ಸ್ಟೋರೀಸ್

ಕಷ್ಟದಲ್ಲಿರುವ ನೇಕಾರರನ್ನು ಮೇಲೆತ್ತುವವರು ಯಾರು

ನೇಯ್ಗೆಯೆಂಬುದೊಂದು ವಿಶಿಷ್ಟವಾದ ಕಸುಬು. ನೇಕಾರ ತನ್ನ ಪ್ರತಿಭೆಗನುಗುಣವಾಗಿ ಅದೆಷ್ಟು ಚೆಂದದ ಬಣ್ಣಗಳಲ್ಲಿ ಅದೆಷ್ಟು ಬಗೆಯ ವಿನ್ಯಾಸಗಳಲ್ಲಿ ಹೆಣೆದಿರುತ್ತಾನೆ ಎನ್ನುವುದನ್ನು ನೋಡಿಯೇ ತಿಳಿಯಬೇಕು. ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ಕಲೆಗಾರ ಈ ನೇಕಾರ. ಅದರಲ್ಲೂ ನಮ್ಮ ನೆಲದ ಹೆಮ್ಮೆ ಉಡುಪಿ ಸೀರೆಗಳು ನಮ್ಮ ಸಾಂಸ್ಕೃತಿಕ ರೂವಾರಿಗಳು. ಆದರೆ ಈ ಉಡುಪಿ ಸೀರೆಯ ನೇಕಾರರ ಪರಿಸ್ಥಿತಿ ಅವರ ಆ ನೇಯ್ಗೆಯಷ್ಟು ಚೆಂದವಾಗಿಲ್ಲ. 

