ಉಡುಪಿಯ ಗುಡ್ಡಟ್ಟುವಿನಲ್ಲಿದೆ ಕಲ್ಲು ಬಂಡೆಗಳ ನಡುವೆ ಮೂಡಿದ ಬಂದ ಗಣಪ. ಸಾವಿರ ಕೊಡದ ನೀರಿನ ಅಭಿಷೇಕ ಇಲ್ಲಿ ಗಣಪನಿಗೆ ವಿಶೇಷ

ಉಡುಪಿಯ ಗುಡ್ಡಟ್ಟುವಿನಲ್ಲಿದೆ  ಕಲ್ಲು ಬಂಡೆಗಳ ನಡುವೆ ಮೂಡಿಬಂದ ಗಣಪ. ಕಲ್ಲು ಬಂಡೆಯ ಮಧ್ಯೆ ಗುಹೆಯೊಳಗೆ ಮೂಡಿ ಬಂದ ವಿನಾಯಕ.  ಈ ಗಣಪನಿಗೆ ಸಾವಿರ ಕೊಡದ ನೀರಿನ ಅಭಿಷೇಕ ವಿಶೇಷ ಪೂಜೆ. ಗಣಪತಿ ತನ್ನ ದೇಹದ ಉರಿ ಶಮನಕ್ಕಾಗಿ ಗುಡ್ಡಟ್ಟುವಿನಲ್ಲಿ ಬಂದು ನೆಲೆಸಿದನಂತೆ.  ಬೇರೆಲ್ಲೂ ಇರದ ಆಯೂರ ಕೊಡ ಅನ್ನುವ ವಿಶೇಷ ಪೂಜೆಗೆ ಪ್ರಸಿದ್ಧಿ ಆಗಿರುವ, ಈ ದೇವಾಲಯ ಇರುವುದು ಉಡುಪಿ ಜಿಲ್ಲೆಯ ಶಿರಿಯಾರ ಸಮೀಪದ ಗುಡ್ಡಟ್ಟುವಿನಲ್ಲಿ.

 ಬಂಡೆಗಳ ನಡುವೆ ವಿರಾಜಮಾನವಾಗಿ ನಿಂತಿರುವ ಈ ಗಣಪನಿಗೊಂದು ಪೌರಾಣಿಕ ಹಿನ್ನಲೆಯಿದೆ. ಉಡುಪಿ ಜಿಲ್ಲೆ ಹಲವು ಪ್ರಸಿದ್ದ ದೇವಸ್ಥಾನಗಳಿಗೆ ಹೆಸರುವಾಸಿ . ಉಡುಪಿಯಲ್ಲಿ ಗಣಪತಿ ದೇವಸ್ಥಾನವೆಂದು ನೀವೊಮ್ಮೆ ಜಾಲತಾಣಗಳಲ್ಲಿ ನೋಡಿದರೆ ಗುಡ್ಡಟ್ಟು ದೇವಸ್ಥಾನದ ಚಿತ್ರಗಳು ಕೂಡ ನಿಮಗೆ ಕಾಣಿಸುತ್ತದೆ. ಉಡುಪಿ ಜಿಲ್ಲೆಯ ಶಿರಿಯಾರ ಸಮೀಪದಲ್ಲಿರುವ ಈ ದೇವಾಲಯ  ಅಪರೂಪದ ಗಣಪತಿ ದೇವಸ್ಥಾನಗಳಲ್ಲಿ ಒಂದು.ಕಲ್ಲು ಬಂಡೆಗಳ ಮಧ್ಯೆ ಗುಹೆಯೊಳಗೆ ಮೂಡಿ ಬಂದ ವಿನಾಯಕ. ಹಲವು ಅಂತಸ್ತಿನ ಬಂಡೆಗಳ ನಡುವೆ ಗುಹೆಯೊಳಗೆ ವಿರಾಜಮಾನವಾಗಿ ನಿಂತ ಗುಡ್ಡಟ್ಟು ಗಣಪ , ಹಲವು ಭಕ್ತರ ಪಾಲಿಗೆ ಪ್ರಿಯ. 

