ತಾಯಿ ಪಕ್ಷಿಗಳ ಆಕ್ರಂದನ: ಮನಕರಗಿಸುತ್ತವೆ ಮರಿಪಕ್ಷಿಗಳ ಮರಣ..!

ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ಹೆಸರಲ್ಲಿ ಎನ್ ಎಚ್ 17 ತಲಪ್ಪಾಡಿಯಿಂದ ಚೆರ್ಕಳ ತನಕದ ಹೆದ್ದಾರಿ ಬದಿಯ ಮರಕಡಿದುರುಳಿಸುವ ಕಾಯಕಕ್ಕೆ ನಾಂದಿಯಾಗಿದೆ. ಈ  ತನಕ ರಸ್ತೆಗೆ ಕೊಡೆ ಹಿಡಿದಂತೆ ನೆರಳೊಡ್ಡಿದ ಸಹಸ್ರಾರು ಮರಗಳೆಲ್ಲ ಒಮ್ಮಿಂದೊಮ್ಮೆಲೇ ಧರೆಗುರುಳುವ  ದೃಶ್ಯಗಳೀಗ ಕಾಣುತ್ತಿದೆ...

06.10.2021 photos

ಆದರೆ... 
ಕಡಿದುರುಳಿಸಿದ ಮರಗಳ ರೆಂಬೆ ಕೊಂಬೆಗಳಡಿ ಕಂಡದ್ದು ನೂರಾರು ಪಕ್ಷಿಗಳ ಚಿಂದಿಯಾದ ಗೂಡುಗಳು...!
ಅದರೊಳಗೆ ಅರೆಜೀವದ ಗಾಯಗಳೊಂದಿಗೆ ಚೀರಿಡುವ ಪಕ್ಷಿ ಮರಿಗಳು..!
ಕಡಿದುರುಳಿಸಿದ ಮರದಡಿಯಲ್ಲೆಲ್ಲ ಯುದ್ಧಭೂಮಿಯಂತೆ ಸತ್ತು ಬಿದ್ದ ಅನನ್ಯ ಪಕ್ಷಿಸಂಕುಲಗಳು! 
ಜೀವಜಾಲವನ್ನು, ಪಕ್ಷಿಸಂಕುಲವನ್ನು ಪ್ರೀತಿಸುವ ಯಾರದ್ದೇ ಆದರೂ ಹೃದಯ ಹಿಂಡುವ,ಮನಕಲಕುವ ನೋಟಗಳಿವು! 
ಈ  ದೃಶ್ಯದ,  ಈ ಮಾರಣಾಧ್ವರಕ್ಕೆ ಯಾರು ಹೊಣೆ..? ಉತ್ತರಿಸುವವರು ಯಾರು..? 
ಅಭಿವೃದ್ದಿ ಎಂದರೆ ಕೊಲ್ಲುವುದೇ..?  ನಾಶವೇ..? 

ಈ ಪ್ರಶ್ನೆಯನ್ನು ಅನೇಕರು ಕೇಳಲೇ ಇಲ್ಲ. 
ಕೇಳುವುದೂ ಇಲ್ಲ..!
ಏಕೆಂದರೆ ಪಕ್ಷಿ ವರ್ಗಕ್ಕೆ ಓಟಿಲ್ಲ..!
 ರಾಜಕೀಯದ ಲಾಭಗಳಿಲ್ಲ! 
ಕನಿಷ್ಟ ಈ ಹೆಸರಲ್ಲಿ ಚಿಲ್ಲರೆ, ಮುಕ್ಕಾಲಿನ ವ್ಯವಹಾರವೂ ಇಲ್ಲ ಎಂಬುದನೇಕರ ವ್ಯಾವಹಾರಿಕ  ಲೆಕ್ಖಾಚಾರ! 

