ಕೇಸರಿ ಶಾಲ್‌ಗೆ ನೋ, ಹಿಜಾಬ್‌ಗೆ ಧರಿಸಲು ಗ್ರೀನ್ ಸಿಗ್ನಲ್ ನೀಡಿದೆ ಸರ್ಕಾರ
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳ ಸಮವಸ್ತ್ರ ನಿಯಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.ರಾಜ್ಯಾದ್ಯಂತ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಗ್ರಾಸವಾಗಿದ್ದ, 2022ರ ಫೆಬ್ರವರಿ 05ರಂದು ಹೊರಡಿಸಲಾಗಿದ್ದ ಸಮವಸ್ತ್ರ ಕುರಿತಾದ ಆದೇಶವನ್ನು ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದುಕೊಂಡಿದ್ದು, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ಗ್ರೀನ್ ಸಿಗ್ನಲ್ ನೀಡಿದೆ.
2022ರಲ್ಲಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಧರ್ಮದಂಗಲ್‌ಗೆ ಕಾರಣವಾಗಿದ್ದ ಹಿಜಾಬ್ ವಿಚಾರವಾಗಿ ಈಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಸರ್ಕಾರ ಮತ್ತೆ ಅವಕಾಶ ನೀಡಿದ್ದು, ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿದೆ. 2022ರಲ್ಲಿ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ಇತರ ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸಿ ಕಾಲೇಜಿಗೆ ಬಂದಿದ್ದರು. ಇದು ಇಡೀ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೆ, ಕಾನೂನು ಸಮರಕ್ಕೂ ಕಾರಣವಾಗಿತ್ತು. ಅಂದು ಈ ವಿಚಾರವು ರಾಜ್ಯದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿತ್ತು. ದೀರ್ಘಕಾಲದ ವಿವಾದದ ಬಳಿಕ ಈಗ ರಾಜ್ಯ ಸರ್ಕಾರ ಹಿಜಾಬ್ ವಿಚಾರದಲ್ಲಿ ತನ್ನ ನಿಲುವನ್ನು ಬದಲಿಸಿದ್ದು, ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಆದರೆ, ಇದೇ ವೇಳೆ ಕೇಸರಿ ಶಾಲ್ ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಸರ್ಕಾರದ ಈ ನಿರ್ಧಾರವು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
ಕಾಮೆಂಟ್ ಬಿಡಿ