ಗುಡ್ಡಟ್ಟು ವಿನಾಯಕ ದೇವಸ್ಥಾನ ನೋಡಲೆಂದು ಹೊರ ಜಿಲ್ಲೆ , ರಾಜ್ಯಗಳ ಭಕ್ತರು ಕೂಡ ಇಲ್ಲಿಗೆ ಆಗಮಿಸುತ್ತಾರೆಬೇರೆ ಗಣೇಶ ದೇವಸ್ಥಾನಗಳಲ್ಲಿ ನಡೆಯದ ವಿಶೇಷ ಸೇವೆಯೊಂದು ಇಲ್ಲಿ ನಡೆಯುತ್ತದೆ. ಪ್ರತಿದಿನ ದೇವರಿಗೆ ಸಾವಿರ ಕೊಡದ ನೀರಿನ ಅಭಿಷೇಕ ನಡೆಯುತ್ತದೆ. ಇದನ್ನೆ ಆಯುರ ಕೊಡ ಸೇವೆ ಎಂದು ಕರೆಯುತ್ತಾರೆ. ಒಂದು ಸಾವಿರ ಕೊಡದಿಂದ ವಿನಾಯಕನಿಗೆ ಜಲಾಭಿಷೇಕ.


ದೇವರಿಗೆ ಸಾವಿರ ಕೊಡದ ನೀರಿನ ಅಭಿಷೇಕ ಮಾಡುವಾಗ ನೀರನ್ನು ಯಾವುದೇ ಯಂತ್ರಗಳನ್ನು ಬಳಸಿ ಎತ್ತುವುದಿಲ್ಲ. ಹಗ್ಗ ಹಾಕಿಯೂ ಸೇದುವುದಿಲ್ಲ. ಒಬ್ಬರು ಬಾವಿಯೊಳಗೆ ಇಳಿದು ನೀರನ್ನು ತುಂಬಿಸಿ ಇನ್ನೊಬ್ಬರಿಗೆ ಹಸ್ತಾಂತರ ಮಾಡುತ್ತಾರೆ. ಹೀಗೆ ಹಸ್ತಾಂತರಗೊಳ್ಳುತ್ತಾ ಸಾವಿರ ಕೊಡದ ನೀರು ಗಣಪತಿಗೆ ಅಭಿಷೇಕವಾಗುತ್ತದೆ. 
ಮರುದಿನ ಬೆಳಿಗ್ಗೆ, ನಿನ್ನೆ ಮಾಡಿದ ಅಭಿಷೇಕದ& ನೀರನ್ನು ಸಂಪೂರ್ಣವಾಗಿ ಹೊರತೆಗೆದು, ಚೂರು ನೀರು ಇಲ್ಲದಂತೆ ವರೆಸಿ ನಂತರವಷ್ಟೆ ಅಂದಿನ ದಿನದ ಅಭಿಷೇಕ ಮಾಡಲಾಗುತ್ತದೆ.  

ಆಯುರ ಕೊಡ ಸೇವೆಯನ್ನು ಹರಕೆ ಹೊತ್ತ ಕುಟುಂಬದವರು ಮಾಡುತ್ತಾರೆ. ಬೇರೆ ದೇವಸ್ಥಾನಗಳಲ್ಲಿ ಈ ಸೇವೆ ನಡೆಯದ ಕಾರಣ , ಗುಡ್ಡಟ್ಟು ವಿನಲ್ಲಿ ಆಯುರ ಕೊಡ ಸೇವೆ ಹರಕೆ ತೀರಿಸಲೆಂದೇ ಸಾಕಷ್ಟು ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. 

