ಎಲ್ಲಾ ಓಪನ್ ಓಕೆ, ಕೊರೋನಾ ಹಾಕ್ತಿದೆ ಕೇಕೆ, ಥಿಯೇಟರ್ ಬಂದ್ ಯಾಕೆ..!?

theater close

ಮಂಗಳೂರು: ಜಗತ್ತಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಬರೋಬ್ಬರಿ ಏಳು ಮಿಲಿಯನ್ ತಲುಪುತ್ತಿದೆ. ಭಾರತವೂ ಕೂಡ ಕೊರೋನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರೀ ಸಾಧನೆ ಮಾಡುತ್ತಾ ಮುಂದಕ್ಕೆ ದಾಪುಗಾಲಿಡುತ್ತಿದೆ. ಆದರೆ ಲಾಕ್‌ಡೌನ್ ಮಾಡಿ ಕೊಟ್ಯಾಂತರ ಜನರನ್ನು ಕೊರೋನಾದಿಂದ ಪಾರು ಮಾಡಿದ್ದ ಸರ್ಕಾರವು, ದೇಶದಲ್ಲಿ ಸೋಂಕಿತರ  ಸಂಖ್ಯೆ ಮೂರು ಲಕ್ಷದ ಆಸುಪಾಸಿನಲ್ಲಿರುವಾಗಲೇ ಲಾಕ್‌ಡೌನನ್ನು ಅನ್‌ಲಾಕ್ ಮಾಡಿಬಿಟ್ಟಿದೆ.


ಸರ್ಕಾರವು ಒಂದು ವೇಳೆ ಲಾಕ್‌ಡೌನನ್ನು ಜೂನ್ ತಿಂಗಳಲ್ಲಿ 5.0 ಹೆಸರಿನಲ್ಲಿ ಮುಂದುವರೆಸಿದ್ದೇ ಆದಲ್ಲಿ, ರಾಷ್ಟ್ರವು ಆರ್ಥಿಕವಾಗಿ ಮುಗ್ಗರಿಸಿ ತತ್ತರಿಸಿ ಹೋಗುದರಲ್ಲಿತ್ತು. ಆದ ಕಾರಣ ಬೇರೆ ವಿಧಿಯಿಲ್ಲದೆ ಸಾರ್ವಜನಿಕ ಕ್ಷೇತ್ರಗಳನ್ನು ಸುರಕ್ಷಾ ಮುಂಜಾಗೃತ ಕ್ರಮಗಳ ಕಟ್ಟುನಿಟ್ಟಿನ ಆದೇಶದ ಮೇರೆಗೆ ತೆರೆಯಲಾಗಿದ್ದರೂ, ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ದುಪ್ಪಟ್ಟಾಗುತ್ತಿರುವುದನ್ನು ನೋಡಿ ಜನ ಕಂಗಾಲಾಗಿದ್ದಾರೆ. 


ಕೊರೋನಾ ಕಾಲಿಡದ ಸ್ಥಳ ಭಾರತದಲ್ಲಿ ಇಲ್ಲ ಅನ್ನುವಷ್ಟರ ಮಟ್ಟಿಗೆ ಕೊರೋನಾ ರಾಷ್ಟ್ರಾದ್ಯಂತÀ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಅದೇನೆ ಇರಲಿ ಆರ್ಥಿಕ ಪುನಶ್ಚೇತನ ಕಾರಣದಿಂದ ಲಾಕ್‌ಡೌನನ್ನು ಅನ್‌ಲಾಕ್ ಮಾಡಿರುವ ಸರ್ಕಾರವು, ಸರ್ಕಾರಕ್ಕೆ ಹೆಚ್ಚಿನ ಆದಾಯವನ್ನು ತಂದುಕೊಡುವ ಬಾರ್‌ಗಳನ್ನು ತೆರೆಯಲು ಅವಕಾಶವಿತ್ತರು. ಬಾರ್‌ಗಳಲ್ಲಿ ಸಾಲಾಗಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗಿ ಎಂದು ಹೇಳಿದ್ರೆ ಕುಡುಕರು ಕೇಳ್ತಾತರೆಯೇ..! ಅದು ಬಿಡಿ ಕುಡಿದಾದ ಮೇಲೆ ರೋಡೇ ಕಾಣದ ಕುಡುಕನಿಗೆ ಸಾಮಾಜಿಕ ಅಂತರ ಕಾಣಿಸುತ್ತಾ..?


