ರಂಗು ರಂಗಿನ ಬಟ್ಟೆ ನೇಯ್ದು ಜನರ ಬದುಕಿಗೆ ಮೆರಗು ನೀಡುವ ನೇಕಾರರ ಬದುಕು ಬಣ್ಣ ಕಳೆದುಕೊಳ್ಳುತ್ತಿದೆ. ರೈತ ದೇಶದ ಬೆನ್ನೆಲುಬು ಆದರೆ ನೇಕಾರ ಮಾನ ಮುಚ್ಚಿಕೊಳ್ಳಲು ಬಟ್ಟೆ ಒದಗಿಸುತ್ತಾನೆ. ಆದರೆ ದೇಶದ ಇಂದಿನ ಪರಿಸ್ಥಿತಿಯಲ್ಲಿ ಇಬ್ಬರ ಪರಿಸ್ಥಿತಿಯು ತುಂಬಾ ಚಿಂತಾಜನಕವಾಗಿದೆ. ಅದರಲ್ಲೂ ಕೈಮಗ್ಗ ನಂಬಿ ಬದುಕು ಸಾಗಿಸುತ್ತಿರುವ ನೇಕಾರರ ಬದುಕು ಕಣ್ಣಿಂದ ನೋಡಲಾಗದು.
‘ಸರ್.. ನನ್ನ ಹತ್ರ ಕೈ ಮಗ್ಗ ಐತ್ರಿ ಯಾರ್ರೆ ಮ್ಯೂಸಿಯಂನ್ಯಾಗ ಇಟಕೊಳ್ಳಾಕ ದುಡ್ಡಿಗೆ ಖರೀದಿ ಮಾಡಿದ್ರ ನನ್ನ ಬಡತನಕ್ಕ ಆಸರ ಆಗ್ತೈತ್ರೀ.. ನೀವು ಪ್ರಯತ್ನ ಮಾಡಬೇಕ್ರಿ..’ ನೇಕಾರನ ಮಾತು, ಇಂದಿಗೆ ನೇಕಾರ ಸಮಾಜದ ಸಂಸ್ಕೃತಿ ಮತ್ತು ಆರ್ಥಿಕ ಸ್ಥಿತಿ-ಗತಿಯ ಚಿತ್ರಣವನ್ನು ಸ್ಥೂಲವಾಗಿಯೇ ಧ್ವನಿಸುತ್ತದೆ.

ರಾತ್ರಿ-ಹಗಲೆನ್ನದೇ ನೇಕಾರರು ಬಾಳುವ ಬೀದಿಗಳು ಯಾವತ್ತೂ ಎಚ್ಚರದಿಂದಿರುತ್ತವೆ. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ನಿರಂತರವಾಗಿ ಮನೆಗಳಿಂದ ಹೊರಹೊಮ್ಮುವ ಕೈಮಗ್ಗದ ಲಟಕ್.. ಲಟಕ್ ಸದ್ದು ಸಂಜೆಯಾಗುತ್ತಿದ್ದಂತೆ ನಿಶ್ಶಬ್ದ! ತಮ್ಮ ಆರಾಧ್ಯ ದೇವತೆಗಳು ಗೋಧೂಳಿ ಸಮಯದಲ್ಲಿ ತಮ್ಮನ್ನು ಅನುಗ್ರಹಿಸುತ್ತಾರೆ ಎಂಬ ದೃಢ ವಿಶ್ವಾಸದಿಂದ ಮನೆಯೊಳಹೊರಗೆ ದೀಪ ಬೆಳಗಿ ದೈವಾನುಗ್ರಹಕ್ಕಾಗಿ ನೇಕಾರರು ಕಾಯುತ್ತಿದ್ದ ದಿನಗಳಿದ್ದವು!