'ಇಳಕಲ್ ಸೀರೆಯು ಬಹಳ ವಿಶೇಷತೆಯಿಂದ ಕೂಡಿದೆ. ಈ ಸೀರೆಯನ್ನು ಉಟ್ಟುಕೊಂಡರೆ ಅದರ ಬೆರಗೇ ಬೇರೆ. ಕಾಟನ್ ಆಗಿರುವುದರಿಂದ ತಂಪಾದ ಭಾವ ಉಂಟಾಗುತ್ತದೆ. ಉಟ್ಟುಕೊಂಡವರ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಮ್ಮ ಇಳಕಲ್ ಜನರು ಸೀರೆಯನ್ನು ತಯಾರಿ ಮಾಡಿದರೂ ಇಲ್ಲಿನ ಹೆಣ್ಣುಮಕ್ಕಳು ಹೆಚ್ಚು ಉಡುವುದಿಲ್ಲ. ಏನಾದರು ಕಾರ್ಯಕ್ರಮ, ಹಬ್ಬಗಳಿದ್ದಾಗ ಉಟ್ಟುಕೊಳ್ಳುತ್ತಾರೆ. ರೈತರು ಮತ್ತು ನೇಕಾರರು ಎರಡು ಕಣ್ಣು ಅಂತಾರೆ... ಆಗ ನಮ್ಮದು ದೊಡ್ಡ ಕುಟುಂಬ ಅರವತ್ತು ಜನರು ಒಂದೇ ಚೌಕಟ್ಟಿನಲ್ಲಿ ಒಂದೇ ಮನೆಯಲ್ಲಿ ಇದ್ವಿ. ಆಗೆಲ್ಲ ಮನೆ ಮಂದಿಯೆಲ್ಲ ಕೂಡಿ ನೇಕಾರಿಕೆಯಲ್ಲಿ ಶ್ರಮ ಪಡುತ್ತಿದ್ದೆವು. ನಾವು ವಿದ್ಯಾಭ್ಯಾಸ ಅಂತ ಹೆಚ್ಚೇನು ಮಾಡಿಲ್ಲ ಕೆಲಸವನ್ನು ಪ್ರಾರಂಭಿಸಿದೆವು. ನೂಲು ಮಾರುವವರೇ ಬೇರೆ, ಕಚ್ಚಾ ಸಾಮಗ್ರಿಗಳನ್ನು ಮಾರುವವರೇ ಬೇರೆ. ನಮ್ಮ ಕೈನಲ್ಲಿ ಬಂಡವಾಳ ಅಂತ ಇದ್ದರೆ ನಾವು ಉದ್ಯೋಗ ಮಾಡಬಹುದು. ಇಲ್ಲವಾದರೆ ಬದುಕು ನರಕ ಸದೃಶವಾಗಿರುತ್ತದೆ. ದೊಡ್ಡ ಕುಟುಂಬ ಇದ್ದ ಮನೆ ಈಗ ಮದುವೆಯಾಗಿ ಎಲ್ಲರೂ ಬೇರೆ ಬೇರೆ ಆಗಿದ್ದಾರೆ. ನಮಗೆ ನೇಕಾರಿಕೆ ವೃತ್ತಿಯನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ಬರಲ್ಲ. 14, 16, 18 ಮೊಳದ ಸೀರೆಗಳನ್ನು ನೇಯುತ್ತೇವೆ. ಮಾಲೀಕರು ಹೇಳಿದಂತೆ ಕಲರ್ ಕಾಂಬಿನೇಶನ್ ಮಾಡುತ್ತೇವೆ. ಒಂದು ಕಾಲದಲ್ಲಿ ಕಡ್ಡಿ ಸೀರೆ, ಮಿಂಚಾಳೆ ದಡಿ, ಸಣ್ ದಡಿ ಸೀರೆ ಮೊದಲಾದ ಕೈ ಮಗ್ಗದ ಸೀರೆಗಳಿಗೆ ಹೆಚ್ಚು ಬೇಡಿಕೆ ಇತ್ತು. ಈಗ ಪವರ್ಲೂಮ್ ಬಂದ ಮೇಲೆ ಈಗ ಕೈ ನೇಯ್ಗೆಯ ಸೀರೆಗಳಿಗೆ ಅಂದಿನ ಬೇಡಿಕೆ ಇಲ್ಲ. ಆಗೆಲ್ಲ ಮಾಲು ಸಸ್ತ ಇತ್ತು. ಸೀರೆಗೆ ಬೇಡಿಕೆ ಇತ್ತು. ಈಗ ಎಷ್ಟು ಶ್ರಮ ಪಟ್ಟರು ಹೆಚ್ಚಿನ ಲಾಭ ಸಿಗುವುದಿಲ್ಲ. ಒಂದು 16 ಮೊಳದ ಸೀರೆಗೆ 900/- ರೂಪಾಯಿ. ಅದಕ್ಕೆ ಹಾಕುವ ಬಂಡವಾಳ 800/- ಅದೂ ಮನೆಯ ಹೆಣ್ಣುಮಕ್ಕಳೆಲ್ಲ ಕೈ ಗೂಡಿಸಿ ಕೆಲಸ ಮಾಡಿ ಕೊಟ್ಟಿರುತ್ತಾರೆ. ಇಷ್ಟೆಲ್ಲಾ ಶ್ರಮ ಹಾಕಿದರೂ ಒಂದು ಸೀರೆಗೆ 100 ರೂಪಾಯಿ ಸಿಗುವುದು ಕಷ್ಟ. ಎರಡು ದಿನಕ್ಕೆ ಒಂದು ಸೀರೆ ಸಿದ್ಧವಾಗುತ್ತದೆ. ಹಾಗಾದರೆ ಒಂದು ದಿನಕ್ಕೆ 50 ರೂಪಾಯಿ ಕೂಲಿ ಸಿಕ್ಕಿದಂತಾಗುತ್ತದೆ'.

