Mahanayaka Atal Bihari Vajpayee: ದೂರದೃಷ್ಟಿಯ ಮಾಹಾನಾಯಕ ಅಟಲ್ ಬಿಹಾರಿ ವಾಜಪೇಯಿ.

Mahanayaka Atal Bihari Vajpayee.

ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ವಿಶ್ವ ಕಂಡ
ಧೀಮಂತ ನಾಯಕ ಎಂದೇ ಪ್ರಸಿದ್ಧರಾಗಿದ್ದವರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜಿ ಯವರು. ಅಪ್ರತಿಮ ರಾಜಕೀಯ ಸಂತರಾಗಿ, ಸ್ನೇಹ ಮಯ ಸರಳ, ಸೌಜನ್ಯಾ ಮೂರ್ತಿಯಾಗಿ ಈ ಪುಣ್ಯ ಭೊಮಿಯಲ್ಲಿ ಕಾರ್ಯ ನಿರ್ವಹಣೆ ಮಾಡಿ ಎಲ್ಲರಿಂದಲೂ ಸರಿ ಸೈ ಅನಿಸಿಕೊಂಡ ಹೆಗ್ಗಳಿಕೆ ಇವರದು.ಅಟಲ್ ಜೀಯವರ  ಆದರ್ಶ ನಿಸ್ವಾರ್ಥದ ನಿಲುವು ಹಾಗೂ ಪ್ರಾಮಾಣಿಕತೆಯನ್ನು ಯಾರು ಪ್ರಶ್ನಿಸುವಂತಿಲ್ಲ. ಅವರ ಜೀವನದುದ್ದಕ್ಕೂ ಕರ್ತವ್ಯನಿಷ್ಠೆ, ನ್ಯಾಯಬದ್ಧ ತೀರ್ಮಾನಗಳು, ಅಭಿವೃದ್ಧಿಯ ವಿಚಾರಗಳು ಸೇರಿದಂತೆ ಇನ್ನಿತರ ಸಮಾಜಮುಖಿ ಸೇವೆಗಳಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೇ ಅಂದರೆ ಸ್ವಾರ್ಥ ರಾಜಕೀಯ ಮಾಡದೆ ದೇಶದ ಉನ್ನತಿಗಾಗಿ ಶ್ರಮಿಸಿದಾರೆ. ನುಡಿದಂತೆ ನಡೆಯುವ ಮೂಲಕ ಜನಸಾಮಾನ್ಯರಿಗೆ ನೀಡಿರುವ ಆಶೋತ್ತರಗಳನ್ನು ಈಡೇರಿಸಲು ಪ್ರಮಾಣಿಕವಾಗಿ  ಪ್ರಯತ್ನ ಮಾಡಿ ನಿಸ್ವಾರ್ಥತೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಿ, ಕಾಯ ವಾಚ ಮನಸ್ ಸಾಕ್ಷಿಯಾಗಿ ಸೇವೆ ಸಲ್ಲಿಸುವ ಮೂಲಕ ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದ ಬದುಕಿದ ಸಂತ ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇವೆ. ಸದಾ ದೇಶದ ಉನ್ನತಿಗಾಗಿ ಚಿಂತಿಸುವ, ಗಡಿ ಭದ್ರತೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿರೋಧಿ ದೇಶಗಳು ನಡುಗುವಂತೆ ಮಾಡಿದ ಕೆಚ್ಚೆದೆಯ ಮಹಾನ್ ನಾಯಕ, ದೇಶದ ಉದ್ದಗಲಕ್ಕೂ ಸಂಚರಿಸಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಾಣ ಮಾಡಿ ಜನರ ನೋವುಗಳಿಗೆ ಮಿಡಿದಿದ್ದಾರೆ.ಹೀಗೆ ಇವರ ಕಾರ್ಯ ಶೈಲಿ ಸಹ ಕೊನೆಯವರೆಗೂ ಅವರು ಅಂದುಕೊಂಡಂತೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿರುತ್ತಾರೆ. ಅವರ ತ್ಯಾಗ, ಕೆಚ್ಚೆದೆಯ ಹೋರಾಟ, ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಪೂರ್ತಿ ಎಂದರೆ ತಪ್ಪಾಗಲಾರದು. 

