ಜಿಲ್ಲಾ ಸುದ್ದಿಗಳು

ವೃದ್ಧ ತಂದೆಯನ್ನು ಚೀಲದಲ್ಲಿ ಕಟ್ಟಿ ಕೊರಿಯರ್

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ 'ಲೈಕ್ಸ್' ಮತ್ತು 'ವ್ಯೂಸ್' ಗಳಿಸಲು ಜನರು ಎಂತಹ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಮಾತ್ರ ಮನುಷ್ಯತ್ವವೇ ಬೆಚ್ಚಿಬೀಳುವಂತಿದೆ. ರೀಲ್ಸ್ ಮಾಡುವ ಭರದಲ್ಲಿ ಕುಟುಂಬವೊಂದು ತನ್ನದೇ ಮನೆಯ ವೃದ್ಧ ತಂದೆಯನ್ನು ಚೀಲದಲ್ಲಿ ಕಟ್ಟಿ ಕೊರಿಯರ್ ಮಾಡಲು ಮುಂದಾದ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ವಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್ ಕಚೇರಿಯೊಂದಕ್ಕೆ ಮಂಗಳವಾರ ಐವರು ಸದಸ್ಯರ ಕುಟುಂಬವೊಂದು ಬಂದಿತ್ತು. ಮಹಿಳೆ, ಆಕೆಯ ಪತಿ, ಅತ್ತೆ ಮತ್ತು ಮೈದುನ ಸೇರಿ ದೊಡ್ಡದೊಂದು ಪಾರ್ಸೆಲ್ ಹೊತ್ತುಕೊಂಡು ಬಂದಿದ್ದರು. ಪಾರ್ಸೆಲ್ ಗಾತ್ರ ದೊಡ್ಡದಾಗಿದ್ದರಿಂದ ಅನುಮಾನಗೊಂಡ ಕೊರಿಯರ್ ಸಿಬ್ಬಂದಿ, ‘ಒಳಗೆ ಏನಿದೆ?’ ಎಂದು ಪ್ರಶ್ನಿಸಿದ್ದಾರೆ. ಆದರೆ ಕುಟುಂಬದವರು ಮೌನಕ್ಕೆ ಶರಣಾದರು.

ಅನುಮಾನಾಸ್ಪದ ನಡವಳಿಕೆಯಿಂದ ಸಿಬ್ಬಂದಿ ಪಾರ್ಸೆಲ್ ತೆರೆದಾಗ ಕಂಡ ದೃಶ್ಯ ಕಂಡು ದಂಗಾಗಿದ್ದಾರೆ. ಆ ಚೀಲದ ಒಳಗೆ ಮಹಿಳೆಯ ವೃದ್ಧ ತಂದೆಯನ್ನು ಕೂರಿಸಲಾಗಿತ್ತು! ಆ ವೃದ್ಧರು ಉಸಿರಾಡಲು ಪರದಾಡುತ್ತಿದ್ದು, ತೀವ್ರ ಸಂಕಷ್ಟದಲ್ಲಿದ್ದರು.

ಯಾಕೆ ಹೀಗೆ ಮಾಡಿದಿರಿ ಎಂದು ಪ್ರಶ್ನಿಸಿದಾಗ ಕುಟುಂಬಸ್ಥರು ನೀಡಿದ ಉತ್ತರ ಕೇಳಿ ಸಿಬ್ಬಂದಿ ತಲೆ ಚಚ್ಚಿಕೊಂಡಿದ್ದಾರೆ. ಉಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಸ್ ಟಿಕೆಟ್‌ಗಳು ಸಿಗುತ್ತಿಲ್ಲ, ಹೀಗಾಗಿ ಪ್ರಯಾಣಕ್ಕೆ ‘ಕೊರಿಯರ್’ ಮಾಡುವುದೊಂದೇ ದಾರಿ ಎಂಬ ಕಾನ್ಸೆಪ್ಟ್‌ನಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಲು ಈ ಪ್ಲಾನ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ತಮ್ಮ ತಪ್ಪು ಬಯಲಾದ ಮೇಲೂ ಆ ಕುಟುಂಬಕ್ಕೆ ಪಶ್ಚಾತ್ತಾಪವಾಗಲಿಲ್ಲ. ಬದಲಾಗಿ, ನಾವು ಅಷ್ಟು ದೂರದಿಂದ ಕಷ್ಟಪಟ್ಟು ಪಾರ್ಸೆಲ್ ಹೊತ್ತುಕೊಂಡು ಬಂದಿದ್ದೇವೆ, ಹೇಗಾದರೂ ಮಾಡಿ ಇದನ್ನು ಒಪ್ಪಿಕೊಳ್ಳಿ ಎಂದು ಕೊರಿಯರ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ವಯ್ಯಾಲಿಕಾವಲ್ ಪೊಲೀಸರು ಕುಟುಂಬವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಮ್ಮ ಬೇಜವಾಬ್ದಾರಿ ವರ್ತನೆಗೆ ಕ್ಷಮೆಯಾಚಿಸಿ ವಿಡಿಯೋ ರೆಕಾರ್ಡ್ ಮಾಡಿದ ನಂತರ, ಪೊಲೀಸರು ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.

ಕಾಮೆಂಟ್ ಬಿಡಿ

Join Us