ಕಂಬಳದ ಭೀಷ್ಮ ‘ಕಡಂಬ’ರಿಗೆ ವೇದಿಕೆಯಲ್ಲೇ ಅವಮಾನ! ಮಂಗಳೂರು ಕಂಬಳ ಕ್ರೀಡಾಕೂಟದಲ್ಲಿ ಇದೆಂಥಾ ಅವ್ಯವಸ್ಥೆ
ಮಂಗಳೂರು: ಕಂಬಳ ಅನ್ನೋದು ಕರಾವಳಿ ಕರ್ನಾಟಕದ ವಿಶೇಷವಾಗಿ ತುಳುನಾಡಿನ ಹೆಮ್ಮೆಯ ಪಾರಂಪರಿಕ ಕ್ರೀಡೆ. ಕೃಷಿಯ ಹಿನ್ನೆಲೆ ಹೊಂದಿರುವ ಈ ಕ್ರೀಡೆ ಇಂದು ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.ಕಂಬಳದ ಭೀಷ್ಮ ‘ಕಡಂಬ’ರಿಗೆ ವೇದಿಕೆಯಲ್ಲೇ ಅವಮಾನ! ಮಂಗಳೂರು ಕಂಬಳ ಕ್ರೀಡಾಕೂಟದಲ್ಲಿ ಇದೆಂಥಾ ಅವ್ಯವಸ್ಥೆ?
ಕಂಬಳ ಅನ್ನೋದು ಕರಾವಳಿ ಕರ್ನಾಟಕದ ವಿಶೇಷವಾಗಿ ತುಳುನಾಡಿನ ಹೆಮ್ಮೆಯ ಪಾರಂಪರಿಕ ಕ್ರೀಡೆ. ಕೃಷಿಯ ಹಿನ್ನೆಲೆ ಹೊಂದಿರುವ ಈ ಕ್ರೀಡೆ ಇಂದು ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ಈತನ್ಮಧ್ಯೆ ಕಳೆದ ಶನಿವಾರ ಮಂಗಳೂರಿನಲ್ಲಿ ನಡೆದ ಕಂಬಳ ಕೂಟದಲ್ಲಿ ಅವಮಾನಕಾರಿ ಘಟನೆಯೊಂದು ನಡೆದಿರುವುದಾಗಿ ವರದಿಯಾಗಿದೆ. ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ವ್ಯಕ್ತಿಯೋರ್ವ ವೇದಿಕೆಯಲ್ಲೇ ಅವಮಾನ ಮಾಡಿರುವ ಘಟನೆ ನಡೆದಿದೆ.
ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರು ಎಂದಿನಂತೆ ಕಂಬಳದ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದರು. ರಾತ್ರಿ ಸುಮಾರು 11.45ರ ಸುಮಾರಿಗೆ ಕಂಬಳದ ಕೋಣಗಳನ್ನು ಬಿಡುವ ಆರಂಭಿಕ ಸ್ಥಾನದ ವೀಕ್ಷಕ ವಿವರಣಾ ಕೌಂಟರ್‌ಗೆ ನುಗ್ಗಿದ ಅರುಣ್ ಶೆಟ್ಟಿ ಎಂಬಾತ ಮೈಕ್ ಕಸಿದುಕೊಂಡು ಗುಣಪಾಲ ಕಡಂಬ ಅವರರಿಗೆ ‘ಈರ್ ಒಂತೆ ಮನಿಪಂದೆ ಕುಲ್ವರಾ, ಮುಲ್ಪ ಎರು ಬುಡ್ಯೆರೆ ಉಂಡು, ಯಾನ್ ಅರುಣ್ ಶೆಟ್ಟಿ ಪಾತೆರುನಿ’ ಎಂದು ಜಂಭದಿಂದ ಹೇಳಿದ್ದಾನೆ. ಆಗ ಗುಣಪಾಲ ಕಡಂಬ ಅವರು ‘ಎಂಕ್ಲು ಮೈಕ್ ಬಂದ್ ಮಲ್ತ್‌ದ್ ಕುಲ್ಲುವ, ನಿಕ್ಲ್ ಏಪ ಬೋಡಾಂಡಲ ಎರು ಬುಡ್ಲೆ’ ಎಂದು ಹೇಳಿದ್ದಾರೆ. (‘ನೀವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ, ಇಲ್ಲಿ ಕೋಣ ಬಿಡೋಕಿದೆ.. ನಾನು ಅರುಣ್ ಶೆಟ್ಟಿ ಮಾತಾಡೋದು’ ಎಂದು ಹೇಳಿದಾಗ ಗುಣಪಾಲ ಕಡಂಬ ಅವರು ‘ನಾವು ಮೈಕ್ ಬಂದ್ ಮಾಡಿ ಕೂತ್ಕೋತೇವೆ.. ನೀವು ಯಾವಾಗ ಬೇಕಾದರೂ ಕೋಣಗಳನ್ನು ಬಿಡಿ’) ಎಂದು ಹೇಳಿದ್ದಾರೆ.
ಇದೊಂದು ಸಣ್ಣಪುಟ್ಟ ವಾಗ್ವಾದ ಆದರೂ ಸಹ ಕಂಬಳ ಕ್ರೀಡಾಕೂಟಕ್ಕೆ ಒಂದು ಶಿಸ್ತಿನ ಚೌಕಟ್ಟನ್ನು ತಂದು, ಇದೊಂದು ಅಥ್ಲೆಟಿಕ್ ಕ್ರೀಡೆ ಎನ್ನುವಷ್ಟರ ಮಟ್ಟಿಗೆ ದಶಕಗಳ ಕಾಲ ಬೆವರು ಹರಿಸಿ ದುಡಿದು ಕಂಬಳದ ಭೀಷ್ಮ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಹಿರಿಯ ಕಂಬಳ ಹೋರಾಟಗಾರ ಗುಣಪಾಲ ಕಡಂಬ ಅವರಿಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಕಂಬಳಾಭಿಮಾನಿಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗುಣಪಾಲ ಕಡಂಬ ಅವರಿಗೆ ಸಾರ್ವಜನಿಕವಾಗಿ ಅವಮಾನ ಮಾಡಿದ ಅರುಣ್ ಶೆಟ್ಟಿ ಮತ್ತು ಕಂಬಳ ಆಯೋಜಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲೇ ನಡೆಯುವ ಈ ಕಂಬಳದಲ್ಲಿ ಇಂತಹುದೊಂದು ಘಟನೆ ನಡೆದರೂ ಸಹ ಸಂಸದರು ಈ ದುರ್ವರ್ತನೆಯನ್ನು ಖಂಡಿಸದೇ ಇರುವುದು ಕಂಬಳಾಭಿಮಾನಿಗಳಿಗೆ ಬೇಸರ ತರಿಸಿದೆ.
ಕಾಮೆಂಟ್ ಬಿಡಿ