truenews


ವಾಜಪೇಯಿಜಿ ಹುಟ್ಟಿದ್ದು ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರನ ಶಿಂಧೆ ದಂಡು ಪ್ರದೇಶದ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾದೇವಿ ದಂಪತಿಗಳ ಮಗನಾಗಿ 1924 ಡಿಸೆಂಬರ್ 25 ರಂದು ಜನಿಸಿದರು. ಗ್ವಾಲಿಯರನ ಗೋರಖಿ ವಿದ್ಯಾಲಯದಲ್ಲಿ ಅಟಲ್ ಜಿ ಯವರು ಮಿಡಲ್ ಪರೀಕ್ಷೆಯನ್ನು ಪಾಸ ಮಾಡುವ ಮೂಲಕ ಶಿಕ್ಷಣ ಪಡೆದು.ಗ್ವಾಲಿಯರ್ ದ ವಿಕ್ಟೋರಿಯಾ ಕಾಲೇಜಿನಲ್ಲಿ ಬಿ.ಎ ತರಗತಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಅಟಲ್ ರವರು ಮುಂದೆ ಕಾನಾಪುರದ ಡಿ.ಎ.ಬಿ. ಕಾಲೇಜಿನಿಂದ  ರಾಜ್ಯಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಎಂ.ಎ ಪರೀಕ್ಷೆಯಲ್ಲಿ ಸಹ ತೇರ್ಗಡೆಯಾದರು. ಅದೇ ರೀತಿ ನ್ಯಾಯಶಾಸ್ತ್ರದಲ್ಲಿ(L.L.B) ಪದವಿ ಪಡೆದುಕೊಂಡಿದ್ದರು. ಇಂತಹ ಸಮಯದಲ್ಲಿ ಅಂದರೆ ಅವರ ಶಾಲಾ ದಿನಗಳಲ್ಲೇ ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ಶಾಲೆಯಲ್ಲಿ ನಡೆಯುವ ಚರ್ಚಾ ಸ್ಪರ್ಧೆ ಭಾಗವಹಿಸಿ ಪ್ರಶಸ್ತಿ ಗಳಿಸುತ್ತಿದ್ದರು. ಯಾವುದೇ ಪರೀಕ್ಷೆಯೇ ಆಗಲಿ ಅಟಲ್ ಜಿ ಕ್ಲಾಸಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದರು ಎಂಬುದು ಅವರ ಜೀವನದ ಬಗೆ ಕಳೆದುಕೊಂಡಾಗ ಗೊತ್ತಾಗುತ್ತದೆ.

truenews


ಇನ್ನು ಅಟಲ್ ಜಿ ಗೆ ಶಾಲಾ ಪುಸ್ತಕಗಳಿಗಿಂತ ಆಧ್ಯಾತ್ಮಿಕ. ಪೌರಾಣಿಕ, ದೇಶ ಭಕ್ತಿ ಪುಸ್ತಕಗಳ ಓದುವುದು ಅವರಿಗೆ ಹೆಚ್ಚು ಆಸಕ್ತಿದಾಯಕವಾಗಿತ್ತು. ಕಥೆ, ಕಾದಂಬರಿ ಹಾಗೂ ಸಾಹಿತ್ಯ ಅವರಿಗೆ ಅಚ್ಚು ಮೆಚ್ಚು. ಹಾಗಾಗಿ ಸಾಹಿತ್ಯ ವಲಯದ ವಾತಾವರಣದಿಂದ ಅಟಲ್ ಜಿಯವರು ಬೆಳೆದು ಬಂದರು ಜೊತೆಗೆ ಸಾಹಿತ್ಯ ಪ್ರೇಮ ಬೆಳೆಸಿಕೊಂಡು ಬಂದಿದ್ದು ಕಾಣುತ್ತಿವೆ. ಇಂಥ ವೈಚಾರಿಕ ವಿಚಾರಗಳಿಂದ ಬೆಳೆದು ಬಂದ ಅಟಲ್ ಜಿ ಯವರು ದೇಶ  ಪ್ರೇಮದ ಮತ್ತು ಸಾಹಿತ್ಯ ಸೇವೆಯ ಕುರಿತು ಅಪಾರ ಅಭಿಮಾನ ಹೊಂದಿದರು. ಇದೆ ನಿಟ್ಟಿನಲ್ಲಿ ಅವರು ಕೊನೆಯವರೆಗೂ ಹೆಜ್ಜೆ ಹಾಕಿದರು ಎಂಬುದು ಅವರ ಸಾಹಿತ್ಯ ರಚನೆಯಿಂದ ನಮಗೆಲ್ಲರಿಗೂ ತಿಳಿದುಬರುತ್ತದೆ. ಇನ್ನು ಪತ್ರಿಕಾ ರಂಗದಲ್ಲಿ ಅಟಲ್ ಜಿಯವರ ಅಧ್ಭುತ್ ಬರಹದ ಸಾಧನೆ ದೊಡ್ಡದು. ಅಟಲ್ ಜಿ ಯವರು ಪತ್ರಿಕಾ ರಂಗದಲ್ಲೂ ಕಾಲಿಟ್ಟು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ, ವೀರ ಅರ್ಜುನ್ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದರು.  ಅವರ ಬರಹ ಬಹಳ ಹರಿತವಾಗಿತ್ತು. ಓದುಗರ ಮೇಲೆ ಅದು ಅಪಾರವಾದ ಪರಿಣಾಮ ಬೀರುತ್ತು ಎಂದು ತಿಳಿದುಬರುತ್ತದೆ.

