ಕುಂಜಾಲ್ ಜಂಕ್ಷನ್ ಬಳಿ ರಸ್ತೆಯಲ್ಲೇ ಗೋವಿನ ರುಂಡ ಪತ್ತೆ; ಆರು ಮಂದಿ ಅಂದರ್
ಉಡುಪಿ: ಬ್ರಹ್ಮಾವರ ತಾಲೂಕಿನ ಕುಂಜಾಲು ಬಸ್ ನಿಲ್ದಾಣ ಬಳಿ ದುಷ್ಕರ್ಮಿಗಳು ದನದ ರುಂಡ ಎಸೆದಿರುವುದು ಭಾನುವಾರ ಬೆಳಕಿಗೆ ಬಂದಿದೆ.
ಶನಿವಾರ ತಡ ರಾತ್ರಿ ಈ ಘಟನೆ ಸಂಭವಿಸಿದ್ದು, ದನದ ತಲೆಯನ್ನು ದುಷ್ಕರ್ಮಿಗಳು ರಸ್ತೆಯಲ್ಲೇ ಎಸೆದು ಹೋಗಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಪರಾಧಿಗಳ ಪತ್ತೆಗೆ ಹಿಂದೂ ಸಂಘಟನೆಗಳು ಪಟ್ಟುಹಿಡಿದಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಬ್ರಹ್ಮಾವರ ಪೊಲೀಸರು, ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದರು.
ಗೋವಿನ ರುಂಡವನ್ನು ರಸ್ತೆಯಲ್ಲೇ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ರಾಮ(49) ಕುಂಜಾಲು, ಪ್ರಸಾದ್ (21) ಕುಂಜಾಲು, ನವೀನ್ (35)ಮಟಪಾಡಿ, ಕೇಶವ ನಾಯಕ್ (50) ಸಂದೇಶ (35) ರಾಜೇಶ್ (28) ಕುಂಜಾಲು ಬಂಧಿತ ಆರೋಪಿಗಳು ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಇವರು ದನವನ್ನು ಕಡಿದು ಅದರ ಅವಶೇಷಗಳನ್ನು ವಾಹನದಲ್ಲಿ ಸಾಗಿಸುವಾಗ ಅದರ ಕೆಲವು ಅವಶೇಷಗಳು ರಸ್ತೆಯಲ್ಲಿ ಬಿದ್ದು ಹೋಗಿದ್ದವು. ಪ್ರಕರಣದಲ್ಲಿ ಭಾಗಿಯಾದ ಹೊಂಡ ಅಕ್ಟಿವಾ ಹಾಗೂ ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಟ್ಟು 4 ತಂಡಗಳನ್ನು ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿದ್ದರು.
ಕಾಮೆಂಟ್ ಬಿಡಿ