ಪ್ರದಕ್ಷಿಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ

ದಕ್ಷಿಣ ಕನ್ನಡ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ಗುರುವಾರ ಸಂಜೆ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.

ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಆರಂಭವಾಯಿತು. ನಂತರ ದೇಗುಲದ ವಠಾರದಲ್ಲಿ ತುಂಬಿಸಿದ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವವು ನಡೆಯಿತು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಉತ್ಸವವು ಬೇರೆ ಯಾವುದೇ ದೇವಳದಲ್ಲಿ ಕಾಣಸಿಗುವುದಿಲ್ಲ.ಈ ಉತ್ಸವದೊಂದಿಗೆ ಈ ವರ್ಷದ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು. ಶ್ರೀ ದೇವಳದ ಗಜರಾಣಿ ಯಶಸ್ವಿನಿ ದೇವಳದಲ್ಲಿನ ನೀರಿನಲ್ಲಿ ನೀರಾಟ ಆಡಿ ಸಂತಸಗೊಂಡಿತು. ಭಕ್ತರೂ ನೀರಿನಲ್ಲಿ ಆನೆಗೆ ನೀರೆರಚುತ್ತಾ ಖುಷಿಪಟ್ಟರು.

ಚಂಪಾಷಷ್ಠಿ ಮಹೋತ್ಸವ ನಡೆದ ನಂತರದಲ್ಲಿ ಕುಮಾರಧಾರ ನದಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಡಿಸೆಂಬರ್ 8ಕ್ಕೆ ನಡೆದಿತ್ತು. ಆ ದಿನದಂದು ಕೂಡ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪಲ್ಲಕ್ಕಿಯಲ್ಲಿ ರಥಬೀದಿಗೆ ತಂದು, ನಂತರ ಬಂಡಿ ರಥದಲ್ಲಿ ಕುಮಾರಧಾರಾವರೆಗೆ ಅವಭೃತೋತ್ಸವದ ಸವಾರಿ ಮೆರವಣಿಗೆ ಮೂಲಕ ತರಲಾಯಿತು. ಬಳಿಕ ಕುಮಾರಧಾರ ನದಿಯಲ್ಲಿ ಸುಂದರ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ನಡೆಯಿತು. ಅಂದು ಕೂಡ ನದಿಯಲ್ಲಿ ನೆರೆದ ಭಕ್ತರ ನಡುವೆ ದೇವಳದ ಆನೆ ಎಲ್ಲರ ಪ್ರೀತಿಯ ಯಶಸ್ವಿನಿ ನೀರಾಟವಾಡಿ ಖುಷಿಪಟ್ಟಿತು.

ಕಾಮೆಂಟ್ ಬಿಡಿ