truenews


1951 ರಲ್ಲಿ ಭಾರತೀಯ ಜನ ಸಂಘ ಉದಯವಾದ ನಂತರ ಇವರ ರಾಜಕೀಯ ಜೀವನ ಆರಂಭವಾಯಿತು. ಈ ಸಂಘದ ಸಂಸ್ಥಾಪಕ ಸದಸ್ಯರಲ್ಲೊಬ್ಬರು ಅಟಲ್ ಜಿ ಎಂದರೆ ತಪ್ಪಾಗಲಾರದು. ಜನ ಸಂಘ ಪಂಡಿತ್ ದೀನದಯಾಳ ಉಪಾಧ್ಯಾಯರ ಮಾರ್ಗ ದರ್ಶನದಲ್ಲಿ ಕಾಂಗ್ರೆಸ್ ಗೆ ಪ್ರಬಲ ವಿರೋಧ ಪಕ್ಷವಾಗಿ ಬೆಳೆದಾಗ ಅಂದರೆ 1951 ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಅಟಲ್ ಜಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು.  ಬಲರಾಮ್ ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಜಯ ಸಾಧಿಸಿದರು. ಮುಂದೆ 1962 ರಲ್ಲಿ ಅಟಲ್ ಜಿ ಸೋತರು. ಆದರೆ ಅವರು ಕುಗ್ಗದೆ 1967 ಮತ್ತು 1971 ರಲ್ಲಿ ಮತ್ತೆ ಪ್ರಚಂಡ ವಿಜಯ ಸಾಧಿಸಿದರು ಎನ್ನುವುದು ನಾವ್ಯಾರು ಮರೆಯಬಾರದು. ಇದಾದ ನಂತರ 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. ಆಗ ಅಟಲ್ ಜಿಯವರು, ಇಂದಿರಾ ಗಾಂಧಿ ಸರ್ಕಾರದ ವಿರುದ್ದ ಹೋರಾಡಿ ಜೈಲು ಸೇರಿದರು. ಇಂದಿರಾ ಆಡಳಿತ ಕೊನೆಗೊಳ್ಳುವ ತನಕ ಜೈಲಿನಲ್ಲಿದ್ದರು ಬೀಧುಗಳೆ. 1977 ರ ಚುನಾವಣೆ ಸಂಧರ್ಭದಲ್ಲಿ ಅಟಲ್ ಜಿ ತಮ್ಮ ಸಂಗಡಿಗರೊಂದಿಗೆ ಜನತಾ ಪಕ್ಷ ಸೇರಿದರು. ಜನ ಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸಿದರು. ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಿದರು.ಇದಾದ ನಂತರ 1977 ರಲ್ಲಿ ಇಂದಿರಾ ಸರ್ಕಾರ ಮಣ್ಣು ಮುಕ್ಕಿತು. ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ ಸ್ಥಾಪನೆಯಾಯಿತು. ಅದರಲ್ಲಿ ಅಟಲ್ ಜಿ ವಿದೇಶಾಂಗ ಸಚಿವರಾದರು. ಆ ವೇಳೆಯಲ್ಲಿ ಪಾಕಿಸ್ತಾನ. ಚೀನಾ, ರಷಿಯಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿದ ಕೀರ್ತಿ ಅಟಲ್ ರಿಗೆ ಸಲ್ಲುತ್ತದೆ. ವಿದೇಶಾಂಗ ಮಂತ್ರಿಯಾಗಿ ವಾಶಿಂಗ್ಟನ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ ಕೀರ್ತಿ ಇವರಿಗೆ ಸಲ್ಲುತ್ತದೆ.

