ದ.ಕ.ಜಿಲ್ಲೆಯಲ್ಲಿ ಸ್ಥಗಿತಗೊಂಡ ಕೆಂಪು ಕಲ್ಲು, ಮರಳುಗಾರಿಕೆಗೆ
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಕೆಂಪು ಕಲ್ಲು ತೆಗೆಯಲು ಹಾಗೂ ಮರಳುಗಾರಿಕೆಗೆ ಸಂಬಂಧಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಇದಕ್ಕೊಂದು ಕಾನೂನು ರೀತಿಯ ಕ್ರಮಕ್ಕೆ ಮುಂದಿನ ವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರುಗಳಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ ಧ್ವನಿಯೆತ್ತಿ ದ.ಕ. ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿ ಸೇರಿದಂತೆ ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗದ ಸಮಸ್ಯೆಯಾಗಿರುವ ಕಾರಣ ಸಕ್ರಮ ಮರಳು ಹಾಗೂ ಕೆಂಪು ಕಲ್ಲು ತೆಗೆಯಲು ಅವಕಾಶ ನೀಡಲು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಸಚಿವರಯ ಬೆಂಗಳೂರಿನಲ್ಲಿ ಸಭೆಗೆ ಮುನ್ನ ದ.ಕ. ಜಿಲ್ಲಾಧಿಕಾರಿ ಕೆಂಪು ಕಲ್ಲು ಮತ್ತು ಮರಳಿನ ಅಭಾವದ ಬಗ್ಗೆ ಸಭೆ ನಡೆಸುವಂತೆ ಸಲಹೆ ನೀಡಿದರು.
ಮರಳುಗಾರಿಕೆಗೆ ಮತ್ತು ಕೆಂಪು ಕಲ್ಲು ತೆಗೆಯಲು ಮರು ಟೆಂಡರ್ ಮಾಡುವ ಬ್ಲಾಕ್‌ಗಳ ಪರವಾನಿಗೆಯ ಪಟ್ಟಿಯನ್ನು ಒಳಗೊಂಡು ವರದಿ ಸಲ್ಲಿಸಬೇಕು. ಜಿಲ್ಲಾಡಳಿತದ ವರದಿಯನ್ವಯ ಬೆಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಯುಕ್ತರೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ತೆಗೆಯುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುತ್ತದೆ. ಅಲ್ಲದೆ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ರಾಜಧನವನ್ನು ವಿಧಿಸಲಾಗಿದೆ ಎಂಬ ಆರೋಪದ ಕುರಿತಂತೆಯೂ ಚರ್ಚಿಸಲಾಗುವುದು.
ಜಿಲ್ಲೆಯಲ್ಲಿ ಅಕ್ರಮ ಕೆಂಪುಕಲ್ಲಿನ ಗಣಿಗಾರಿಕೆಗೆ ಸಂಬಂಧಿಸಿ ಲೋಕಾಯುಕ್ತರು ಈಗಾಗಲೇ 18 ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಸದ್ಯ ಜಿಲ್ಲೆಯಲ್ಲಿ ಈ ಬಗ್ಗೆ ತಾತ್ಕಾಲಿಕ ಕ್ರಮಗಳನ್ನು ಅನುಸರಿಸಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಈ ಬಗ್ಗೆ ನಿರ್ಧಾರ ಆಗಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ಸಂದರ್ಭ ಎಸ್ಪಿ ಡಾ. ಅರುಣ್ ಕುಮಾರ್ ಮಾತನಾಡಿ, ಉಡುಪಿಯಲ್ಲಿ ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ನಿರಂತರವಾಗಿ ಮರಳು ದೊರೆಯುತ್ತಿದೆ. ಅದೇ ಮಾದರಿಯಲ್ಲಿ ದ.ಕ.ಜಿಲ್ಲೆಯಲ್ಲೂ ಆ್ಯಪ್ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ನೀಡಿದ್ದಲ್ಲಿ ಕ್ರಮಬದ್ಧವಾಗಿ ಮರಳು ಪೂರೈಸಬಹುದು. ಹೆಚ್ಚಿನ ಹಣ ಪಡೆದಾಗ ದೂರು ನೀಡಿದರೆ ಕ್ರಮ ವಹಿಸಬಹುದು ಎಂದು ಹೇಳಿದರು.
ಕಾಮೆಂಟ್ ಬಿಡಿ