ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನ ಗರಿ ಹೊರತೆಗೆದು ಹೊಸ ಬದುಕು ನೀಡಿದ ಸರಕಾರಿ ವೆನ್ಲಾಕ್ ಆಸ್ಪತ್ರೆ
ಮಂಗಳೂರು: ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಸಿಟಿವಿಎಸ್ ತಂಡ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡಿಗೆ ಸೇರಿದ ತೆಂಗಿನ ಗರಿ ಹಾಗೂ ಬಾಲಕನ ಕುತ್ತಿಗೆಗೆ ಹಾಕಿಕೊಂಡಿದ್ದ ಚೈನ್ ಹೊರ ತೆಗೆಯುವ ಮೂಲಕ ಜೀವದಾನ ನೀಡಿದ್ದಾರೆ.
ಬಾಲಕನ ಕುಟುಂಬ ಅಸ್ಸಾಂ ರಾಜ್ಯದ ಗುವಾಹಟಿ ಮೂಲದವರಾಗಿದ್ದು, ಮಡಿಕೇರಿಯಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಹೆತ್ತವರು ಕೂಲಿ ಕೆಲಸ ಮಾಡುತ್ತಿದ್ದರು. ಶನಿವಾರ ಕಮಲ್ ಹುಸೇನ್ (12) ಬಾಲಕ ಆಟವಾಡುತ್ತಿದ್ದಾಗ ಹತ್ತಿರದಲ್ಲಿದ್ದ ತೆಂಗಿನ ಮರದ ಗರಿಯೊಂದು ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು.
ಇದರಿಂದ ತೆಂಗಿನಗರಿಯ ಭಾಗ ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯೊಳಗೆ ಹೊಕ್ಕಿತ್ತು. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಡಾ. ಸುರೇಶ್ ಪೈ ನೇತೃತ್ವದ ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜರಿ ತಂಡ ರಾತ್ರಿ 1.30ರಿಂದ 3.30ರ ನಡುವೆ ಬಾಲಕನ ಸರ್ಜರಿ ಮಾಡುವ ಮೂಲಕ ತೆಂಗಿನ ಗರಿಯ ತುಂಡು ಹಾಗೂ ಚೈನ್ ಹೊರತೆಗೆದು ಬಾಲಕನಿಗೆ ಹೊಸ ಬದುಕು ನೀಡಿದ್ದಾರೆ.
ಕಾಮೆಂಟ್ ಬಿಡಿ