truenews

ಮುಂದೆ ಮೊರಾರ್ಜಿ ದೇಸಾಯಿಯವರ ಸರ್ಕಾರ ಕೇವಲ ಎರಡು ವರ್ಷ ಆಡಳಿತ ನಡೆಸಿದ ನಂತರ ಸರ್ಕಾರ ಬಿದ್ದುಹೋಯಿತು. 1980ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪಕ್ಷ ತೊರೆದ ಅಟಲ್ ಜಿ ಭಾರತೀಯ ಜನತಾ ಪಕ್ಷ(ಬಿ.ಜೆ. ಪಿ) ಸ್ಥಾಪಿಸಿದರು. ಬಿಜೆಪಿಯಿಂದ ಸ್ಪರ್ಧಿಸಿ ಅಟಲ್ ಜಿ ಗೆದ್ದರು. ಪಕ್ಷವನ್ನು ಬೆಳೆಸಲು ದೇಶದ ಉದ್ದಗಲಕ್ಕೂ ಸಂಚರಿಸಿ ಪಕ್ಷವನ್ನು ಸಂಘಟಿಸಿ, ಬಹಳ ಶ್ರಮ ಪಟ್ಟರು.  ಹೀಗೆ ಬಿಜೆಪಿಯನ್ನು ಪ್ರಬಲ ರಾಜಕೀಯ ಪಕ್ಷವಾಗಿ ರೂಪಿಸಿದರು. ಆದರೆ 1984 ರಲ್ಲಿ ನಡೆದ ಚುನಾವಣೆಯಲ್ಲಿ ಸೋತರು. ಸೋತರು ಎದೆಗುಂದದೆ ಪಕ್ಷ ಬಲವರ್ಧನೆ ಮಾಡಿ ಮುಂದೆ ನಡೆದ ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ 1991, 1996, 1998ರಲ್ಲಿ  ಸತತವಾಗಿ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದು ಐತಿಹಾಸದ ಪುಟದಲ್ಲಿ ದಾಖಲಾಗಿದೆ.  ಅಟಲ್ ಜಿ ಯವರು ಸತತವಾಗಿ ಗೆಲುವಿನ ದಾರಿಯಲ್ಲಿ ಸಾಗುತ್ತಾ, ದೇಶ ಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ತರುವಾಯ 1996 ರಲ್ಲಿ ದೇಶದ ಪ್ರಧಾನಮಂತ್ರಿಯಾದರು ಆದರೆ 13 ದಿನದಲ್ಲೇ ಬಹುಮತವಿಲ್ಲದ ಕಾರಣ ಸರ್ಕಾರ ಬಿದ್ದುಹೋಯಿತು. ನಂತರ ನಡೆದ ಚುನಾವಣೆಯಲ್ಲಿ,  ಮತ್ತೆ ಜಯಗಳಿಸುವ ಮೂಲಕ 1998 ರಲ್ಲಿ 2ನೇ ಬಾರಿಗೆ ಮತ್ತೆ ದೇಶದ ಚುಕ್ಕಾಣಿಯನ್ನು ಹಿಡಿದರು. ಆದರೆ ಆ ಸರ್ಕಾರ ಸಹ 13 ತಿಂಗಳಿಗೆ ಅಂತ್ಯವಾಯಿತು. ಮತ್ತೆ ಎದೆಗುಂದದೆ ಧೈರ್ಯದಿಂದ ದೇಶದ ಜನಸಾಮಾನ್ಯರ ಬಳಿಗೆ ತೆರಳಿ ಅವರು ಕೈಗೊಂಡ ಅವಧಿಯಲ್ಲಿ ಅಭಿವೃದ್ಧಿಯ ವಿಚಾರಗಳನ್ನು ಜನರಿಗೆ ತಿಳಿಸಿದರು. ತಿಳಿಸಿದ ಪ್ರಯುಕ್ತ ಮತ್ತೊಮ್ಮೆ ಜನಸಾಮಾನ್ಯರ ವಿಶ್ವಾಸ ಗೆದ್ದು 1999ರಲ್ಲಿ  3ನೇ  ಬಾರಿಗೆ ಅಟಲ್ ಜಿ ಭಾರತದ ಪ್ರಧಾನಿಯಾದರು. ಮೊಟ್ಟ ಮೊದಲ ಬಾರಿಗೆ ಚಿಕ್ಕ ಚಿಕ್ಕ ಪಕ್ಷಗಳ ಬೆಂಬಲ ಪಡೆದುಕೊಂಡು ಸರ್ಕಾರ ನಡೆಸಿದರು.

