ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರಲು ಕಾತರದಿಂದ ಕಾಯುತ್ತಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ, ಪುನಾರಚನೆಗೆ ಚಿಂತನೆ ನಡೆಸಿದ್ದ ವರಿಷ್ಠರು, ಇದೀಗ ಪಂಚರಾಜ್ಯಗಳ ಚುನಾವಣೆಯತ್ತ ಗಮನ ಹರಿಸಿರುವುದರಿಂದ ಬಹುತೇಕ ರಾಜ್ಯ ಬಜೆಟ್ ಮಂಡನೆಯಾಗುವವರೆಗೂ ಕಾಯುವ ಅನಿವಾರ್ಯತೆ ಎದುರಾಗಿದೆ.ಸಂಪುಟ ರಚನೆಗೆ ಚಿಂತನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.ಸದ್ಯಕ್ಕೆ ಬೊಮ್ಮಾಯಿ ಸಂಪುಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಮಾತುಗಳು ಸಿಎಂ ಆಪ್ತ ವಲಯದಿಂದ ಕೇಳಿ ಬರುತ್ತಿವೆ.
ಆರು ಮಂದಿಯನ್ನು ಕೈಬಿಟ್ಟರೆ ಒಟ್ಟು 10 ಸ್ಥಾನ ಖಾಲಿ ಆದಂತಾಗುತ್ತದೆ. ಮುಂದಿನ ಚುನಾವಣೆಗೆ ಅನುಕೂಲವಾಗುವಂತಹ ಯುವ ಮುಖಗಳಿಗೆ ಮಣೆ ಹಾಕಿ ಎಲೆಕ್ಷನ್ ಕ್ಯಾಬಿನೆಟ್ ರಚನೆ ಮಾಡಲು ಸಂಘ ಪರಿವಾರ ಚಿಂತನೆ ನಡೆಸಿತ್ತು.
ಇದಕ್ಕಾಗಿಯೇ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಪಕ್ಷದ ಚಿಂತನ ಬೈಠಕ್ ಆಯೋಜಿಸಲಾಗಿತ್ತು. ಅಲ್ಲಿ ಸಚಿವರ ಮೌಲ್ಯಮಾಪನ ಮಾಡಿ ಕೆಲವನ್ನು ಕೈಬಿಟ್ಟು ಹೊಸದಾಗಿ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ಮೂರನೇ ಅಲೆ ಕಾರಣಕ್ಕೆ ಬಿಜೆಪಿಯ ಚಿಂತನ ಬೈಠಕ್ ಮುಂದೂಡಿಕೆಯಾಗಿದೆ. ಇದರ ನಡುವೆಯೂ ಸಂಕ್ರಾಂತಿ ನಂತರ ಬೊಮ್ಮಾಯಿ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎನ್ನಲಾಗಿತ್ತು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲ ನಾಯಕರು ಈ ಸಂಬಂಧ ಹೇಳಿಕೆಗಳನ್ನೂ ನೀಡುತ್ತ ಬಂದಿದ್ದರು.ಆದರೀಗ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿರುವುದರಿಂದ ವರಿಷ್ಠರು ಉತ್ತರಪ್ರದೇಶ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಚುನಾವಣೆ ಮುಗಿಯುವವರೆಗೂ ಕರ್ನಾಟಕ ರಾಜ್ಯದ ಕಡೆ ತಲೆ ಹಾಕುವುದು ಅನುಮಾನ ಎಂದು ಹೇಳಲಾಗುತ್ತಿದೆ.ಹಾಗಾಗಿ ಸಂಪುಟದಿಂದ ಕೊಕ್ ಆಗುತ್ತಿದ್ದವರು ಇನ್ನೆರಡು ತಿಂಗಳು ಸೇಫ್ ಆಗಿದ್ದರೆ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಶೆಯಾದಂತಾಗಿದೆ.
- ಪೊಲಿಟಿಕಲ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