true 06.10.2021. photos

ಆದರೆ....
 ಕಾಸರಗೋಡು ಜಿಲ್ಲೆಯ ಹೆದ್ದಾರಿ ಆರಂಭಗೊಳ್ಳುವ ತಲಪ್ಪಾಡಿಯ ಕುಂಜತ್ತೂರಿನಲ್ಲಿ ಕಡಿದುರುಳಿಸಿದ ಮರಗಳಡಿ ತಾಯಿ ಪಕ್ಷಿಗಳ ಆಕ್ರಂದನ ಕಂಡಾಗ ಪ್ರೀತಿಯ ಸೆಲೆ ಬತ್ತದ ತಾಯಿ ಕರುಳಿನ, ಮಾತೃ ಮಮತೆಯ ಒಂದಷ್ಟು ಪರಿಸರ ಪ್ರೇಮಿಗಳು ಈ ವಿಷಯವನ್ನು ನನ್ನೂರಿನ ಪಕ್ಷಿ ವೀಕ್ಷಕ, ಪರಿಸರ ಪ್ರೇಮಿ ರಾಜು ಮಾಸ್ತರ್ ಕಿದೂರು ಅವರ ಗಮನಕ್ಕೆ ತಂದರು. ತಕ್ಷಣವೇ ಸ್ಥಳಕ್ಕೆ ಭೇಟಿ ಇತ್ತು ಪರಿಸ್ಥಿತಿ ಅವಲೋಕಿಸಿದ ಅವರು ವಿಷಯವನ್ನು ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದರು. 

ಎಲ್ಲರೂ ಕಾಳಜಿ, ಕಳಕಳಿಯಿಂದಲೇ ಖುದ್ದು ಸ್ಥಳಕ್ಕೆ ಭೇಟಿ ಇತ್ತರು. ಮಾತಿಲ್ಲದ ನೋವಿಗೆ ಮಿಡಿದರು. ಮಾತು ಬಾರದ ಪಕ್ಷಿಗಳ ಆಕ್ರಂದನ ದ ಅಳಲು ಅಧಿಕಾರ ಪೀಠದಲ್ಲಿದ್ದವರ ಎದೆಗೂ ನಾಟಿತು, ಮನಸು ಮಿಡಿಯಿತು.. 
ಹೆದ್ದಾರಿ ಉದ್ದಕ್ಕೂ ಸಹಸ್ರಾರು ಮರಗಳಲ್ಲಿ ವಲಸಿಗ ಪಕ್ಷಿಗಳೂ ಸೇರಿದಂತೆ ಬೆಳ್ಳಕ್ಕಿಗಳೂ ಒಳಗೊಂಡು ಅಸಂಖ್ಯ ಪಕ್ಷಿಗಳ ಜೀವವೈವಿಧ್ಯಗಳು ನೆಲೆಸಿವೆ. ಇತ್ತೀಚೆಗೆ ಕಾಸರಗೋಡಿನ ಪಕ್ಷಿಪ್ರೇಮಿಗಳು, ಸಂಶೋಧಕರು ಮತ್ತು "ಮಾರ್ಕ್ಸ್ "  (marks) ಸಂಘಟನೆಯ ಕಾರ್ಯಕರ್ತರು ಈ ಪಕ್ಷಿಗಳ ಕುರಿತಾಗಿ ಸಮೀಕ್ಷೆ ನಡೆಸಿದ್ದಾರೆ. ಅದರ ಅಂಕಿ ಅಂಶ ಸಹಿತ ವರದಿಯನ್ನವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈ ವರದಿಯ ಆಧಾರದಲ್ಲವರು ಪಕ್ಷಿ ಸಂಕುಲಗಳ ರಕ್ಷಣೆಗೆ ಮುಂದಾಗಿದ್ದಾರೆನ್ನುವುದು ಸಂತಸದ ಪ್ರಸಂಶನೀಯ ಕೆಲಸ. 