truenews


 ಇದೆ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳು ರೂಪಿಸಿದರು.ಇವರ ಅಧಿಕಾರವಾಧಿಯಲ್ಲಿ ಭಾರತ ಅಭಿರುದ್ದಿ ಪಥದತ್ತ ಸಾಗಿತು. ಮಕ್ಕಳ ಶಿಕ್ಷಣ ಉತ್ತಮಗೊಳಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆ, ಹಿಂದೂ ಮುಸ್ಲಿಂ ಸೌಹಾರ್ದತೆಗಾಗಿ ಲಾಹೋರ್ ಬಸ್ ಸಂಚಾರ ವ್ಯವಸ್ಥೆ, ದೇಶದ ಮಹಾ ನಗರಗಳನ್ನು ಜೋಡಿಸುವ ಸಲುವಾಗಿ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆ. ಪ್ರತಿ ಹಳ್ಳಿಗೂ ರಸ್ತೆ ನಿರ್ಮಿಸಲು ತಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳು ಹೀಗೆ ಹತ್ತು ಹಲವು ಹೊಸ ಹೊಸ ಯೋಜನೆಗಳನ್ನು ತರುವ ಮೂಲಕ ದೇಶವು ಅಭಿವೃದ್ಧಿ ದಿಕ್ಕಿನಲ್ಲಿ ಸಾಗುವಂತೆ ಮಾಡಿದರು. ಮಾಡುವ ಮೂಲಕ ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವದ ಗಮನ ಸೆಳೆದರು.ಪಾಕಿಸ್ತಾನ ವಿರುದ್ದ ನಡೆದ ಕಾರ್ಗಿಲ್ ಯುದ್ದದಲ್ಲಿ ಮಾಡಿ, ವಿಜಯ ಪಾತಕೆ ಹಾರಿಸಿದರು.ಭಾರತದ ಅರ್ಥಿಕ, ಸಾಮಾಜಿಕ, ಅಂತರಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪಾತಕೆಯನ್ನು ಬಾನೇತರಕ್ಕೇ ಮುಟ್ಟಿಸಿದರು. ಸ್ವಾರ್ಥ ರಾಜಕೀಯ ಮಾಡದೇ, ನಿಸ್ವಾರ್ಥಯಾಗಿ ದೇಶದ ಶ್ರೇಯಸ್ಸಿಗಾಗಿ  ಹಗಲಿರುಳು ದುಡಿದು, ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಸಾಮಾನ್ಯರಿಂದ ಬೇಷ್ ಎನಿಸಿಕೊಂಡಿದ್ದಾರೆ.

truenews

ಅಪರೂಪದ ಜನನಾಯಕ : ದೇಶ ಕಂಡ ಅಪರೂಪದ ನಾಯಕರಾಗಿ, ಉತ್ತಮ ಭಾಷಣಕಾರರಾಗಿ, ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತವರಾಗಿದ್ದರು. ಅವರ ಭಾಷಣ ಕೇಳಲು ಸಹಸ್ರಾರು ಜನ ಸೇರುತ್ತಿದ್ದರು. ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜಿ ತಮ್ಮ ವಾದವನ್ನು ನಿಚ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು. ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೇ ಮಾತನಾಡುತ್ತಿದ್ದರು. ಉದ್ರಿಕ್ತ ಅಥವಾ ಉದ್ರೇಕವಾದ ಭಾವನೆ ಅವರ ನಡತೆ ಮತ್ತು ನಡುವಳಿಯಲ್ಲಿ ಎಂದು ಕಂಡು ಬಂದಿಲ್ಲ. ಅವರ ಮಾತುಗಳಲ್ಲಿ ಯಾವಾಗಲೂ ಪ್ರಮಾಣಿಕತೆಯೂ ಎದ್ದು ಕಾಣುತ್ತಿತ್ತು. ಅವರು ಆಡಿದ ಮಾತು ಮಾತಲ್ಲ ಅದು ಮುತ್ತು. ಆ ಸರಳ ಮಾತುಗಾರಿಕೆ ಶುದ್ದ ಸ್ವಚ್ಛ ಮಧುರ ಹಾಗೂ ಕಾವ್ಯಮಯವಾಗಿತ್ತು.ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೇ, ಎಲ್ಲರೊಂದಿಗೆ ಸ್ನೇಹಮಯ ಜೀವನ ಸಾಗಿಸಿದರು. ಎಲ್ಲ ರಾಜಕೀಯ ಮುಖಂಡರ ಅಚ್ಚುಮೆಚ್ಚಿನ ನಾಯಕರಾಗಿದ್ದರು.ಇವರು ರಾಜಕಾರಣದೊಂದಿಗೆ ಅನೇಕ ಸಾಮಾಜಿಕ, ಸಾಂಸ್ಕಾಂತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದುಂಟು. 1961 ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು. ಆಲ್ ಇಂಡಿಯ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಟ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿದ್ದರು. ಪಂಡಿತ್ ದಿನದಯಾಳು ಉಪಾಧ್ಯಾಯ ಸ್ಮಾರಕ ಸಮಿತಿ, ದೀನದಯಾಳು ಧಾಮ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ.  ರಾಷ್ಟ್ರೀಯ ಪ್ರಜಾಸತ್ತಾತ್ಮಕ ಎಂಬ ಒಕ್ಕೂಟವನ್ನು ರಚಿಸಿ ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಸರ್ಕಾರ ನಡೆಸಿ, ಅನಿವಾರ್ಯವಾದ ಒಕ್ಕೂಟ ಸರ್ಕಾರ ವ್ಯವಸ್ಥೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಸೇವೆಯನ್ನು ನೀಡಿದರು. ರಾಜಕೀಯ ಸ್ಥಿರತೆಯ ಪ್ರಯತ್ನ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಗತಿ, ಉತ್ತಮ ಹೆದ್ದಾರಿಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ತಮ ವಿದೇಶಾಂಗ ಸಂಬಂಧಗಳು ಇವರ ಸರ್ಕಾರದ ಪ್ರಮುಖ ಸಾಧನೆಗಳೆನ್ನಬಹುದು.