ಮಗ್ಗದ ಕೊಟ್ಟಿಗೆಗಳಿಂದ ಒಬ್ಬೊಬ್ಬ ನೇಕಾರನೂ ಕೈಮಗ್ಗಕ್ಕೆ ನಮಸ್ಕರಿಸಿ ಕೆಳಗಿಳಿಯುವಾಗ, ಅವನ ಪಕ್ಕದಲ್ಲಿ ಕುಳಿತು ನೇಯುವ ಕೌಶಲ ಅರಗಿಸಿಕೊಳ್ಳುತ್ತಿದ್ದ ಅವನ ಪುಟ್ಟ ಮಗ-ಮಗಳು, ಅಪ್ಪ ಮಗ್ಗದಿಂದ ಇಳಿದ ಮೇಲೆ ಆ ಸ್ಥಾನದಲ್ಲಿ ತಾನು ಕುಳಿತು ಕಾಲೆಟುಕದಿದ್ದರೂ ಅಂಚಿಗೆ ಸರಿದು ಪುಟ್ಟ ಕಾಲಿನಿಂದ ಅಣಿಯ ಹಲಗೆಯ ಕೋಲನ್ನು ತುಳಿದು ಒಂದೆರೆಡು ಬಾರಿ ಲಾಳಿ ಎಳೆದು, ಲಾಳಿಯನ್ನು ತೆಗೆದು ಬದಿಗಿಟ್ಟು ಅಪ್ಪನ ಕೈ ಹಿಡಿದು ಅಂಗಳಕ್ಕೆ ಇಳಿಯುತ್ತಿದ್ದ. ಒಂದೇ ಸಮನೆ ರಾಟಿಯನ್ನು ತಿರುಗಿಸುತ್ತಿದ್ದ ಹೆಂಗಸರ ಕೈ ಸ್ತಬ್ಧವಾದರೆ, ಅವರ ಮಡಿಲಲ್ಲಿ ಕುಳಿತು ಅಮ್ಮ ತಿರುಗಿಸುವ ರಾಟಿಗೆ ಪುಟ್ಟ ಕೈ ಜೋಡಿಸಿ ಹೆಣ್ಣು ಮಕ್ಕಳು ನೂಲಿಲ್ಲದ ರಾಟಿ ತಿರುಗಿಸಿ, ನೇಯ್ದ ಬಟ್ಟೆಗಳ ಅಂಚು ಕತ್ತರಿಸುವುದರಲ್ಲಿ, ಅಂಚು ಕಟ್ಟುವುದರಲ್ಲಿ, ಎರಡೂ ಬದಿಯಲ್ಲಿ ಎಳೆ ಹಿಡಿದು ಚೊಕ್ಕವಾಗಿ ಮಡಿಸಿ ಇಡುವುದರಲ್ಲಿ, ಗಂಜಿ ತಯಾರಿಸುವಲ್ಲಿ, ಮಳೆಗಾಲದಲ್ಲಿ ನೂಲೊಣಗಿಸಲು ಕೆಂಡ ತಯಾರಿಸುವಲ್ಲಿ ನಿರತರಾಗಿರುತ್ತಿದ್ದ ದೃಶ್ಯ ಈಗ ಅಪರೂಪ.

ಈ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲೀಕೆರಿ ಗ್ರಾಮದ ಪ್ರತಿ ಮನೆಯಲ್ಲೂ ಕೈಮಗ್ಗ ನೇಕಾರಿಕೆ ಇತ್ತು. 150ಕ್ಕೂ ಹೆಚ್ಚು ಮಂದಿ ನೇಕಾರರು ಕೈ ಮಗ್ಗದ ವಿವಿಧ ಉಡುಪುಗಳನ್ನು ತಯಾರು ಮಾಡುತ್ತಿದ್ದರು. ಆದರೆ ಈಗ ಬೇರೆ ಬೇರೆ ಶೈಲಿಯ ಬಟ್ಟೆಗಳು ಮಾರುಕಟ್ಟೆಗೆ ಬರುತ್ತಿವೆ. ಈಗ ನನಗೂ ವಸ್ತ್ರಗಳನ್ನು ಮಾಡುವುದಕ್ಕೆ ಆಗುತ್ತಿಲ್ಲ. ನೇಕಾರಿಕೆಯ ಮುಂದಿನ ಭವಿಷ್ಯ ಹೇಗೆ ಅಂತಾ ಗೊತ್ತಾಗುತ್ತಿಲ್ಲ ಅಂತಾ ಹಿರಿಯರು ಹೇಳುತ್ತಾರೆ.