ನೇಕಾರರಿಗೆ ಅನುಕೂಲಗಳು ಕಡಿಮೆ ಇವೆ. ಕೈ ಮಗ್ಗದ ಸೀರೆಗಳು ಹೆಚ್ಚು ಬಾಳಿಕೆ ಬರುತ್ತವೆ. ನಾವು ಒಂದು ವಾರಕ್ಕೆ ಐದು ಸೀರೆ ನೇಯ್ದರೆ ಹೆಚ್ಚು. ಪವರ್ಲೂಮ್ ದಾದರೆ ಒಂದು ವಾರಕ್ಕೆ 16 ಸೀರೆ ತಯಾರಾಗುತ್ತದೆ. ಬಂಡವಾಳ ಇದ್ದರೇನೇ ನಮ್ಮ ಉದ್ಯೋಗ. ಮನೆಯ ಎಲ್ಲರೂ ಸೇರಿ ಕೈ ಜೋಡಿಸಿದರೆ ಒಂದು ಸೀರೆ ತಯಾರಾಗುತ್ತದೆ. ಪ್ರತಿಯೊಂದರ ಬೆಲೆ ಗಗನಕ್ಕೆ ಏರಿದೆ. ಪಿತ್ರಾರ್ಜಿತ ಆಸ್ತಿಯಿಂದ ಬಂದ ಮನೆ ಇರುವುದರಿಂದ ಈ ಚೌಕಟ್ಟಿನೊಳಗೆ ಬದುಕುತ್ತಿದ್ದೇವೆ. ಇಲ್ಲದಿದ್ರೆ ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುವುದು ಕಷ್ಟಸಾಧ್ಯವೇ ಆಗುತ್ತಿತ್ತು. ನಾವು ದುಡಿಯುವುದು ಹೊಟ್ಟೆಗೆ ಬಟ್ಟೆಗೆ ಸಾಕಾಗೋದಿಲ್ಲ. ಇನ್ನು ನಮ್ಮ ಮಕ್ಕಳಿಗೆ ಶಾಲೆ ಫೀಸ್ ಎಲ್ಲ ಕಟ್ಟಿ ಉನ್ನತ ಮಟ್ಟದ ಶಿಕ್ಷಣ ಕೊಡಿಸಲು ಅಸಾಧ್ಯವೇ ಸರಿ. ಸರ್ಕಾರದಿಂದ ನಮಗೆ ಸಾಲದ ಬಡ್ಡಿದರ 0% ಅಥವಾ ಹೆಚ್ಚೆಂದರೆ 3% ಗೆ ಇಳಿಸಿದರೆ ನಮಗೆ ಬಡ್ಡಿ ಹೊರೆ ಕಡಿಮೆಯಾಗುತ್ತದೆ. ಇದರಿಂದ ನೇಕಾರರು ಸ್ವಲ್ಪ ನಿಟ್ಟುಸಿರು ಬಿಡಬಹುದು. ನಮ್ಮದೇ ನೆಲದ ಈ ಉತ್ಪನ್ನಗಳ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ. ತಿಳಿದವರು ನಮ್ಮ ನೇಯ್ಗೆಯ ಬಟ್ಟೆಗಳನ್ನು ಖರೀದಿಸಿದರೆ ನಮಗೂ ಅನುಕೂಲ' ಎನ್ನುತ್ತಾರೆ ಸುಕ್ರರಾ ಜ್ ಐಲಿ.

ನೇಕಾರಿಕೆಯನ್ನು ಅವಲಂಬಿಸಿರುವ ಸಮುದಾಯಗಳು, ಎಲ್ಲರ ಮಾನ ಕಾಯುವ ಬಟ್ಟೆ ತಯಾರಿಸುವ ನಮ್ಮ ಬಡ ನೇಕಾರರು ತಾವು ಅರೆ ಬರೆ ಉಂಡು ತಮ್ಮ ನೇಕಾರಿಕೆ ವೃತ್ತಿಯಲ್ಲಿ ತೊಡಗಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾಗಿರುವ ನಮ್ಮ ಗೌರವದ ಉಡುಪನ್ನು ಎಲ್ಲರೂ ಮತ್ತೆ ಖರೀದಿಸುವಂತಾಗಲಿ. ಎಷ್ಟೋ ಜನ ಅದೆಷ್ಟೋ ಹಣ ತೆತ್ತು ದೊಡ್ಡ ಬ್ರಾಂಡೆಡ್ ಬಟ್ಟೆಗಳನ್ನು ಖರೀದಿಸಲು ಮುಗಿಬೀಳುತ್ತಾರೆ. ಬದಲಿಗೆ ನಮ್ಮ ನೆಲಗಟ್ಟಿನ ಇಂತಹ ಒಳ್ಳೆಯ ಉತ್ಪನ್ನಗಳನ್ನು ಖರೀದಿಸಿದರೆ ಈ ಉತ್ಪಾದನೆ, ಅದರ ಅಲ್ಪ ಆದಾಯವನ್ನು ನೆಚ್ಚಿಕೊಂಡಿರುವ ನಮ್ಮ ನೇಕಾರರಿಗೆ ಸಹಾಯವಾಗುತ್ತದೆ. ಸರ್ಕಾರವೂ ಕೂಡ ಇಂತವರ ನೆರವಿಗೆ ಬರಬೇಕು. ಜನಪ್ರತಿನಿಧಿಗಳ ಭರವಸೆಗಳು, ಬರೀ ಘೋಷಣೆಗಳಿಗೆ ಸೀಮಿತವಾಗದೆ ಸಕಾಲದಲ್ಲಿ ತಲುಪಲಿ. ನೇಕಾರರ ಬದುಕು ಅವರ ನೇಯ್ಗೆಯಂತೆ ಚೆಂದಗಾಣಲಿ. ನೇಕಾರ ಸಮುದಾಯದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಉನ್ನತ ಮಟ್ಟ ತಲುಪಲಿ ಎಂಬ ಹಾರೈಕೆ ನಮ್ಮದು.

ಕಾಮೆಂಟ್ ಬಿಡಿ

Join Us