truenews

ಅದಕ್ಕಾಗಿಯೇ ಭಾರತದ  ಶ್ರೇಷ್ಠ ರಾಜಕೀಯ ಗಣ್ಯ ವ್ಯಕ್ತಿಗಳಲ್ಲಿ  ಅಟಲ್ಪ ಜಿ ಅಪರೂಪದ ಜನಸಾಮಾನ್ಯರ ಅಚ್ಚುಮೆಚ್ಚಿನ ನಾಯಕರೆಂದು  ಜನರು ಪ್ರೀತಿಯಿಂದ ಕರೆಯುತ್ತಾರೆ. ದೇಶದ ಪ್ರಜೆಗಳ ನಿಸ್ವಾರ್ಥ ಸೇವಕ : ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದವರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ
ದೇಶವನ್ನು ಮುನ್ನಡೆಸಿದ ಕೀರ್ತಿ ಇವರದು. ಇನ್ನು ಇವರು ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇದ್ದಿತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಐತಿಹಾಸಿಕ ಸಾಧನೆ. ಅಟಲ್ ಜಿಯವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಮಹದೋದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ, ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಭಾರತ ಒಂದು ಪ್ರಬಲ ಸ್ವಾವಲಂಬೀ ರಾಷ್ಟ್ರವಾಗಬೇಕೆಂಬುದು ಇವರ ಹೆಬ್ಬಯಕೆ. 52ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಂಪುಕೋಟೆಯಲ್ಲಿ ಆಚರಿಸಿದ ಸಂದರ್ಭದಲ್ಲಿ ಭಾಷಣ ಮಾಡುತ್ತಾ “ನನಗೊಂದು ಭವ್ಯ ಭಾರತದ ಕಲ್ಪನೆಯಿದೆ. ಆ ಭಾರತ ಹಸಿವೆಯಿಂದ, ಭಯದಿಂದ ಮುಕ್ತವಾಗಿರುತ್ತದೆ. ಆ ಭಾರತ ನಿರಕ್ಷರತೆ ಮತ್ತು ದಾರಿದ್ರ್ಯದಿಂದ ದೂರವಾಗಿರುತ್ತದೆ” ಎಂದು ಹೇಳಿದ್ದಾರೆ. ಅಲ್ಲದೆ ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀ. ಉದ್ದದ "ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, "ಸರ್ವ ಶಿಕ್ಷಾ ಅಭಿಯಾನ" ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರು ನಿಜಕ್ಕೂ ಒಬ್ಬ ದೂರದೃಷ್ಟಿ ಹೊಂದಿದ್ದ ನಾಯಕ.ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್ಪಟುತ್ವ ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡಿದ್ದು ಮರೆಯಲಾಗದು.ಇನ್ನು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ಶ್ರೀವಾಜಪೇಯಿ ಅವರು ದೂರದೃಷ್ಟಿಯ, ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿ, ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿ ಹಗಲಿರುಳು ದುಡಿದಿದ್ದಾರೆ.ಇದಲ್ಲದೆ ಅಟಲ್ ರವರು ಲಾಲ್ ಬಹದ್ದೂರ್ ಶಾಸ್ತ್ರೀಯವರಂತೆ ಸ್ವಂತ ಮನೆ ಹೊಂದಿರಲಿಲ್ಲ.  ಗ್ವಾಲಿಯರ್ನಲ್ಲಿ ಇದ್ದ ತಮ್ಮ ತಂದೆಯ ಮನೆಯನ್ನು ವಾಜಪೇಯಿಯವರು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ. ಈಗ ಅದು ಸಾರ್ವಜನಿಕ ಗ್ರಂಥಾಲಯ. ಇಂದಿನವರೆಗೂ ಅಟಲ್ ರವರಿಗೆ ಸ್ವಂತ ಮನೆಯಿಲ್ಲ. ರಾಜಕೀಯದಲ್ಲಿ ಯಾವುದಾದರೂ ಪದವಿ ಪಡೆದ ವರ್ಷಗಳಲ್ಲಿ ಮನೆ, ಕಾರು, ಹಣ ಮಾಡಿಕೊಳ್ಳವ ಜನರಿದ್ದಾರೆ. ಆದರೆ ಕಳೆದ 45 ವರ್ಷಗಳಿಂದ ರಾಜಕಿಯದಲ್ಲಿದ್ದು ಇನ್ನು ಸ್ವಂತ ಮನೆ ಹೊಂದದಿರುವುದು ಅಚ್ಚರಿಯ ಸಂಗತಿ. 

