ಕ್ರೀಡಾ ಸುದ್ದಿ

ಮುಂಬೈ ವರ್ಸಸ್ ಚೆನ್ನೈ ಮ್ಯಾಚಿನಲ್ಲಿ ಗಮನ ಸೆಳೆದ ಹುಡುಗ ವಿಘ್ನೇಶ್ ಪುತ್ತೂರ್

ವಿಘ್ನೇಶ್ ಪುತ್ತೂರ್ ಈ ಹುಡುಗ ಮುಂಬೈ ವರ್ಸಸ್ ಚೆನ್ನೈ ಮ್ಯಾಚಿನಲ್ಲಿ ಗಮನ ಸೆಳೆದ ಹುಡುಗ. ಕೇರಳದ ಮಲ್ಲಪುರಂನಿಂದ ಎಡಗೈ ಸ್ಪಿನ್ನರ್.ಈ ಹುಡುಗನಿಗಿನ್ನೂ ಜಸ್ಟ್ 24 ವರ್ಷ. ಕೇರಳ ಸೀನಿಯರ್ ತಂಡಕ್ಕೇ ಇನ್ನೂ ಆಡಿಲ್ಲ. ಆದರೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿ, ರೋಹಿತ್, ಸೂರ್ಯ, ತಿಲಕ್ ವರ್ಮಾ, ವಿಲ್ ಜಾಕ್ಸ್ ಅವರಂತಹ ದಿಗ್ಗಜರ ತಂಡದ ಜೊತೆ ಆಡಿದ್ಧಾನೆ. ಟ್ರೆಂಟ್ ಬೌಲ್ಟ್, ಮಿಚೆಲ್ ಸ್ನಾಂಟ್ನರ್ ಅಂತಹ ದಿಗ್ಗಜರ ಜೊತೆ ಬೌಲಿಂಗ್ ಮಾಡಿದ್ದಾನೆ. ಮುಂಬೈ ಇಂಡಿಯನ್ಸ್ ಪಂದ್ಯವನ್ನ ಸೋತಿರಬಹುದು, ಆದರೆ, ಧೋನಿಯಂತ ಧೋನಿಯೇ ಈತನನ್ನು ಕರೆದು ಬೆನ್ನು ತಟ್ಟಿದ್ದಾರೆಂದರೆ, ಈತನ ಬೌಲಿಂಗ್ ಹೇಗಿತ್ತು ಅನ್ನೋದನ್ನ ಅರ್ಥ ಮಾಡ್ಕೊಬಹುದು.ವಿಘ್ನೇಶ್ ಪುತ್ತೂರ್ ತಂದೆ ಒಬ್ಬ ಆಟೋ ಡ್ರೈವರ್.

ಕೇರಳ ರಣಜಿ ತಂಡಕ್ಕೇ ಇನ್ನೂ ಆಡಿಲ್ಲ. ಅಲೆಪ್ಪಿ ರಿಪ್ಪಲ್ಸ್ ಅನ್ನೋ ಲೋಕಲ್ ಟೀಂನಲ್ಲಿ ಆಡುತ್ತಿದ್ದ ಹುಡುಗ, ಮುಂಬೈ ಇಂಡಿಯನ್ಸ್ ಟೀಂನ ಸ್ಕೌಟ್ ಟೀಂನಲ್ಲಿರೋ ಅದ್ಯಾರ ಕಣ್ಣಿಗೆ ಬಿದ್ದರೋ.. ಗೊತ್ತಿಲ್ಲ. ಮೊದಲ ಮ್ಯಾಚಿನಲ್ಲೇ ಈ ಹುಡಗ ಔಟ್ ಮಾಡಿದ್ದು ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ದೀಪಕ್ ಹೂಡಾ ಅವರನ್ನ.
ಪ್ರಥಮ ಪಂದ್ಯದಲ್ಲೇ ಅದ್ಭುತ ಬೌಲಿಂಗ್ ಮಾಡಿ, ಧೋನಿಯ ಗಮನ ಸೆಳೆದಿದ್ದಾಗಿದೆ. ವಿಘ್ನೇಶ್ ಎದುರು ಕೇರ್ ಫುಲ್ ಆಗಿ ಆಡಿ ಎಂದು ತಕ್ಷಣ ಅಲರ್ಟ್ ಮಾಡಿದ ಧೋನಿ, ತಂಡವನ್ನು ಗೆಲ್ಲಿಸಿಕೊಂಡಿದ್ಧಾರೆ. ಅಷ್ಟೆ ಅಲ್ಲ, ವಿಘ್ನೇಶ್ ಬೆನ್ನು ತಟ್ಟಿ ಶಹಬ್ಬಾಸ್ ಎಂದಿದ್ದಾರೆ.

