ರಾಜ್ಯ ಸುದ್ದಿ

ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ವೃಕ್ಷ ಮಾತೆ ತುಳಸಿ ಗೌಡ ನಿಧನ

ಕಾರವಾರ: ಗಿಡಗಳ ಆರೈಕೆ ಮೂಲಕ ಪ್ರಸಿದ್ಧ ಪಡೆದು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ವೃಕ್ಷ ಮಾತೆ ತುಳಸಿ ಗೌಡ ನಿಧನರಾಗಿದ್ದಾರೆ. 

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಇಂದು (ಡಿಸೆಂಬರ್ 16) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದರು.


ಹಾಲಕ್ಕಿ ಸಮುದಾಯದ ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ್ದಾರೆ. ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ.‌‌‌

ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಬಳಿಕ ಕಳೆದ ವರ್ಷ ಅಂದರೆ 2023ರಲ್ಲಿ ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಕಾಮೆಂಟ್ ಬಿಡಿ