ಕುಂಬಳೆ ಆರಿಕ್ಕಾಡಿಯ ಹಳೆಯದಾದ ಕೋಟೆಯ ಆವರಣದಲ್ಲಿ ನಿಧಿ ಶೋಧ: ಪುತ್ತೂರು ಪಂಚಾಯತ್ ಉಪಾಧ್ಯಕ್ಷ ಸೇರಿದಂತೆ ಐವರ ಬಂಧನ
ಕುಂಬಳೆ : ನಿಧಿ ಶೋಧಕ್ಕಾಗಿ ಪುರಾತತ್ವ ಇಲಾಖೆಯಡಿ ಬರುವ ಕುಂಬಳೆ ಆರಿಕ್ಕಾಡಿಯ ಹಳೆಯದಾದ ಕೋಟೆಯ ಆವರಣದಲ್ಲಿ ಅಗೆತ ಮಾಡಿದ್ದಕ್ಕಾಗಿ ಮೊಗ್ರಾಲ್ ಪುತ್ತೂರು ಪಂಚಾಯತ್ ಉಪಾಧ್ಯಕ್ಷ ಸೇರಿದಂತೆ ಐವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೊಗ್ರಾಲ್ ಪುತ್ತೂರು ಪಂಚಾಯತ್ ಉಪಾಧ್ಯಕ್ಷ ಮುಜೀಬ್ ರಹ್ಮಾನ್ ಯಾನೆ ಮುಜೀಬ್ ಕಂಬಾರ್ (46), ಪೊವ್ವಲ್ ನಿವಾಸಿ ಮೊಹಮ್ಮದ್ ಫಿರೋಸ್ (28), ಮೊಗ್ರಾಲ್ ಪುತ್ತೂರಿನ ಜಾಫರ್ (26), ಪಾಲಕುನ್ನಿನ ಅಜಾಸ್ (26), ನೀಲೇಶ್ವರ ಬಂಗಳದ ಸಹದುದ್ದೀನ್(26) ಎಂದು ಗುರುತಿಸಲಾಗಿದೆ.
ಕೋಟೆಯ ಒಳಗಡೆ ಕೆಲವು ಯುವಕರು ಅಗೆಯುತ್ತಿದ್ದಾರೆಂದು ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಗ್ರಾಲ್ ಪುತ್ತೂರು ಪಂಚಾಯ್ತಿ ಉಪಾಧ್ಯಕ್ಷ ಮುಜೀಬ್ ಕಂಬಾರ್ ಎಂಬಾತನ ಸೂಚನೆಯಂತೆ ನಿಧಿ ಶೋಧ ಮಾಡಿದ್ದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿ ಹಾರೆ, ಇನ್ನಿತರ ವಸ್ತುಗಳು ಸಿಕ್ಕಿದ್ದು ವಶಕ್ಕೆ ಪಡೆಯಲಾಗಿದೆ.
ಕೋಟೆಯ ಒಳಗಡೆ ಜನರು ಇರುವ ಬಗ್ಗೆ ಸದ್ದು ಕೇಳಿಬಂದಿದ್ದು, ಯಾರೆಂದು ನೋಡಲು ಸ್ಥಳೀಯರು ತೆರಳಿದ್ದರು. ಜನರು ಬರುತ್ತಿದ್ದುದನ್ನು ನೋಡಿ ಯುವಕರು ಪರಾರಿಯಾಗಲು ಯತ್ನಿಸಿದ್ದು, ಅಷ್ಟರಲ್ಲಿ ಒಂದಿಬ್ಬರನ್ನು ಹಿಡಿದು ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಣ್ಣೂರಿನ ಕುಟುಂಬಶ್ರೀ ಕಾರ್ಯಕರ್ತರು ಈ ಬಗ್ಗೆ ಮಾತನಾಡುತ್ತಿದ್ದು ಕೋಟೆ ಒಳಗಡೆ ನಿಧಿ ಇರುವ ಬಗ್ಗೆ ವದಂತಿ ಇತ್ತು. ಹೀಗಾಗಿ ಬಾವಿ ಒಳಗಡೆ ಅಗೆದಿದ್ದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಗಳನ್ನು ಸ್ಟೇಶನ್ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.
ಕಾಮೆಂಟ್ ಬಿಡಿ