ಅದನ್ನು ಬಿಟ್ಟಾಕೋಣ, ನಿನ್ನೆಯಿಂದ ರಾಜ್ಯದಾದ್ಯಂತ ಮಾಲ್, ರೆಸ್ಟೋರೆಂಟ್, ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವ ಸರ್ಕಾರವಿಂದು ಪ್ರವಾಸೋದ್ಯಮಕ್ಕೂ ಅನುಮತಿ ನೀಡಿದೆ. ಹೀಗೆ ಬಹುತೇಕಾ ಎಲ್ಲಾ ಸಾರ್ವಜನಿಕ ಕ್ಷೇತ್ರಗಳನ್ನು ತೆರೆಯಲು ಅನುಮತಿ ನೀಡಿರುವ ಸರ್ಕಾರವು, ಕೇವಲ ಸಿನೆಮಾ ರಂಗಕ್ಕೆ ಮಾತ್ರ ತಾರತಮ್ಯವನ್ನು ಮಾಡುತ್ತಿರುವಂತೆ ಭಾಸವಾಗುತ್ತಿದೆ.


ಚಿತ್ರಮಂದಿರಗಳಲ್ಲೂ ಸುರಕ್ಷಾ ಮುಂಜಾಗೃತ ಕ್ರಮಗಳನ್ನು ಬಳಸಿಕೊಂಡು ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಿನೆಮಾ ವೀಕ್ಷಿಸಲು ಅನುವು ಮಾಡಿಕೊಡಬಹುದು ಎಂದು ಸಿನಿಪ್ರಿಯರು ಪ್ರಶ್ನಿಸಿದರೆ, ಮೂರು ಘಂಟೆಗಳ ಕಾಲ ಸುದೀರ್ಘವಾಗಿ ಯಾರೂ ಕೂಡ ಮಾಸ್ಕ್ ಧರಿಸಲಾರರು ಅದೂ ಅಲ್ಲದೆ. ಚಿತ್ರಮಂದಿರದೊಳಗೆ ಕತ್ತಲಿರುವುದರಿಂದ ಸಾಮಾಜಿಕ ಅಂತರವನ್ನು ಯಾರೆಲ್ಲಾ ಸರಿಯಾಗಿ ಪಾಲಿಸುತ್ತಿದ್ದಾರೆ-ಪಾಲಿಸುತ್ತಿಲ್ಲ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಆದ ಕಾರಣ ಈ ಸಂಧರ್ಭದಲ್ಲಿ ಚಿತ್ರಮಂದಿರಗಳನ್ನು ತೆರೆಯದೇ ಇರುವುದೇ ಸೂಕ್ತ ಎಂದು ತಜ್ಞರೊಬ್ಬರು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದ್ದಾರೆ.

ಆದರೆ, ಈ ಮೊದಲು ರೆಸ್ಟೋರೆಂಟ್‌ಗಳಲ್ಲಿ ಎಸಿಯನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸದಂತೆ ಅದೇಶ ನೀಡಿದ್ದ ಸರ್ಕಾರವು ಲಾಕ್‌ಡೌನ್ ನಂತರ ತೆರೆದುಕೊಂಡ ಮಾಲ್‌ಗಳಲ್ಲಿ ಎಸಿಯನ್ನು ನಿರ್ಧಿಷ್ಟ ತಾಪಮಾನದಲ್ಲಿರಿಸಿ ಕಾರ್ಯಾನಿರ್ವಹಿಸಬಹುದು ಎಂದಿದೆ. ಜೊತೆಗೆ ಕಿಟಕಿಯೇ ಇಲ್ಲದ ಮಾಲ್‌ಗಳಲ್ಲಿ ಗಾಳಿಯಾಡಲು ವ್ಯವಸ್ಥೆ ಮಾಡಬೇಕು ಎಂದಿತ್ತು. ಆದರೆ ಚಿತ್ರಮಂದಿರಗಳಿಗೆ ಸಂಬಂಧಿಸಿದಂತೆ ಇದ್ಯಾವ ಸುರಕ್ಷಾ ಕ್ರಮಗಳನ್ನು ಹೇಳುವ ಗೋಜಿಗೆ ಹೋಗದಿರುವ ಸರ್ಕಾರವು ಜುಲೈ ಬಳಿಕ ಥಿಯೇಟರ್ ಓಪನಿಂಗ್‌ಗೆ ಅನುಮತಿ ನೀಡಲಾಗುವುದು ಎಂದಿದೆ. ಆದರೆ ಒಂದು ಸಿನೆಮ ಚಿತ್ರಮಂದಿರದಲ್ಲಿ ಪ್ರದರ್ಶನವಗಬೇಕಾದರೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಅದರಲ್ಲೇನು ತಪ್ಪಿಲ್ಲ ಅನ್ನೋಣ. 

