ಕರಾವಳಿ ಕರ್ನಾಟಕದ ಪ್ರಸಿದ್ಷ ನಾಗ ಅಥವಾ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ತೋಕೂರು ಸುಬ್ರಹ್ಮಣ್ಯ ದೇವಸ್ಥಾನ ಒಂದು. ದಕ್ಷಿಣ ಕನ್ನಡ ಜಿಲ್ಲೆ,ಮಂಗಳೂರು ತಾಲೂಕು, ಮಂಗಳೂರಿ ನಿಂದ ಉಡುಪಿಗೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ, ಪಡುಪಂಣಬೂರುನಿಂದ 3 ಕಿಲೋಮೀಟರ್ ದೂರದಲ್ಲಿ ತೋಕೂರು ಕ್ಷೇತ್ರವಿದೆ. ಶ್ರೀ ಸುಬ್ರಹ್ಮಣ್ಯ ಸನ್ನಿಧಿಯು ಈ ಭಾಗದ ಹೆಸರಾಂತ ತೋಕೂರು ಸುಬ್ರಹ್ಮಣ್ಯ ನಾಗ ಕ್ಷೇತ್ರ. ಸುಮಾರು ವರ್ಷಗಳ ಪುರಾತನವಾದ ನಾಗ ಕ್ಷೇತ್ರ ಇದು.

ತೋಕೂರು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾರ್ಷಿಕವಾಗಿ ಹಲವಾರು ಸೇವೆಗಳು ನಡೆಯುತ್ತಿದ್ದರೂ ಚಂಪಾ ಷಷ್ಠಿ ಮತ್ತು ಸ್ಕಂದ ಷಷ್ಠಿ ಬಹು ಪ್ರಸಿದ್ಧ ಉತ್ಸವಗಳು. ರೋಗರುಜಿನಗಳ ಪರಿಹಾರ, ಸಂತಾನ ಪ್ರಾಪ್ತಿ, ಭೂ ಸಂಬಂಧಿ ದೋಷ ನಿವಾರಣೆ, ನಾಗದೋಷ ನಿವಾರಣೆ ಮೊದಲಾದ ಪರಿಹಾರಗಳಿಗೆ ಹರಕೆಹೊತ್ತು ಭಕ್ತರು ಇಲ್ಲಿಗಾಗಮಿಸುತ್ತಾರೆ.

ಹಿರಿ ಮತ್ತು ಕಿರಿ ಷಷ್ಠಿ ಸಂದರ್ಭಗಳಲ್ಲಿ ಹರಿಕೆ ಸಮರ್ಪಣೆಯೇ ಇಲ್ಲಿನ ವಿಶೇಷ ಸೇವೆ. ಜೊತೆಗೆ ಹಣ್ಣು- ಕಾಯಿ, ಹೂವು - ಕಾಯಿ ಸಮರ್ಪಣೆ, ತುಲಾಭಾರ, ಉರುಳು ಸೇವೆಗಳೂ ಇವೆ.

ತೋಕೂರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ದಾರಿಯುದ್ದಕ್ಕೂ ಈ ವೇಳೆ ಹರಿಕೆಯ ಬೆಳ್ಳಿ ಸಾಮಗ್ರಿ ಮಾರುವವರು ಇಕ್ಕೆಲಗಳಲ್ಲಿ ಕೂತಿರುತ್ತಾರೆ. ಭಕ್ತರು ಹರಿಕೆಯ ವಿವರ ತಿಳಿಸುತ್ತಿದ್ದಂತೆಯೇ ಬೆಳ್ಳಿ ತಗಡು ಚೂರುಗಳ ರಾಶಿಯಿಂದ ಅದಕ್ಕೆ ತಕ್ಕ ಆಕೃತಿಯನ್ನು ಹೆಕ್ಕಿ ಕೊಡುತ್ತಾರೆ. ಹರಿಕೆ ಹೊತ್ತವರು ಅವನ್ನು ಸುಳಿದು ಕ್ಷೇತ್ರದಲ್ಲಿ ಹುಂಡಿಗೆ ಒಪ್ಪಿಸುತ್ತಾರೆ. ಆ ಕ್ಷಣದಿಂದ ಅವರ ಕಷ್ಟ, ಕಾಯಿಲೆಗಳು ಮಾಯ ಆದ್ದರಿಂದಲೇ, ದೇಹದ ಅಂಗಾಂಗಗಳ ನೋವು, ಕಾಯಿಲೆ, ಸಾಕುಪ್ರಾಣಿಗಳ ಸಮಸ್ಯೆಗಳ ಬಗ್ಗೆ ಹರಿಕೆ ಹೊತ್ತ ಜನ ಅದಕ್ಕೆ ಸೂಕ್ತವಾದ ಕಾಲು, ಕಣ್ಣು, ಹಲ್ಲು, ಕೈ ಇತ್ಯಾದಿ ಬೆಳ್ಳಿಯ ಅವಯವಗಳನ್ನು ಹರಿಕೆಯಾಗಿ ಸಲ್ಲಿಸುತ್ತಾರೆ. ಮೈಯ ತೊನ್ನು, ಜೆಡ್ಡುಗಳಿಗೂ ಹರಿಕೆ ಸಲ್ಲಿಸುವವರೂ ಇದ್ದಾರೆ.
- ನ್ಯೂಸ್ ಬ್ಯೂರೋ true news ಕನ್ನಡ