god ganapati


ಹಾಗಂದ ಮಾತ್ರಕ್ಕೆ ನೀವು ಇಲ್ಲಿಗೆ ಬಂದು ಹೆಸರು ಬರೆಸಿದ ತಕ್ಷಣವೇ ನಿಮಗೆ ಆಯುರ ಕೊಡಸೇವೆ ಸಲ್ಲಿಸಲು ಸಾಧ್ಯವಿಲ್ಲ. ನಿಮ್ಮ ಸರದಿ ಬರಲು ಕನಿಷ್ಠ 6-7 ವರ್ಷಗಳ ಕಾಲ ಆದರೂ ಕಾಯಬೇಕು. ಅಲ್ಲಿಯ ತನಕ ಈಗಾಗಲೇ ಹೆಸರು ಬುಕ್ ಆಗಿದೆ. 
ಗುಡ್ಡಟ್ಟು ದೇವಾಲಯದ ಪ್ರಸಾದ ಕೂಡ ಬಹುಜನರಿಗೆ ಪ್ರಿಯ. ಮಂಗಳವಾರ ಸೇರಿದಂತೆ ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

 ಈ ದೇವಸ್ಥಾನಕ್ಕೆ ಒಂದು ಪೌರಾಣಿಕ ಹಿನ್ನಲೆಯಿದೆ. ಪುರಾಣಗಳ ಪ್ರಕಾರ ತ್ರಿಪುರಾಸುರನೆಂಬ ರಾಕ್ಷಸನ ವಿರುದ್ಧ ಈಶ್ವರ ಯುದ್ದಕ್ಕೆ ಹೋಗುವಾಗ ಗಣಪತಿಯನ್ನು ನಮಿಸದೆ ಹೋಗುತ್ತಾನೆ. ಇದರ ಪರಿಣಾಮವಾಗಿ ಈಶ್ವರ ಸೋಲುತ್ತಾನೆ. ತನಗೆ ಸೋಲಾಗಲು ಗಣಪತಿಯೇ ಕಾರಣವೆಂದು ಕೋಪಗೊಂಡ ಪರಮೇಶ್ವರ ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ.


ಇದರಿಂದ ತಪ್ಪಿಸಿಕೊಳ್ಳಲು ಹೋಗಿ ಗಣಪತಿ ಜೇನು ಕೊಳಕ್ಕೆ ಬೀಳುತ್ತಾನೆ. ಜೇನು ತಿಂದ ಖುಷಿಯಲ್ಲಿ ಶಿವನಿಗೆ ಗೆಲುವಾಗಲಿ ಎಂದು ಆತ ಹರಸುತ್ತಾನೆ. ವಿಪರೀತ ಜೇನು ತಿಂದ ಗಣಪತಿಗೆ ಹೊಟ್ಟೆಯಲ್ಲಿ ಪಿತ್ತವಾಗಿ ನರಳುವುದನ್ನು ಕಂಡ ಶಿವ ಪಾರ್ವತಿ, ದೇಹದ ಉರಿಶಮನಕ್ಕೆ ಸಲಹೆ ಕೊಟ್ಟಾಗ ಗಣಪತಿ ಗುಡ್ಡಟ್ಟುವಿಗೆ ಬಂದು ನೆಲೆಸುತ್ತಾನೆ.


ಹತ್ತಿರದಲ್ಲಿ ಹರಿಯುವ ನರಸಿಂಹ ತೀರ್ಥದ ನೀರು ವಾರಾಹಿ ನದಿಯಿಂದ ಬಂದು ಸೇರುತ್ತದೆ. ದೇವಸ್ಥಾನದ ಒಳಗೆ ಇರುವ ಬಾವಿಯಿಂದ ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡದ ಅಭಿಷೇಕ ಮಾಡಲಾಗುತ್ತಿದೆ. ಆ ಮೂಲಕ ಗಣೇಶನ ಉಪಶಮನ ಕಮ್ಮಿಯಾಗುತ್ತಿದೆ ಎನ್ನುವ ನಂಬಿಕೆ.