ಅಷ್ಟೇ ಅಲ್ಲದೆ ಚಿತ್ರ ಆರಂಭವಾಗುವುದಕ್ಕೂ ಮುನ್ನ ಪ್ರೇಕ್ಷಕ ರಾಷ್ಟ್ರಗೀತೆ ಗೌರವ ಸಲ್ಲಿಸಬೇಕು. ಇದರಲ್ಲೇನು ತಪ್ಪಿಲ್ಲದಿದ್ದರೂ, ಕೇವಲ ಚಿತ್ರಮಂದಿರಗಳಲ್ಲಿ ಮಾತ್ರ ಈ ನಿಯಮವೇಕೆ ರಾಜಕೀಯ ಅಥವಾ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ರಾಷ್ಟ್ರಗೀತೆಯನ್ನು ಹಾಡಬೇಕು ಅಥವ ಮೊಳಗಿಸಬೇಕೆಂಬ ನಿಯಮವನ್ನು ಸರ್ಕಾರವೇಕೆ ಜಾರಿಗೊಳಿಸುವುದಿಲ್ಲ ಎಂಬುದು ಸಾಮಾನ್ಯ ಸಿನಿ ಪ್ರೇಕ್ಷಕನ ಯಕ್ಷ ಪ್ರಶ್ನೆಯಾಗಿದೆ.


ಇದನ್ನೆಲ್ಲ ಬದಿಗಿಡೋಣ, ಸರ್ಕಾರವೇ ಮಾರಾಟಕ್ಕೆ ಅನುಮತಿ, ಪರವಾನಿಗೆಯನ್ನು ನೀಡಿ, ಅದರಿಂದ ತೆರಿಗೆಯ ಹೊಳೆಯನ್ನೇ ಹರಿಸಿ ನುಂಗಿ ನೀರು ಕುಡಿವ ಮಧ್ಯಪಾನವು, ಆರೋಗ್ಯಕ್ಕೆ ಹಾನಿಕಾರಕ ಎಂದು ಸುಖಾಸುಮ್ಮನೆ ಅರ್ಥವಿಲ್ಲದಮತೆ ವ್ಯರ್ಥ ಬರಹಗಳನ್ನು ಪ್ರತಿಯೊಂದು ಸಿನೆಮಾದಲ್ಲಿ ಅಳವಡಿಸಲು ಕಡ್ಡಾಯ ಮಾಡೋದು ಸರ್ಕಾರ ಯಾವ ಪುರುಷಾರ್ಥಕ್ಕಾಗಿ, ಜೊತೆಗೆ ಸಿನೆಮಾದಲ್ಲಿ ಕುದುರೆಯನ್ನೋ ನಾಯಿಯನ್ನೋ, ಪಾರಿವಾಳವನ್ನೋ ಚಿತ್ರೀಕರಣದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಳಸಿದ್ರೆ ಅದಕ್ಕೆ ಕುಲಗೆಟ್ಟ ಪ್ರಾಣಿ ದಯಾ ಸಂಘದ ಪ್ರಮಾಣಪತ್ರ ಪಡೆಯಬೇಕು ಎಂಬ ನಿಯಮ ಜಾರಿಗೊಳಿಸಿದ್ದೇಕೆ.


ಸರ್ಕಾರಿ ಕಾರ್ಯಕ್ರಮಗಳಲ್ಲಿ ಉದ್ಘಾಟನೆ ಸಂಧರ್ಭದಲ್ಲಿ ಬಲೂನ್‌ಗಳೊಂದಿಗೆ ಪಾರಿವಾಳವನ್ನು ಜನನಾಯಕರು ಹಾರಿಸಿ ಬಿಡುವುದಿಲ್ಲವೇ ಅದಕ್ಕೆ ಪ್ರಮಾಣಪತ್ರ ಬೇಕಾಗಿಲ್ಲವೇ.. ಅಂದರೆ ಸಿನೆಮಾ ರಂಗವು ಸರ್ಕಾರದ ಗುಲಮಾಗಿಬಿಟ್ಟಿದೆ. ಆದ ಕಾರಣ ಯಾರೂ, ಎಲ್ಲವೂ ಓಪನ್ ಆಗಿದೆ ಚಿತ್ರಮಂದಿರಗಳು ಓಪನ್ ಆಗದಿದ್ದರೆ ನಮ್ಮ ಬದುಕು ಮುಂದಕ್ಕೆ ಹೋಗೋದಿಲ್ಲ ಎಂದು ಧೈರ್ಯವಾಗಿ ಹೇಳಲು ಮುಂದೆ ಬರುತ್ತಿಲ್ಲ ಎಂದು, ಚಿತ್ರಮಂದಿರವಿಲ್ಲದೆ ಆನ್‌ಲೈನಲ್ಲೇ ಸಿನೆಮಾ ನೋಡುತ್ತಾ ಕುಳಿತ ಸಿನಿ ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

 

  • ಭಾರವಿ ಕಲ್ಲಡ್ಕ, ಫಿಲ್ಮ್ ಬ್ಯೂರೋ, ಟ್ರೂನ್ಯೂಸ್ ಕನ್ನಡ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.