ಬ್ಯಾಂಕಾಕ್: ಕನ್ನಡಿಗರ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಸೂಚನೆ
ಬ್ಯಾಂಕಾಕ್: ಕರ್ನಾಟಕದ ಹಲವರು ಬ್ಯಾಂಕಾಕ್‌ನಲ್ಲಿ ಪ್ರವಾಸ ಮತ್ತು ಉದ್ಯೋಗ ನಿಮಿತ್ತ ಇದ್ದರು. ಈ ಹಿನ್ನಲೆಯಲ್ಲಿ ಅವರುಗಳ ಸುರಕ್ಷತೆಯ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವರದಿ ಪಡೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳು ಬ್ಯಾಂಕಾಕ್‌ನಲ್ಲಿರುವ ಎಲ್ಲಾ ಕನ್ನಡಿಗರ ವಿವರ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಭೂಕಂಪನ ಸಮಯದಲ್ಲಿ ಹಾವೇರಿ ಜಿಲ್ಲೆಯ 22 ಜನರ ಗುಂಪು ಬ್ಯಾಂಕಾಕ್‌ನಲ್ಲಿ ಪ್ರವಾಸದಲ್ಲಿದ್ದರು. ಇವರು ಐದು ದಿನಗಳ ಹಿಂದೆ ಬೆಂಗಳೂರಿನಿಂದ ತೆರಳಿದ್ದರು. ಶುಕ್ರವಾರ ಅವರು ಸಫಾರಿ ವರ್ಡ್ ಪ್ರವಾಸದಲ್ಲಿದ್ದಾಗ ಭೂಕಂಪನ ಆಗಿದೆ ಎನ್ನಲಾಗಿದೆ. ಕೂಡಲೇ ಅವರು ಸುರಕ್ಷಿತ ಸ್ಥಳವಾದ ಸುವರ್ಣ ಭೂಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ತಮ್ಮ ಪೋಷಕರಿಗೆ ವಿಡಿಯೋ ಸಂದೇಶ ಕಳುಹಿಸಿ “ನಾವು ಎಲ್ಲರೂ ಸುರಕ್ಷಿತರಾಗಿದ್ದೇವೆ, ಯಾವುದೇ ತೊಂದರೆ ಇಲ್ಲ” ಎಂದು ಭರವಸೆ ನೀಡಿದ್ದಾರೆ. ಇನ್ನು ವಿಮಾನಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದರೂ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ನಿರ್ಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನ ಜಿಲ್ಲೆಯ ರಾಜಶೇಖರ್ ಎಂಬವರು ತಮ್ಮ ಕುಟುಂಬದೊಂದಿಗೆ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಭೂಕಂಪನ ಸಮಯದಲ್ಲಿ ಅವರು ಹಳೇ ವಿಮಾನ ನಿಲ್ದಾಣದ ಬಳಿ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಬ್ಯಾಂಕಾಕ್‌ನ ಅವನಿ ಮತ್ತು ಅನಂತಾರಾ ಹೊಟೆಲ್‌ಗಳಲ್ಲಿ ಹಾವೇರಿ, ಹಾಸನ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 42 ಮಂದಿ ಕನ್ನಡಿಗರು ವಾಸವಾಗಿದ್ದರು. ಭೂಕಂಪನದ ಪರಿಣಾಮ ಅವನಿ ಹೊಟೆಲ್‌ನಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಹೋಟೆಲ್ ಸಿಬ್ಬಂದಿ ಕೂಡಲೇ ಎಲ್ಲಾ ಕನ್ನಡಿಗರನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಬ್ಯಾಂಕಾಕ್‌ನ ವಿಮಾನ ಮತ್ತು ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಭೂಕಂಪನ ಬಗ್ಗೆ ಮಾಹಿತಿ ಪಡೆದ ತಕ್ಷಣ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನಲ್ಲಿ ಇರುವ ಕನ್ನಡಿಗರ ಸುರಕ್ಷತೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಪ್ರವಾಸಿಗರ ಪೋಷಕರಿಗೆ ಅಗತ್ಯ ಮಾಹಿತಿ ನೀಡಲು ಮತ್ತು ಕನ್ಸಲ್ ಜನರಲ್ ಮೂಲಕ ಸಂಪರ್ಕಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಕಾಮೆಂಟ್ ಬಿಡಿ