ಬೇಂದ್ರೆ ಮಾಸ್ತಿಯ ಸಂಬಧ ಅಣ್ಣ ತಮ್ಮಂದಿರoತಿತ್ತು. ಮಹಾ ಸ್ವಾಭಿಮಾನಿಯಾಗಿದ್ದ ಬೇಂದ್ರೆ ಉದ್ಯೋಗ ಕಳೆದುಕೊಂಡಿದ್ದ ಕಷ್ಟದ ದಿನಗಳವು. ಮಾಸ್ತಿಯವರು ಬೇಂದ್ರೆಯವರ ಕುಟುಂಬ ನಿರ್ವಹಣೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದರು. 1944 ರಲ್ಲಿ ಬೇಂದ್ರೆಯವರಿಗೆ ಸೊಲ್ಲಾಪುರದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆ ಸಿಕ್ಕಿತು. ಸ್ಥಿರ ನೌಕರಿ ಸಿಕ್ಕಿ ಕೆಲವು ವರ್ಷಗಳಾದ ಮೇಲೆ ಬೇಂದ್ರೆ ಬೆಂಗಳೂರಿಗೆ ಬಂದು ಮಾಸ್ತಿಯವರನ್ನು ಕಂಡರು. ಉಭಯಕುಶಲೋಪರಿ ಮಾತಾಡಿ ಕೊನೆಗೆ ಹಣದ ಗಂಟನ್ನು ಮಾಸ್ತಿಯವರಿಗೆ ನೀಡಿದರು ಬೇಂದ್ರೆ ನೀವು ನನ್ನ ಕಷ್ಟದ ದಿನಗಳಲ್ಲಿ ಪ್ರತಿ ತಿಂಗಳು ನೀಡಿದ ಹಣ ಸ್ವೀಕರಿಸಿ ಎಂದರು. ಮಾಸ್ತಿ ಹಣ ಪಡೆಯಲು ನಿರಾಕರಿಸಿದರು. ಬೇಂದ್ರೆಯವರೂ ಹಣ ವಾಪಾಸು ಪಡೆಯಲು ಒಪ್ಪಲಿಲ್ಲ. ಕೊನೆಗೆ ಮಾಸ್ತಿ, ಆಯ್ತು ಆ ಹಣ ಇಟ್ಟು ಹೋಗು ಎಂದರು. ಬೇಂದ್ರೆ ಹಣ ಇಟ್ಟು ಮನಸ್ಸನ್ನು ಹಗುರ ಮಾಡಿಕೊಂಡು ಹೋದರು. ಕೆಲವು ವರುಷಗಳು ಕಳೆದವು. ಬೇಂದ್ರಯವರ ಮಗಳ ಮದುವೆ. ಮದುವೆ ಮನೆಯಲ್ಲಿ ಸಂಭ್ರಮದಿoದ ಓಡಾಡಿದ ಮಾಸ್ತಿ, ವಧು-ಬೇಂದ್ರೆ ಮಗಳಿಗೆ ಬೇಂದ್ರೆ ಕೊಟ್ಟಿದ್ದ ಆ ಇಡೀ ಹಣದ ಗಂಟನ್ನು ಹಾಗೇ ತಂದು ಉಡುಗೊರೆಯಾಗಿ ನೀಡಿದರು.
ಮಾಸ್ತಿ ಕೊಟ್ಟ ಉಡುಗೊರೆ...!