ಇಲ್ಲಿ ನಿಜಕ್ಕೂ ಶಬ್ಬಾಶ್ ಎನ್ನಬೇಕಿರೋದು ಮುಂಬೈ ಇಂಡಿಯನ್ಸ್ ಪ್ರತಿಭೆಗಳ ಹುಡುಕಾಟಕ್ಕೆ. ಮುಂಬೈ ಇಂಡಿಯನ್ಸ್ ತಂಡದ ಇಂತಹ ಹುಡುಕಾಟದಲ್ಲೇ ಟೀಂ ಇಂಡಿಯಾಗೆ ಅದ್ಭುತ ಪ್ರತಿಭೆಗಳು ಸಿಕ್ಕಿವೆ. ಜಸ್ ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಈಗ ಆರ್‌ಸಿಬಿಯಲ್ಲಿರೋ ಕೃನಾಲ್ ಪಾಂಡ್ಯ, ಕೊಲ್ಕತ್ತಾ ಟೀಂನಲ್ಲಿ ಕಳೆದೇ ಹೋಗಿದ್ದ ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಅಕಾಶ್ ಮಧ್ವಾಲ್, ಅವರಂತಹ ಪ್ರತಿಭೆಗಳು ಬೆಳಕಿಗೆ ಬಂದಿದ್ದೇ ಮುಂಬೈ ಇಂಡಿಯನ್ಸ್ ಸ್ಕೌಟ್ ಟೀಂನಿಂದ.

ಈ ವಿಘ್ನೇಶ್ ಪುತ್ತೂರ್ ಅವರನ್ನ ಮುಂಬೈ ಇಂಡಿಯನ್ಸ್, ಐಪಿಎಲ್‌ನಲ್ಲಿ 30 ಲಕ್ಷ ರೂ.ಗಳಿಗೆ ಖರೀದಿ ಮಾಡಿದೆ. ರಿಲಯನ್ಸ್ ಟೀಂನಲ್ಲಿ ಆಡಿದ್ದ ವಿಘ್ನೇಶ್, ಮುಂಬೈ ಇಂಡಿಯನ್ಸ್ ಟೀಂನ ರೋಹಿತ್, ಸೂರ್ಯ, ತಿಲಕ್ ವರ್ಮಾಗೆ ಬೌಲಿಂಗ್ ಮಾಡಿದ್ದಾರೆ. ಅಂದಹಾಗೆ ಫೈನಲ್ 11ನಲ್ಲಿ ಆಡಿಸೋಕೆ ಸಲಹೆ ಕೊಟ್ಟಿದ್ದು ರೋಹಿತ್ ಶರ್ಮಾ ಅಂತಾರೆ ಮುಂಬೈ ಇಂಡಿಯನ್ಸ್ ಟೀಂನ ಸ್ಕೌಟ್ ಹೆಡ್ ಪರಾಸ್ ಮಹಾಂಬ್ರೆ. ಈತನ ಪ್ರತಿಭೆಯನ್ನ ಗುರುತಿಸಿದ್ದು ಕನ್ನಡಿಗ ವಿನಯ್ ಕುಮಾರ್ ಅವರಂತೆ. ಕುಲದೀಪ್ ಅವರಂತಹ ಅದ್ಭುತ ಸ್ಪಿನ್ನರ್ ಎಂದು ಹೊಗಳಿದ್ದಾರಂತೆ ರೋಹಿತ್ ಶರ್ಮಾ.

ಅಂದಹಾಗೆ ಮುಂಬೈ ಇಂಡಿಯನ್ಸ್ ಟೀಂನಲ್ಲಿ ಹೊಸ ಆಟಗಾರರನ್ನು ಹುಡುಕುವುದಕ್ಕೆಂದೇ ಒಂದು ಸ್ಕೌಟ್ ಟೀಂ ಇದೆ. ಪರಾಸ್ ಮಹಾಂಬ್ರೆ, ಜಹೀರ್ ಖಾನ್, ಪಾರ್ಥಿವ್ ಪಟೇಲ್, ಆರ್ ಪಿ ಸಿಂಗ್, ವಿನಯ್ ಕುಮಾರ್ ಅವಂತಹ ದಿಗ್ಗಜರು ದೇಶವನ್ನೆಲ್ಲ ಸುತ್ತುತ್ತಾರೆ. ರಣಜಿ , ಸೈಯದ್ ಮುಷ್ತಾಕ್ ಅಲಿ ಟೂರ್ನಿ, ದೇವಧರ್ ಟೂರ್ನಿ.. ಹೀಗೆ ಎಲ್ಲಿಯೇ ಸ್ಥಳೀಯ ಮ್ಯಾಚ್ ನಡೆದರೂ, ಅಲ್ಲೆಲ್ಲ ಮುಂಬೈ ಇಂಡಿಯನ್ಸ್ ಸ್ಕೌಟ್ ಟೀಂನವರು ಹೋಗ್ತಾರೆ. ಪ್ರತಿಭೆಗಳನ್ನ ಗುರುತಿಸಿ ಬೆಳೆಸುತ್ತಾರೆ. ಅಂತಹ ಆಟಗಾರರ ಲಿಸ್ಟಿಗೆ ಈಗ ವಿಘ್ನೇಶ್ ಪುತ್ತೂರ್ ಕೂಡಾ ಸೇರ್ಪಡೆಯಾಗಿದ್ದಾರೆ.

ಕಾಮೆಂಟ್ ಬಿಡಿ

Join Us