 god ganapathi 02

 

ಕಲ್ಲು ಬಂಡೆಯ ಮೂಲಕ ಇಲ್ಲಿನ ಗಣಪತಿ ಮೂಡಿಬಂದಿರುವುದು ವಿಶೇಷ. ಇಲ್ಲಿರುವ ಗಣಪತಿ ಬಲಮುರಿ ಗಣಪತಿಯಾಗಿದ್ದು ಜನರ ಆಸೆಗಳನ್ನು ಈಡೇರಿಸುತ್ತಾನೆ ಎನ್ನುವುದು ಜನರ ನಂಬಿಕೆ. ಇಲ್ಲಿನ ಮೂಲ ಬಿಂಬವು ವರ್ಷದ ಎಲ್ಲಾ ಸಂದರ್ಭದಲ್ಲಿ ನೀರಿನಲ್ಲೇ ಮುಳುಗಿರುವುದು ವಿಶೇಷ.

ಗಣಪತಿಯ ಕಪ್ಪು ಕಲ್ಲಿನ ಶಿಲ್ಪವು ಕುಳಿತುಕೊಂಡಿರುವ ಭಂಗಿಯಲ್ಲಿದೆ. ಕಣ್ಣುಗಳು ಮತ್ತು ಕಾಲುಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಗುಹೆ ಯಾವಾಗಲೂ ನೀರಿನಿಂದ ತುಂಬಿರುತ್ತದೆ. ಈ ನೀರಿನಲ್ಲಿ ಗಣಪತಿ ಕುತ್ತಿಗೆಯ ತನಕ ಮುಳುಗಿರುತ್ತಾನೆ. ಭಕ್ತರು ಗಣಪತಿಯನ್ನು ಕಿಂಡಿಯ ಮೂಲಕ ನೋಡಬಹುದು. ಆದರೆ ನೈವೇದ್ಯದ ಸಮಯದಲ್ಲಿ ಕಿಂಡಿಯ ಮೂಲಕ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ದೇವಸ್ಥಾನದ ಸುತ್ತ ಬಂಡೆ ಆವರಿಸಿದೆ. ಆದರೆ ನೀವು ಬಂಡೆಯ ಮೇಲೆ ಹತ್ತುವುದಕ್ಕೆ ಅವಕಾಶವಿಲ್ಲ. ದೇವಾಲಯದ ಎದುರು ಸುಂದರ ಪ್ರಾಂಗಣ , ಪಕ್ಕದಲ್ಲೊಂದು ಪುಣ್ಯ ಕೆರೆ ಕೂಡ ಇದೆ.

 ನೀವು ಉಡುಪಿಯ ಮೂಲಕ ಹೋಗುವುದಾದರೆ ಬಾರ್ಕೂರು ಮಾರ್ಗವಾಗಿ ಸಾಗಿ ಶಿರಿಯಾರ ತಲುಪಿದ ನಂತರ 1ಕಿಮೀ ದೂರದಲ್ಲಿದೆ ಈ ದೇವಾಲಯ. ಬಸ್ ನಲ್ಲಿ ಹೋಗುವವರಿಗೆ ಶಿರಿಯಾರ ತನಕ ಮಾತ್ರ ಬಸ್ ವ್ಯವಸ್ಥೆಯಿದೆ. ಕುಂದಾಪುರ ಮಾರ್ಗವಾಗಿ ಈ ದೇವಾಲಯಕ್ಕೆ ಹೋಗುವವರು ಹುಣ್ಸೆಮಕ್ಕಿ, ಗುಡ್ಡೆಯಂಗಡಿ ಮಾರ್ಗವಾಗಿ ತಲುಪಬಹುದು. 

 

 

  • ನವ್ಯಶ್ರೀ ಶೆಟ್ಟಿ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.