truenews


ಒಟ್ಟಿನಲ್ಲಿ ವಾಜಪೇಯಿಯವರ ರಾಜಕೀಯ ಚತುರತೆಯನ್ನು, ಇಚ್ಚಾ ಶಕ್ತಿಯನ್ನು, ಆಡಳಿತ ವೈಖರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಜೊತೆಗೆ
ಪಸರಿಸಲು ಫೋಖ್ರಾನ್ ಸ್ಫೋಟವೂ ಮುಖ್ಯ ಪಾತ್ರ ವಹಿಸಿತು ಎಂಬುದು ಯಾರು ಅಲ್ಲಗಳೆಯುವಂತಿಲ್ಲ.ಆದ್ದರಿಂದ ಇಂತಹ ಮಾಹಾನ ವ್ಯಕ್ತಿ ದೇಶದ ಜನತೆಗೆ ಮತ್ತು ರಾಜಕೀಯ ಮುಖಂಡರಿಗೆ ಮಾದರಿ ಎಂದೇ ಹೇಳಬಹುದಾಗಿದೆ. ಅದಕ್ಕಾಗಿ ಇವರನ್ನು 90ರ ದಶಕದ ಭಾರತದ ರಾಷ್ಟ್ರ ರಾಜಕೀಯದ ಅತ್ಯಂತ ಪ್ರಬಲ ವ್ಯಕ್ತಿಯೆಂದು ಪರಿಗಣಿಸಿ  ಭಾರತ ಸೇರಿದಂತೆ ವಿಶ್ವ ಸಮುದಾಯ ಕರೆಯುತ್ತದೆ.ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದನ್ನು ಅಂತರಾಷ್ಟ್ರೀಯ ನಾಯಕರು, ದೇಶದ ರಾಜಕೀಯ ಮುಖಂಡರು ಆತ್ಮಸಾಕ್ಷಿಯಾಗಿ ಒಪ್ಪಿಕೊಳ್ಳುತ್ತಾರೆ.ಆದಕಾರಣ ಇಂತಹ ನಿಸ್ವಾರ್ಥ ಸೇವೆಗಳ ಮಾದರಿ ಸೇವಕ ಇನ್ನೊಮ್ಮೆ ಈ ದೇಶದಲ್ಲಿ ಹುಟ್ಟಿ ಬರಲೆಂದು ಬಯಸುತ್ತೇವೆ.