ಇನ್ನು ನೇಕಾರಿಕೆಯ ಕಚ್ಚಾವಸ್ತುಗಳಿಗೆ ದರ ಹೆಚ್ಚಾಗಿದ್ದು, ಒಂದೆಡೆ ಮಾರುಕಟ್ಟೆಯಲ್ಲಿ ಕೈಮಗ್ಗದ ವಸ್ತುಗಳಿಗೆ ಧಾರಣೆ ಕಡಿಮೆ ಇದೆ. ಇನ್ನೊಂದೆಡೆ ನೂಲುಗಳಿಗೆ ದರ ಜಾಸ್ತಿಯಾಗಿದೆ. ಈಗ ನೇಕಾರಿಕೆಯಲ್ಲಿ ಜೀವನ ಸಾಗುತ್ತಿದೆ. ಭವಿಷ್ಯದ ಬಗ್ಗೆಯೇ ಚಿಂತೆಯಾಗುತ್ತಿದೆ ಅಂತಾ ನೇಕಾರಿಕೆಯಲ್ಲಿ ತೊಡಗಿಸಿ ಜೀವನ ನಡೆಸುತ್ತಿರುವ ನೇಕಾರ . ಒಟ್ಟಿನಲ್ಲಿ ನೇಕಾರಿಕೆಗೆ ಕರಾವಳಿಯಲ್ಲೇ ಪ್ರಸಿದ್ಧ ಪಡೆದ ಸಾಲಿಕೇರಿಯ ಒಂದು ಮನೆಯಲ್ಲಿ ಮಾತ್ರ ನೇಕಾರಿಕೆ ಉಳಿದುಕೊಂಡಿದೆ. ಸರ್ಕಾರ ಇನ್ನು ಮುಂದಾದರೂ ನೇಕಾರರ ಬೆಂಬಲವಾಗುವ ಯೋಜನೆ ರೂಪಿಸಿದರೆ ಬಡ ನೇಕಾರರಿಗೆ ಪ್ರಯೋಜನ ಆಗಲಿದೆ.
ಹೌದು..ಇದರಲ್ಲಿ ಉಡುಪಿಗೆ ಹೋಲಿಕೆ ಮಾಡಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇಕಾರಿಕೆಯಲ್ಲಿ ಕೊಂಚ ಬದಲಾವಣೆ ಯಾಗಿದೆ. ಇದಕ್ಕೆ ಕಾರಣ ತಾಳಿಪಾಡಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಮಾಧವ ಶೆಟ್ಟಿಗಾರ, ಅಧ್ಯಕ್ಷ ಆನಂದ ಶೆಟ್ಟಿಗಾರ್. ಇವರ ನೇಕಾರಿಕೆ ಮೇಲಿನ ನಿಜವಾದ ಕಾಳಜಿ ಇದಕ್ಕೆ ಕಾರಣ. ಇಲ್ಲಿ ಶೆಟ್ಟಿಗಾರ್ ಜಾತಿಯವರನ್ನು ಹೊರತುಪಡಿಸಿ ಹೊರಗಿನ ಇತರ ಜಾತಿಯ ಜನರು ತೊಡಗಿಸಿ ಕೊಂಡಿದ್ದಾರೆ ಇದು ಒಂದು ಸಾಧನೆ. ಎಷ್ಟೋ ಜನರು ನೇಕಾರಿಕೆ ಉಳಿಸಿ ಎನ್ನುವ ಮಾತು ಮಾತಾಗಿಯೇ ಉಳಿದಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಇವರು ಮೌನವಾಗಿ ಇದು ಉಡುಪಿ ಸೀರೆ ಪ್ರಾದೇಶಿಕ ವಿಶೇಷತೆ ( GI ) ಮಾನ್ಯತೆ ಪಡೆಯುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದರು. ಉಡುಪಿ ಸೀರೆ ಎಂಬ ಹೆಸರು ಇದ್ದರೂ ಉಡುಪಿಯಲ್ಲಿ ಚಾಲತಿ ಇರುವ ಕೈ ಮಗ್ಗಗಳು ಮಾತ್ರ ಬೆರಳೆಣಿಕೆಯಷ್ಟು. ದಕ್ಷಿಣ ಕನ್ನಡದಲ್ಲಿ ಸುಮಾರು 75 ಹೆಚ್ಚು ಕೈ ಮಗ್ಗುಲುಗಳನ್ನು ಹೊಂದಿದೆ. ಪ್ರಥಮವಾಗಿ ಆರಂಬಿಸಿದ ಉಡುಪಿ ಇದೀಗ ಹೆಸರಿಗೆ ಮಾತ್ರ ಸಿಮೀತವಾಗಿದೆ ಅಷ್ಟೇ.

