ರಾಜ್ಯ ಸುದ್ದಿ

ನಿಮ್ಮ ಪಂಚೆ, ಚಡ್ಡಿ ಉದುರಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳಿ: ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಟಾಂಗ್

ಬೆಂಗಳೂರು: ಅಧಿಕಾರ ಮತ್ತು ತತ್ವ ಸಿದ್ದಾಂತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವೆ ಟ್ವೀಟ್ ವಾರ್ ಜೋರಾಗಿ ನಡೆಯುತ್ತಿದೆ.

ದಲಿತ ಸಮುದಾಯದಿಂದ ಬಂದು, ರಾಜಕೀಯ ಅಧಿಕಾರಕ್ಕಾಗಿ ಬಾಬಾ ಸಾಹೇಬರ ಸಿದ್ದಾಂತವನ್ನೇ ತೊರೆದು, ಗೋಸುಂಬೆಯ ಥರ ಬಣ್ಣ ಬದಲಾಯಿಸಿದಂತೆ ಅಧಿಕಾರಕ್ಕಾಗಿ ಸಂವಿಧಾನ ವಿರೋಧಿಗಳ ಸಖ್ಯ ಬೆಳಸಿ, ಮನಸ್ಮೃತಿಯ ಪ್ರತಿಪಾದಕರಾಗಿ ಬದಲಾದ ನಿಮ್ಮ‌ ಮನಸ್ಥಿತಿಯ ಬಗ್ಗೆ ಮರುಕವಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದರು.

ಹರಿಪ್ರಸಾದ್ ಹೇಳಿಕೆಗೆ ಇಂದು ಎಕ್ಸ್ ನಲ್ಲಿ ತಿರುಗೇಟು ನೀಡಿರುವ ಛಲವಾದಿ ನಾರಾಯಣಸ್ವಾಮಿ, ಬೇರೆಯವರ "ಖಾಕಿ ಚಡ್ಡಿ" ಯನ್ನು ಬಿಚ್ಚಲು ಪ್ರಯತ್ನಿಸಿ, ನಿಮ್ಮ ಕೈಯಾರೆ ನಿಮ್ಮ ಲಂಗೂಟಿಯನ್ನು ಕಳಚಿಕೊಂಡಿದ್ದು ಇನ್ನೂ ಜನರು ಮರೆತಿಲ್ಲ. ಬೇರೆಯವರ ಚಡ್ಡಿಯ ಮೇಲೆ ನಿಗಾ ವಹಿಸುವುದಕ್ಕಿಂತ ಮುಂಚೆ, ನಿಮ್ಮ ಪಂಚೆ ಮತ್ತು ಚಡ್ಡಿ ಉದುರಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಅಧಿಕಾರಗಳನ್ನು ಯೋಗದಿಂದ ಅನುಭವಿಸಿದ್ದರೂ ಪ್ರಸ್ತುತ ಅತೃಪ್ತ ನಾಯಕರಾಗಿರುವ ಹರಿಪ್ರಸಾದ್, ನನ್ನ ಮೇಲೆ ಮಾಡಿರುವ ಎಲ್ಲಾ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಅವನ್ನು ದೃಢೀಕರಿಸಲು ನಿಮ್ಮಿಂದ ಸಾಧ್ಯವೇಯಿಲ್ಲ, ಇಂತಹ ದುರುದ್ದೇಶಿತ ಆರೋಪಗಳು ನನ್ನ ಹೋರಾಟ ಜೀವನವನ್ನು ಹತ್ತಿಕ್ಕಲಾರವು. ನನ್ನ ಯೋಗ್ಯತೆಯ ಮುಂದೆ ನಿಮ್ಮ ಯೋಗ ಚೆನ್ನಾಗಿ ಕೆಲಸ ಮಾಡಿದೆ, ಆದರೆ ಯೋಗ ಕ್ಷಣಿಕ, ಯೋಗ್ಯತೆ ಅಜರಾಮರ ಎಂದಿದ್ದಾರೆ.

ಕಾಮೆಂಟ್ ಬಿಡಿ

Join Us