ಯಾಂಕ್ ಸಹಯೋಗದೊಂದಿಗೆ 'ಭಾರತ್‌ಪೇ ಫ್ಲೆಕ್ಸ್' ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ.

ಏನಿದು ಭಾರತ್‌ಪೇ ಫ್ಲೆಕ್ಸ್?

ಸಾಮಾನ್ಯವಾಗಿ ನಾವು ಯುಪಿಐ ಮೂಲಕ ಪಾವತಿ ಮಾಡಿದಾಗ, ಆ ಹಣ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, 'ಭಾರತ್‌ಪೇ ಫ್ಲೆಕ್ಸ್' ಎಂಬುದು ಯುಪಿಐ ಆಧಾರಿತ ಸಾಲದ ಸೌಲಭ್ಯವಾಗಿದೆ.

ಗ್ರಾಹಕರು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲು, ಆನ್‌ಲೈನ್ ಶಾಪಿಂಗ್ ಮಾಡಲು, ಕರೆಂಟ್ ಬಿಲ್ ಕಟ್ಟಲು, ರೀಚಾರ್ಜ್ ಮಾಡಲು ಹಾಗೂ ಪೆಟ್ರೋಲ್ ಹಾಕಿಸಲು ಈ 'ಕ್ರೆಡಿಟ್ ಲೈನ್' (ಸಾಲ ಸೌಲಭ್ಯ) ಅನ್ನು ಬಳಸಬಹುದು. ಆಕಸ್ಮಿಕವಾಗಿ ಎದುರಾಗುವ ತುರ್ತು ಖರ್ಚುಗಳನ್ನು ನಿಭಾಯಿಸಲು ಇದು ಗ್ರಾಹಕರಿಗೆ ನೆರವಾಗಲಿದೆ.

ಬಡ್ಡಿ ಇಲ್ಲ, ಇಎಂಐ ಪಾವತಿಗೂ ಅವಕಾಶ

  1. * ಬಡ್ಡಿ-ಮುಕ್ತ ಅವಧಿ: ಗ್ರಾಹಕರು ಪಾವತಿಸಿದ (ಬಳಸಿದ) ಹಣವನ್ನು 45 ದಿನಗಳ ಒಳಗೆ ಹಿಂದಿರುಗಿಸಿದರೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ. 
  2. * ಇಎಂಐ ಸೌಲಭ್ಯ: ಒಂದು ವೇಳೆ ಪೂರ್ತಿ ಹಣವನ್ನು ಒಂದೇ ಬಾರಿಗೆ ಕಟ್ಟಲು ಸಾಧ್ಯವಾಗದಿದ್ದರೆ, ಆ ಮೊತ್ತವನ್ನು ಸುಲಭವಾದ ಇಎಂಐ ಕಂತುಗಳಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.
  3. * ಆ್ಯಪ್ ಮೂಲಕವೇ ಸಂಪೂರ್ಣ ಡಿಜಿಟಲ್ ಆಗಿ (ಕೆವೈಸಿ) ಖಾತೆ ತೆರೆಯಬಹುದು. ಅರ್ಹರಿಗೆ ಕೇವಲ 3 ನಿಮಿಷಗಳಲ್ಲಿ ಅನುಮೋದನೆ ಸಿಗಲಿದೆ.
  4. * ಎಷ್ಟು ಸಾಲ ಇದೆ, ಇಎಂಐ ಎಷ್ಟು ಕಟ್ಟಬೇಕು ಎಂಬುದನ್ನು ಆ್ಯಪ್‌ನಲ್ಲೇ ಟ್ರ್ಯಾಕ್ ಮಾಡಬಹುದು ಮತ್ತು ಪ್ರತಿ ಪಾವತಿಗೂ ರಿವಾರ್ಡ್ಸ್ ಗಳಿಸಬಹುದು.