ಹಿರಿಯರ ಬಳಿಯಿದ್ದ ಕೌಶಲವನ್ನು ಹೊಸತಲೆಮಾರಿಗೆ ದಾಟಿಸದೇ ಇದ್ದರೆ ಮತ್ತೆ ಅದೆಂದೂ ಕಾಣಸಿಗುತ್ತಿರಲಿಲ್ಲ. ಇದನ್ನು ಮನಗಂಡು ಮಮತಾ ರೈ ಬಿ.ಸಿ. ಶೆಟ್ಟಿ ದಂಪತಿ ಹಾಗೂ ಸಮಾನ ಮ ನಸ್ಕರ ಜೊತೆಗೂಡಿ ಕದಿಕೆ ಟ್ರಸ್ಟ್ ರೂಪಿಸಿದರು. 2018ರಲ್ಲಿ ಈ ಟ್ರಸ್ಟ್ ಮೂಲಕ ತಾಳಿಪಾಡಿ ನೇಕಾರ ಸಂಘವನ್ನು ಕೇಂದ್ರವಾಗಿಟ್ಟುಕೊಂಡು ನೇಕಾರಿಕೆ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿದರು. ತಾಳಿಪಾಡಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕರಾದ ಮಾಧವ ಶೆಟ್ಟಿಗಾರ, ಅಧ್ಯಕ್ಷ ಆನಂದ ಶೆಟ್ಟಿಗಾರ್ ಕೂಡ ಈ ಪುನರುಜ್ಜೀವನ ಕೆಲಸಕ್ಕೆ ಉತ್ಸಾಹದಿಂದ ಕೈ ಜೋಡಿಸಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನೇಕಾರರು ನೇಯುವ ಉಡುಪಿ ಸೀರೆ ಪ್ರಾದೇಶಿಕ ವಿಶೇಷತೆ ( GI ) ಮಾನ್ಯತೆ ಪಡೆದ ಸೀರೆ. ಪ್ರಸ್ತುತ ಪ್ರಚಲಿತವಾಗಿ ಉಳಿದುಕೊಂಡಿರುವ ಮಗ್ಗದ ಕೌಶಲವನ್ನು ಇನ್ನಷ್ಟು ಜನರಿಗೆ ಕಲಿಸುವ ಉದ್ದೇಶದಿಂದ ನೇಕಾರಿಕೆ ತರಬೇತಿ ಕಾರ್ಯಕ್ರಮವನ್ನು ಕಲಿಕೆ ಟ್ರಸ್ಟ್, ನಬಾರ್ಡ್ ಅನುದಾನದ ಸಹಾಯದೊಂದಿಗೆ ಆಯೋಜಿಸಲಾಯಿತು.
