ಬೆಳಗಾವಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ಗೆ ರಾಜೀನಾಮೆ ವಿಚಾರವಾಗಿ ಬೆಳಗಾವಿಯಲ್ಲಿ ಮಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರು-ಏಳು ತಿಂಗಳ ಹಿಂದೆ ಅವರು ಈ ವಿಚಾರ ತಿಳಿಸಿದ್ದರು. ಅವರ ನೋವು ಅವರ ದುಗುಡ ತಿಳಿಸಿದ್ದರು. ಅವರು ಬೇರೆ ಜಿಲ್ಲೆ ನಾಯಕರ ಬಗ್ಗೆ ಮಾತನಾಡಿರೋದು, ನಾಯಕರ ಜೊತೆ ಮಾತನಾಡಿರೋದು, ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿರೋದು ಎಲ್ಲಾ ಗೊತ್ತಿತ್ತು ಎಂದು ಹೇಳಿದರು.
ಅವರಿಗೇನೋ ಕೌನ್ಸಿಲ್ ಸೀಟ್ ಕೊಡ್ತೀವಿ ಅಂತಾ ಆಶ್ವಾಸನೆ ನೀಡಿದ್ದಾರಂತೆ. ನಿನ್ನೆಯೂ ನನ್ನ ಹತ್ತಿರ ಬರ್ತೀನಿ ಎಂದಿದ್ದರು. ಇವತ್ತು ರಾಜೀನಾಮೆ ಕಳಿಸಿಕೊಟ್ಟಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದ ಡಿಕೆಶಿ ಹಾರೈಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ನಷ್ಟವಾಗಿಲ್ಲ ಬದಲಾಗಿ ಅವರ ಚುನಾವಣಾ ಗೆಲುವಿಗೆ ಸಹಕರಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಮಾಹಿತಿ ಕೂಡ ನೀಡದೆ ಗುಟ್ಟಾಗಿ ಸೇರ್ಪಡೆಗೊಳ್ಳುವ ಅವಶ್ಯಕತೆ ಇರಲಿಲ್ಲ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇರಲಿಲ್ಲ ಬದಲಾಗಿ ಅವರ ನಿಷ್ಕ್ರೀಯತೆಯಿಂದಾಗಿ ಕಾರ್ಯಕರ್ತರಿಗೆ ಉಸಿರುಗಟ್ಟಿಸುವ ವಾತಾವರಣ ಇತ್ತು ಎಂದು ಹೇಳಿದ್ದಾರೆ.
ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಹಮ್ಮದ್ ಉಡುಪಿ :ಕಾಂಗ್ರೆಸ್ ಪಕ್ಷ ಸಾಗರದಂತೆ, ಅದರಿಂದ ಒಂದು ಬೊಗಸೆ ನೀರು ತೆಗೆದರೆ ಸಾಗರ ಖಾಲಿಯಾಗುವ ಪ್ರಶ್ನೆಯೇ ಇಲ್ಲ ಹಾಗೆಯೇ ಪಕ್ಷದಲ್ಲಿ ನಾಯಕರಿಗೆ ಕೊರತೆ ಇಲ್ಲ. ಇಂದು ಪಕ್ಷ ಒಬ್ಬ ನಾಯಕನನ್ನು ಕಳೆದುಕೊಂಡಿರಬಹುದು, ಪಕ್ಷ ಕಾರ್ಯಕರ್ತರಿಂದಲೇ ಹೊರತು ನಾಯಕರಿಂದಲ್ಲ ಎಂದು ಹೇಳಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ :ಚುನಾವಣಾ ವರ್ಷದಲ್ಲಿ ಪಕ್ಷಾಂತರ ನಡೆಯುವುದು ಸಾಮಾನ್ಯ. ಹಾಗಿರುವಾಗ, ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡದ್ದೂ ರಾಜಕೀಯದ ಭಾಗವೇ ಆಗಿದೆ. ಕಾಂಗ್ರೆಸ್ ಪಕ್ಷ ಹಿಂದೆಯೂ ಅನೇಕ ಬಾರಿ ಇಂತಹ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಿದೆ. ಪಕ್ಷದ ಮೇಲಿನ ಪ್ರೀತಿ ಹಾಗೂ ಜಾತ್ಯಾತೀತ ಸಿದ್ಧಾಂತದ ಮೇಲಿನ ನಂಬಿಕೆಯಿರುವ ಲಕ್ಷಾಂತರ ಕಾರ್ಯಕರ್ತರು ಪಕ್ಷದಲ್ಲಿರುವಾಗ ಪಕ್ಷವನ್ನು ಸಂಘಟಿಸಿ, ಅಧಿಕಾರದತ್ತ ಕೊಂಡೊಯ್ಯುವುದು ಕಷ್ಟವಾಗದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಹೇಳಿದ್ದಾರೆ.
- ಪೊಲಿಟಿಕಲ್ ಬ್ಯೂರೋ true news ಕನ್ನಡ