ಬೆಂಗಳೂರು:ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಟಫ್ ರೂಲ್ಸ್ನಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರ್ಧಾರವನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಜನವರಿ.25 ರವರೆಗೂ ಕಾದುನೋಡಿ ಮುಂದಿನ ನಿರ್ಧಾರ ಕೈಗೊಳ್ಳುವ ನಿಲುವಿಗೆ ಸರ್ಕಾರ ಬಂದಿದೆ.
ಹೋಟೆಲ್ ಉದ್ಯಮ, ಜಿಮ್, ಸಿನಿಮಾ ಮಂದಿರ ಮಾಲೀಕರು ಸೇರಿ ಶೇ.50ರ ನಿಯಮ ವ್ಯಾಪ್ತಿಯಲ್ಲಿ ಬರುವವರು ಅಸಮಾಧಾನ ವ್ಯಕ್ತಪಡಿಸಿದ್ದು, ಬಹಿರಂಗವಾಗಿಯೇ ಟಫ್ ರೂಲ್ಸ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೂಡ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಸದ್ಯದ ಮಟ್ಟಿಗೆ ಇರುವ ರೂಲ್ಸ್ನಲ್ಲಿ ಬದಲಾವಣೆ ಮಾಡುವುದು ಬೇಡ. ಶುಕ್ರವಾರ ಮತ್ತೆ ಸಭೆ ನಡೆಸಿ ಕೇಂದ್ರ ಸರ್ಕಾರದ ಸಲಹೆ, ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ, ರಾಜ್ಯದಲ್ಲಿನ ಸ್ಥಿತಿಗತಿ ಅವಲೋಕಿಸಿ ಶೇ.50 ರ ನಿಯಮಕ್ಕೆ ವಿನಾಯಿತಿ ನೀಡುವ ಕುರಿತು ಪುನರ್ ಪರಿಶೀಲನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ರಾಜ್ಯದಲ್ಲಿ ಜನವರಿ 19ರವರೆಗೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು ಜನವರಿ ಅಂತ್ಯದವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈಗ ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದ್ದು, ಈ ಕುರಿತು ಶುಕ್ರವಾರ ಅಂದಿನ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
- ಪೊಲಿಟಿಕಲ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