ಉಡುಪಿ: ಶ್ರೀಕೃಷ್ಣ ಮಠದ ಸಂಭ್ರಮದ ಬ್ರಹ್ಮರಥೋತ್ಸವ ನಡೆಯಿತು. ಕೃಷ್ಣನ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಹಗಲಿನಲ್ಲಿ ಒಂದು ಉತ್ಸವವನ್ನು ಮಾಡಿದ್ದರು. ಆ ಪರಂಪರೆ ಇಂದಿಗೂ ಮುಂದುವರೆದಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ಸಾಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವ ನಡೆಸಲಾಯಿತು.

ದೇವಾಲಯಗಳ ನಗರಿ ಉಡುಪಿಯಲ್ಲಿ ಕೃಷ್ಣ ಮುಖ್ಯಪ್ರಾಣ ದೇವರನ್ನು ರಥದಲ್ಲಿಟ್ಟು ಹಗಲು ಉತ್ಸವ ಮಾಡಲಾಯಿತು. 8 ಶತಮಾನದ ಹಿಂದೆ ಆಚಾರ್ಯ ಮಧ್ವರು ಉಡುಪಿ ಕೃಷ್ಣ ಮಠವನ್ನು ಸ್ಥಾಪನೆ ಮಾಡಿದರು. ಸಂಕ್ರಾಂತಿಯಂದು ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ಮಾಡಿದ ಮಾರನೆ ದಿನ ಬೆಳಗ್ಗೆ ಹಗಲು ಉತ್ಸವ ನಡೆಸಿದ್ದಾರೆ. ಈ ಪ್ರತೀತಿ ಇಂದಿಗೂ ನಡೆದುಕೊಂಡು ಬರುತ್ತಿದೆ.
ಅಷ್ಟಮಠಗಳ ಯತಿಗಳು ಉತ್ಸವದಲ್ಲಿ ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿದರು. ಕೃಷ್ಣನ ಪ್ರಸಾದವನ್ನು ತೇರಿನಿಂದಲೇ ವಿತರಣೆ ಮಾಡಿದರು. ಎರಡು ವರ್ಷಗಳ ಕಾಲ ಉಡುಪಿ ಕೃಷ್ಣನ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠಕ್ಕಿತ್ತು. ಜನವರಿ 18 ರಿಂದ ಮುಂದಿನ ಎರಡು ವರ್ಷ ಅಧಿಕಾರ ಕೃಷ್ಣಾಪುರ ಮಠಕ್ಕೆ ಹಸ್ತಾಂತರ ಆಗಲಿದೆ.
- ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ.