ಕ್ರೈಂ

ಮೂಡಬಿದ್ರೆ ಬಸ್ ನಿಲ್ದಾಣದ ಸಂಕೀರ್ಣದಲ್ಲಿ ತಲ್ವಾರ್ ಹಿಡಿದು ದಾಂಧಲೆ

ಮೂಡಬಿದ್ರೆ : ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದ ಸಂಕೀರ್ಣದಲ್ಲಿ ಶನಿವಾರ ಸಂಜೆ ಯುವಕನೊಬ್ಬ ತಲ್ವಾರ್ ಹಿಡಿದು ದಾಂಧಲೆ ನಡೆಸಿದ ಆತಂಕಕಾರಿ ಘಟನೆ ನಡೆದಿದೆ. ಸಾರ್ವಜನಿಕರು ಹಾಗೂ ಮೊಬೈಲ್ ಮಳಿಗೆಯ ಸಿಬ್ಬಂದಿ ಒಟ್ಟಾಗಿ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಶನಿವಾರ ಸಂಜೆ ಬಸ್ ನಿಲ್ದಾಣದ ಆವರಣಕ್ಕೆ ಬಂದ ಯುವಕ, ಸಾರ್ವಜನಿಕರು ಹಾಗೂ ಪ್ರಯಾಣಿಕರು ಓಡಾಡುವ ರಸ್ತೆಯಲ್ಲೇ ರಾಜಾರೋಷವಾಗಿ ಕೈಯಲ್ಲಿ ತಲ್ವಾರ್ ಹಿಡಿದು ನಡೆದುಕೊಂಡು ಬಂದಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶಿಸುತ್ತಾ ಸಾಗಿದ ಆತನ ವರ್ತನೆಯಿಂದ ಪ್ರಯಾಣಿಕರು ಭೀತಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಯುವಕನ ಈ ಹಾವಳಿಯ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಬಸ್ ನಿಲ್ದಾಣದ ಆವರಣದಲ್ಲೇ ಇದ್ದ ಮೊಬೈಲ್ ಅಂಗಡಿಯೊಳಗೆ ನುಗ್ಗಿದ ಆರೋಪಿ, ಗ್ರಾಹಕರು ವ್ಯಾಪಾರ ನಿರತರಾಗಿದ್ದ ಸಂದರ್ಭದಲ್ಲೇ ತನ್ನ ಜೀನ್ಸ್ ಪ್ಯಾಂಟ್‌ನ ಒಳಗಡೆಯಿಂದ ತಲ್ವಾರ್ ಹೊರತೆಗೆದಿದ್ದಾನೆ. ಕೌಂಟರ್‌ನಲ್ಲಿದ್ದ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿದ ಆತ, ತಕ್ಷಣವೇ ತನಗೆ ಮೊಬೈಲ್ ಕೊಡುವಂತೆ ಅಬ್ಬರಿಸಿದ್ದಾನೆ. ತಲ್ವಾರ್ ಬೀಸಿ ಜೀವ ಬೆದರಿಕೆ ಹಾಕಿದಾಗ ಗ್ರಾಹಕರು ಆತಂಕದಿಂದ ದೂರ ಸರಿದಿದ್ದಾರೆ.

ಆರೋಪಿಯ ಅಬ್ಬರಕ್ಕೆ ಧೃತಿಗೆಡದ ಮಳಿಗೆಯ ಸಿಬ್ಬಂದಿ ಹಾಗೂ ಅಲ್ಲಿದ್ದ ಸಾರ್ವಜನಿಕರು ಒಟ್ಟಾಗಿ ಆತನನ್ನು ಎದುರಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಜನಸ್ತೋಮ, ಯುವಕನ ಮೇಲೆ ಮುಗಿಬಿದ್ದು ಆತನ ಕೈಯಲ್ಲಿದ್ದ ತಲ್ವಾರ್ ಅನ್ನು ಬಲವಂತವಾಗಿ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯ ಕುರಿತು ತಕ್ಷಣವೇ ಸಾರ್ವಜನಿಕರು ಮೂಡಬಿದ್ರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಾರ್ವಜನಿಕ ಶಾಂತಿ ಕದಡಿದ್ದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

“ತಲ್ವಾರ್ ಬೀಸಿ ದಾಂಧಲೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆತ ಈ ಕೃತ್ಯವನ್ನು ಯಾವ ಉದ್ದೇಶಕ್ಕಾಗಿ ಎಸಗಿದ್ದಾನೆ ಹಾಗೂ ಆತನ ಹಿನ್ನೆಲೆ ಏನು ಎಂಬ ಕುರಿತು ತನಿಖೆ ಮುಂದುವರೆದಿದೆ.”
— ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಆಯುಕ್ತ

ಕಾಮೆಂಟ್ ಬಿಡಿ

Join Us