ಅಟಲ್ ಜಿಯವರ ಪ್ರಮುಖ ಕೃತಿಗಳು : ವಾಜಪೇಯಿಯವರು ರಾಜಕಾರಣಿಯಲ್ಲದೆ ಕವಿಯೂ ಆಗಿದ್ದರು.ಹಿಂದೆ ಭಾಷೆಯಲ್ಲಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ ಟ್ವೆಂಟಿ- ಒನ್ - ಪೊಯಮ್ಸ್ ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ. ಮೇರಿ ಇಕ್ಯಾವನ್ ಕವಿತಾಯೇಂ, ಸಂಕಲ್ಪಕಾಲ, ಕೈದಿ ಕವಿರಾಜ್ ಕೇ ಕುಂಡಲಿಯಾ (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯಲ್ಲಿ ಇದ್ದಾಗ ರಚಿಸಿದ ಕವನಗಳು), ಅಮರ್ ಆಗ್ ಹೈ (ಕವನ ಸಂಕಲನಗಳು) ಮೇರಿ ಸಂಸದೀಯ ಯಾತ್ರಾ (4 ಸಂಪುಟಗಳಲ್ಲಿ), ಶಕ್ತಿ ಸೇ ಶಾಂತಿ, ಲೋಕ ಸಭಾ ಮೆ ಅಟಲ್‍ಜೀ (ಭಾಷಣಗಳ ಸಂಪುಟ: ಮೃತ್ಯು ಯಾ ಹತ್ಯಾ, ಅಟಲ್ ಬಲಿದಾನ್), ಜನಸಂಘ ಔರ್ ಮುಸಲ್ಮಾನ್, ಸಂಸದ್ ಮೇ ತೀನ್ ದಶಕ್ (ಮೂರು ಸಂಪುಟಗಳಲ್ಲಿ), ಇವು ಹಿಂದಿಯಲ್ಲಿ ರಚಿತವಾದ ಪ್ರಮುಖ ಕೃತಿಗಳಾಗಿವೆ. ಫೋರ್ ಡಿಕೇಡ್ಸ್ ಇನ್ ಪಾರ್ಲಿಮೆಂಟ್ (ಭಾಷಣಗಳು, ಮೂರು ಸಂಪುಟ) ಹಾಗೂ ನ್ಯೂ ಡೈಮೆನ್‍ಷನ್ಸ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ-ಇವು ಇಂಗ್ಲಿಷಿನಲ್ಲಿ ಹೊರಬಂದಿರುವ ಪ್ರಸಿದ್ಧ ಗ್ರಂಥಗಳಾಗಿವೆ. ಹೀಗೆ ಹಲವು ಕೃತಿಗಳು ದೇಶಕ್ಕೆ ನೀಡಿದ್ದಾರೆ.

ಅಟಲ್ ಜಿಯವರಿಗೆ ಸಂಧ ಗೌರವ ಪ್ರಶಸ್ತಿಗಳು: ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದ ಅಟಲ್ ಜಿಯವರನ್ನು ಹುಡುಕಿಕೊಂಡು ಹಲವು ಪ್ರಶಸ್ತಿಗಳು ಬಂದಿವೆ, ಅವುಗಳಲ್ಲಿ ಪ್ರಮುಖವಾದವು ಹೀಗಿವೆ, 1992-ಪದ್ಮ ವಿಭೊಷಣ,1994 -ಲೋಕಮಾನ್ಯ ತಿಲಕ್,1994 - ಪಂಡಿತ ಗೋವಿಂದ ವಲ್ಲಭ್ ಪಂತ, 1994 ರಲ್ಲಿ ಅಟಲ್ ಜಿಯವರಿಗೆ ಸರ್ವ ಶ್ರೇಷ್ಟ ಸಂಸದೀಯ ಪಟು ಪ್ರಶಸ್ತಿ  ಹಾಗೂ 2015 ರಲ್ಲಿ ಭಾರತ ರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಇವರ ನಿಸ್ವಾರ್ಥ ಸೇವೆಗಾಗಿ ಸಂಧಿವೆ.

ಗೌರವ ಸಮರ್ಪಣೆ : ಭಾರತದ ಅಜಾತ ಶತ್ರು ಅಟಲ್ ಜಿಯರನ್ನು ಪ್ರತಿಯೋಬ್ಬ ಭಾರತೀಯ ಪ್ರಜೆಯೂ ಅವರನ್ನು ಗೌರವದಿಂದ ನೆನೆಯಬೇಕು.  ಅವರ ವಿಚಾರ ಧಾರೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು. ಭವ್ಯ ಭಾರತದ ಅಭಿವೃದ್ಧಿಗಾಗಿ ಕಂಕಣಬದ್ಧರಾಗೋಣ, ಬದ್ಧರಾಗುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಜಿ ಯವರು  (25 - 12 - 1924) ಜನಿಸಿದ ಈ ಶುಭದಿನ ಹಿನ್ನೆಲೆಯಲ್ಲಿ ಅಟಲ್ ಜಿ ಅವರಿಗೆ ಗೌರವ ಪೂರ್ವಕವಾದ ಭಕ್ತಿ ಸಮರ್ಪಣೆಯ ನಮನಗಳನ್ನು ಸಲ್ಲಿಸುತ್ತೇವೆ. 

  • ಲೇಖಕರು : ಸಂಗಮೇಶ ಎನ್ ಜವಾದಿ.
  • ಸಾಹಿತಿ, ಪತ್ರಕರ್ತ, ಬೀದರ ಜಿಲ್ಲೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.