ಕ್ರೀಡೆ

ನ್ಯೂ ಚಂಡೀಗಢದಲ್ಲಿ ವೈಭವ್ ಸುನಾಮಿಗೆ ನುಚ್ಚುನೂರಾದ ಪ್ರಮುಖ 5 ದಾಖಲೆಗಳು

ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ನ 15 ವರ್ಷದ ವೈಭವ್ ಸೂರ್ಯವಂಶಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದಾರೆ. ಕ್ರಿಸ್ ಗೇಲ್ ಅವರ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ಮುರಿದ ವೈಭವ್, ವೇಗದ ಪ್ಲೇಆಫ್ ಅರ್ಧಶತಕವನ್ನೂ ಬಾರಿಸಿದ್ದಾರೆ. ಇವರ ಪ್ರದರ್ಶನಕ್ಕೆ ಆರ್. ಅಶ್ವಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಯುವ ಆಟಗಾರನ ಮಾನಸಿಕ ಸ್ಥೈರ್ಯಕ್ಕೆ ಇಡೀ ಕ್ರಿಕೆಟ್ ಲೋಕವೇ ಬೆರಗಾಗಿದೆ.

1- ಒಂದೇ ಐಪಿಎಲ್‌ ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್‌ ವೈಭವ್‌ ಸೂರ್ಯವಂಶಿ ಐಪಿಎಲ್‌ ಇತಿಹಾಸದಲ್ಲಿ ಮುರಿಯಲು ಅಸಾಧ್ಯ ಎಂದೇ ಭಾವಿಸಲಾಗಿದ್ದ ಕ್ರಿಸ್‌ ಗೇಲ್‌ ಅವರ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ. 2012ರ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದ ಕ್ರಿಸ್‌ ಗೇಲ್‌ ಆರ್‌ಸಿಬಿ ಪರ ಬ್ಯಾಟ್ ಮಾಡಿ 59 ಸಿಕ್ಸರ್ ಬಾರಿಸಿದ್ದರು. ಈ ದಾಖಲೆ 14 ವರ್ಷಗಳ ಕಾಲ ಯಾರೂ ಮುರಿದಿರಲಿಲ್ಲ. ಈ ಆವೃತ್ತಿಯಲ್ಲಿ ವೈಭವ್ ಈ ದಾಖಲೆ ಅಳಿಸಿ ಹಾಕಿದ್ದಾರೆ. ಇವರು 19ನೇ ಆವೃತ್ತಿಯ ಐಪಿಎಲ್‌ನಲ್ಲಿ 65 ಸಿಕ್ಸರ್ ಬಾರಿಸಿದ್ದಾರೆ. 

2- ರಿಷಭ್ ಪಂತ್ ದಾಖಲೆ ಮುರಿದ ವೈಭವ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ತಮ್ಮ 600 ರನ್‌ಗಳ ಗಡಿಯನ್ನು ದಾಟಿದರು. ಇದರೊಂದಿಗೆ ಐಪಿಎಲ್‌ನ ಒಂದೇ ಸೀಸನ್‌ನಲ್ಲಿ 600 ಪ್ಲಸ್ ರನ್ ಗಳಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ದಾಖಲೆ ಈ ಮೊದಲು 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಬ್ಯಾಟ್ ಮಾಡಿದ್ದ ರಿಷಭ್ ಪಂತ್ ಹೆಸರಿನಲ್ಲಿತ್ತು.

3- ಜೈಸ್ವಾಲ್ ದಾಖಲೆ ಬ್ರೇಕ್ ಅನ್‌ಕ್ಯಾಪ್ಡ್‌ ಆಟಗಾರನೊಬ್ಬ ಐಪಿಎಲ್ ಆವೃತ್ತಿಯಲ್ಲಿ ಗಳಿಸಿದ ಗರಿಷ್ಠ ರನ್‌ಗಳ ದಾಖಲೆಯನ್ನು ವೈಭವ್ ಮುರಿದಿದ್ದಾರೆ. ಈ ಆವೃತ್ತಿಯಲ್ಲಿ ಅವರು ಒಟ್ಟು 630 ರನ್ ಗಳಿಸುವ ಮೂಲಕ ದಾಖಲೆ ಬರೆದರು. ಈ ಮೊದಲು ಈ ದಾಖಲೆ ಯಶಸ್ವಿ ಜೈಸ್ವಾಲ್‌ ಹೆಸರಿನಲ್ಲಿತ್ತು. ಜೈಸ್ವಾಲ್‌ 2023ರ ಐಪಿಎಲ್‌ನಲ್ಲಿ 625 ರನ್‌ ಬಾರಿಸಿದ್ದರು.

4- ಬ್ರೆಂಡನ್ ಮೆಕಲಮ್ ದಾಖಲೆ ಸಮ ಪಂದ್ಯದ ಮೊದಲ ಓವರ್‌ನಲ್ಲೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ ನ್ಯೂಜಿಲೆಂಡ್‌ನ ಮಾಜಿ ದಿಗ್ಗಜ ಬ್ರೆಂಡನ್ ಮೆಕಲಮ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ಆಟಗಾರರು 10 ಬಾರಿ ಈ ಸಾಧನೆ ಮಾಡಿದ್ದರು. 

5- ರೈನಾ ದಾಖಲೆಯ ಸಮಕ್ಕೆ ನಿಂತ ವೈಭವ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದರು. ಈ ಮೂಲಕ ಐಪಿಎಲ್‌ ನಾಕೌಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಸುರೇಶ್‌ ರೈನಾ ಅವರ ದಾಖಲೆ ಸಮಕ್ಕೆ ನಿಂತರು. 2014ರಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಸುರೇಶ್ ರೈನಾ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಕಾಮೆಂಟ್ ಬಿಡಿ

Join Us