ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ: ಹೊಸ ಅಬಕಾರಿ ನೀತಿ ಜಾರಿ
ಬೆಂಗಳೂರು: ಹೊಸ ಅಬಕಾರಿ ನೀತಿ ಜಾರಿ: ಕರ್ನಾಟಕ ಸರ್ಕಾರವು ಮೇ 11 ರಿಂದ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದ್ದು, ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಿದೆ. ಇದರಿಂದಾಗಿ ಸಾಮಾನ್ಯ ಬ್ರಾಂಡ್‌ನ ಮದ್ಯದ ಬೆಲೆ ಶೇ 30 ರಷ್ಟು ದುಬಾರಿಯಾಗುತ್ತಿದ್ದು, ಪ್ರೀಮಿಯಂ ಮತ್ತು ವಿದೇಶಿ ಮದ್ಯದ ಬೆಲೆಗಳು ಗಣನೀಯವಾಗಿ ಇಳಿಕೆಯಾಗಲಿವೆ.
ಹೊಸ ನೀತಿಯಿಂದಾಗಿ ಸಾಮಾನ್ಯ ಜನರು ಹೆಚ್ಚಾಗಿ ಬಳಸುವ ವಿಸ್ಕಿ, ರಮ್, ಬ್ರಾಂಡಿ ಮತ್ತು ವೋಡ್ಕಾಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ. ವಿಶೇಷವಾಗಿ 180 ಮಿ.ಲೀ (ಕ್ವಾರ್ಟರ್) ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳ ಬೆಲೆ ಶೇ 20 ರಿಂದ 30 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ (KBDA) ಪ್ರಕಾರ, ಮೊದಲ ಐದು ಸ್ಲ್ಯಾಬ್‌ಗಳಲ್ಲಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು (AED) ಶೇ 20-30 ರಷ್ಟು ಹೆಚ್ಚಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಕಳೆದ ವರ್ಷ 63 ರೂಪಾಯಿ ಇದ್ದ ಕ್ವಾರ್ಟರ್ ಬೆಲೆ, ಇತ್ತೀಚಿನ ಏರಿಕೆಯ ನಂತರ 80 ರೂಪಾಯಿಗೆ ತಲುಪಿತ್ತು. ಈಗ ಹೊಸ ನೀತಿಯಿಂದಾಗಿ ಅದು 105 ರೂಪಾಯಿಗೆ ಏರಿಕೆಯಾಗುವ ಲಕ್ಷಣಗಳಿವೆ.
ಇನ್ನೊಂದೆಡೆ, ಶ್ರೀಮಂತರು ಬಳಸುವ ಅಥವಾ ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್‌ಗಳಾದ ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಮತ್ತು ಯುನೈಟೆಡ್ ಸ್ಪಿರಿಟ್ಸ್‌ನಂತಹ ಕಂಪನಿಗಳ ಮದ್ಯದ ಬೆಲೆ ಶೇ 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್‌ನಲ್ಲಿ ಬರುವ ಈ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕಾಮೆಂಟ್ ಬಿಡಿ