ಕಿನ್ನಿಗೋಳಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತಾಳಿಪಾಡಿ ನೇಕಾರ ಭವನದಲ್ಲಿ ನೇಕಾರಿಕೆ ಕೆಲಸವನ್ನು ಎಂಟು ಮಂದಿ ನಿರ್ವಹಿಸುತ್ತಿದ್ದರು. ಇಬ್ಬರು ಸಂಘದ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಆರು ಮಂದಿ ತಮ್ಮ ಮನೆಗಳಲ್ಲಿ ಮಗ್ಗ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಇಂದು 32 ಮಂದಿ ನೇಕಾರರು ನೇಕಾರ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ್ಗಗಳ ಸಂಖ್ಯೆ ಹೆಚ್ಚಾಗಿದೆ. ಸೀರೆಗಳ ವಿನ್ಯಾಸಗಳು ಹೆಚ್ಚಾಗಿವೆ.
ಸರಕಾರದ ವಿವಿಧ ಇಲಾಖೆಗಳು ಪ್ರತಿ ವರ್ಷ ನೂರಾರು ಕೋಟಿ ರೂ. ಮೊತ್ತದ ವಸ್ತ್ರಗಳನ್ನು ತನ್ನ ಸಿಬ್ಬಂದಿಯ ಸಮವಸ್ತ್ರಕ್ಕಾಗಿ ಖರೀದಿ ಮಾಡುತ್ತವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ, ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ, ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಸಮವಸ್ತ್ರ, ಅಲ್ಲದೇ ಪೊಲೀಸ್, ಅರಣ್ಯ ಇಲಾಖೆಗಳು, ಕೆಎಸ್‌ಆರ್‌ಟಿಸಿ ಮೊದಲಾಗಿ ಹಲವಾರು ಇಲಾಖೆಗಳು ಸಮವಸ್ತ್ರಕ್ಕೆ ಬಟ್ಟೆ ಖರೀದಿಸುತ್ತವೆ. ಆದರೆ, ಬಹುತೇಕ ಎಲ್ಲಾ ಇಲಾಖೆಗಳೂ ಓಪನ್ ಟೆಂಡರ್ ಮೂಲಕ ಖರೀದಿ ಮಾಡುವುದರಿಂದ ಇಲಾಖೆಗಳಿಗೆ ವಸ್ತ್ರ ಪೂರೈಸುವ ಗುತ್ತಿಗೆ ಗುಜರಾತ್, ತಮಿಳುನಾಡು ಇತರ ರಾಜ್ಯಗಳ ಪಾಲಾಗುತ್ತಿವೆ. ಅದರ ಬದಲು ರಾಜ್ಯದ ನೇಕಾರರಿಂದಲೇ ಬಟ್ಟೆಗಳನ್ನು ಖರೀದಿಸುವಂತಾದರೆ ನೇಕಾರರಿಗೆ ವರ್ಷ ಪೂರ್ತಿ ಕೆಲಸ ಸಿಗಲಿದ್ದು ಅವರ ಬದುಕು ಹಸನಾಗಲು ಸಾಧ್ಯವಿದೆ.
ಆದ್ದರಿಂದ ಸರ್ಕಾರ ಈ ಎಲ್ಲಾ ಸಂಗತಿಗಳನ್ನು ಪರಾಮರ್ಶಿಸಿ ಮಾನ ಮುಚ್ಚುವ ನೇಕಾರನಿಗೆ ಹರಿದ ಬಟ್ಟೆ ಯಲ್ಲಿ ಜೀವನ ಸಾಗಿಸುವಂತಾಗಿದೆ ಅದಕ್ಕಾಗಿ ದಯವಿಟ್ಟು ಸರ್ಕಾರ ನೇಕಾರರ ಬದುಕು ಹಸನಾಗಲು ಕ್ರಮಕೈಗೊಂಡು ಕೈಮಗ್ಗ ನೇಕಾರಿಕೆ ಉಳಿಸಿ ಬೆಳೆಸುವಂತಹ ಕೆಲಸ ಮಾಡಬೇಕು.
ವರದಿ : ಹರೀಶ್ ಮುಲ್ಕಿ