ಭಾರತ್‌ಪೇ ಫ್ಲೆಕ್ಸ್ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಭಾರತ್‌ಪೇ ಸಿಇಒ ನಳಿನ್‌ ನೇಗಿ, "ಯುಪಿಐ ವ್ಯವಸ್ಥೆಯು ಭಾರತದ ಪಾವತಿ ವಿಧಾನವನ್ನೇ ಬದಲಾಯಿಸಿದೆ. ಭವಿಷ್ಯದಲ್ಲಿ ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಲು ಹೆಚ್ಚಿನ ಸ್ವಾತಂತ್ರ್ಯ ನೀಡಬೇಕಿದೆ. ಈ ಉದ್ದೇಶದಿಂದ ನಾವೀಗ ಯುಪಿಐ ವ್ಯವಸ್ಥೆಯ ಜೊತೆಗೆ ಸಾಲ ಸೌಲಭ್ಯವನ್ನು ಸೇರಿಸಿ ಭಾರತ್‌ಪೇ ಫ್ಲೆಕ್ಸ್ ಅನ್ನು ಪರಿಚಯಿಸುತ್ತಿದ್ದೇವೆ," ಎಂದರು.

ಯೆಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಿಭಾಗದ ಮುಖ್ಯಸ್ಥ ಅನಿಲ್ ಸಿಂಗ್ ಪ್ರತಿಕ್ರಿಯಿಸಿ, "ಭಾರತದ ಯುಪಿಐ ವ್ಯವಸ್ಥೆಯಲ್ಲಿ ಯೆಸ್ ಬ್ಯಾಂಕ್ ಪ್ರಮುಖ ಪಾತ್ರ ವಹಿಸುತ್ತಿದೆ. ಡಿಜಿಟಲ್ ಪಾವತಿ ಮತ್ತು ಕ್ರೆಡಿಟ್ ವ್ಯವಸ್ಥೆಯನ್ನು ಒಗ್ಗೂಡಿಸಿ ಗ್ರಾಹಕರಿಗೆ ಉತ್ತಮ ಅನುಭವ ನೀಡಲು ನಾವು ಭಾರತ್‌ಪೇ ಜೊತೆ ಕೈಜೋಡಿಸಿದ್ದೇವೆ," ಎಂದು ತಿಳಿಸಿದರು.

ಈ ಹೊಸ ಸೇವೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು 'ಪೇ ನೌ, ಸೆಟಲ್ ಲೇಟರ್' (ಈಗ ಪಾವತಿಸಿ, ನಂತರ ತೀರಿಸಿ) ಎಂಬ ಜಾಹೀರಾತು ಅಭಿಯಾನವನ್ನು ಸಹ ಕಂಪನಿ ಆರಂಭಿಸಿದೆ.

ಭಾರತ್‌ಪೇ ಫ್ಲೆಕ್ಸ್ ಸೌಲಭ್ಯ ಪಡೆಯುವುದು ಹೇಗೆ?
  1. * ಭಾರತ್‌ಪೇ (BharatPe) ಆ್ಯಪ್ ತೆರೆದು 'BharatPe Flex' ಮೇಲೆ ಕ್ಲಿಕ್ ಮಾಡಿ.
  2. * ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  3. * ನಿಮಗೆ ಮಂಜೂರಾದ ಕ್ರೆಡಿಟ್ ಲಿಮಿಟ್ (ಸಾಲದ ಮಿತಿ) ಅನ್ನು ಯುಪಿಐಗೆ ಲಿಂಕ್ ಮಾಡಿ.
  4. * ನಿಮ್ಮ ಯುಪಿಐ ಪಿನ್ ಅನ್ನು ಸೆಟ್ ಮಾಡಿ.
  5. * ಯಾವುದೇ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಆರಂಭಿಸಿ.

2018ರಲ್ಲಿ ಆರಂಭವಾದ 'ಭಾರತ್‌ಪೇ', ಭಾರತದ ಮೊದಲ 'ಝೀರೋ ಎಂಡಿಆರ್' ಕ್ಯೂಆರ್ ಕೋಡ್ ಪರಿಚಯಿಸಿದ ಸಂಸ್ಥೆಯಾಗಿದೆ. ಪ್ರಸ್ತುತ 450ಕ್ಕೂ ಹೆಚ್ಚು ನಗರಗಳಲ್ಲಿ 1.7 ಕೋಟಿಗೂ ಅಧಿಕ ವ್ಯಾಪಾರಿಗಳನ್ನು ಸಂಸ್ಥೆ ಹೊಂದಿದ್ದು, ಪ್ರತಿ ತಿಂಗಳು 45 ಕೋಟಿಗೂ ಹೆಚ್ಚು ಯುಪಿಐ ವಹಿವಾಟುಗಳನ್ನು ನಿರ್ವಹಿಸುತ್ತಿದೆ.

ಕಾಮೆಂಟ್ ಬಿಡಿ

Join Us