true 0106.10.2021.photos

 ವಲಸಿಗ ಪಕ್ಷಿ ಸಹಿತ ಸಂರಕ್ಷಿತ ವಿಭಾಗದ ಪಕ್ಷಿಗಳನ್ನು ನಾಶ ಮಾಡುವುದು, ಅದರ ಗೂಡು ಕೆಡಹುವುದು, ಸಂತಾನವೃದ್ದಿಗೆ ಅಡಚಣೆ ಒಡ್ಡುವುದು ಕಾನೂನು ವಿಧೇಯ ಅಪರಾಧವೇ ಆಗಿದೆ. ಇದಕ್ಕೆ ಶಿಕ್ಷೆಯೂ ಇದೆ..! ಮರ ಕಡಿಯಲು ಗುತ್ತಿಗೆ ಪಡೆದವರು ಕೂಡಾ ಈ ಕಾನೂನು ಪಾಲಿಸಲೇ ಬೇಕಾಗಿದೆ. ಈ ಕಾನೂನನ್ನು ಪಾಲಿಸದೇ ಮರ ಕಡಿದುರುಳಿಸಿದ ಕಾರಣ ಪಕ್ಷಿ ಹತ್ಯಾ ಕಾಂಡ ನಡೆದಿದೆ. ಇಲಾಖೆಯ ಮಧ್ಯ ಪ್ರವೇಶದಿಂದ ಇಕ್ಕಟ್ಟಿಗೆ ಸಿಲುಕಿದ್ದೀಗ ಮರ ಕಡಿಯುವ ಗುತ್ತಿಗೆ ಪಡೆದ ಗುತ್ತಿಗೆದಾರರು..! 

ಪ್ರಸ್ತುತ ಪಕ್ಷಿ ಗೂಡುಗಳಿರುವ ಮರಗಳನು ಪ್ರತ್ಯೇಕಿಸಿ ಗುರುತಿಸಲಾಗಿದೆ. ಅದರಲ್ಲಿದ್ದ ಮರಿಗಳು ರೆಕ್ಕೆ ಬಲಿತು ಹಾರಿಹೋಗುವ ತನಕ ಆ ಮರಗಳನ್ನು ಕಡಿಯಕೂಡದು. ಉಳಿದ ಮರಗಳನ್ನು ಕಡಿಯಬಹುದೆಂದು ಇಲಾಖೆ ಆದೇಶಿಸಿದೆ. ಇದರಂತೆ ಪಕ್ಷಿ ಮರಿಗಳಿಗೆ ಜೀವದಾನ ಸಿಕ್ಕಿದೆ. ಮರಿಪಕ್ಷಿಗಳಿಗೆ ಕನಿಷ್ಟ 15ದಿನದಲ್ಲಿ ರೆಕ್ಕೆ ಬಲಿಯುತ್ತವೆ. ಅದು ಹಾರಾಡಲು ಸಮರ್ಥವಾಗುತ್ತದೆ.

true 03.06.10.2021. photos

ಇದೆಲ್ಲ ಸರಿ, ಆದರೆ ಈಗಾಗಲೇ ಕಡಿದುರುಳಿಸಿದ ಮರಗಳಡಿ ಅರೆಜೀವದಲ್ಲಿದ್ದ ಪಕ್ಷಿ ಮರಿಗಳನ್ನು ಏನು ಮಾಡುವುದು??? ಅದಕ್ಕೆ ಉತ್ತರವಾಗಿ ಎದೆಯೊಡ್ಡಿ ಮಾತೃ ವಾತ್ಸಲ್ಯದಆಸರೆಯ ಕರಗಳನ್ನೊಡ್ಡಿದವರೇ ಪರಿಸರಪ್ರೇಮಿ ಅಧ್ಯಾಪಕ ಕಿದೂರಿನ ರಾಜು ಮಾಸ್ತರ್.! ಗಾಯಗೊಂಡ ಅರೆಜೀವದ 40ಕ್ಕೂ ಅಧಿಕ ಪಕ್ಷಿ ಮರಿಗಳನ್ನವರು ಸಂರಕ್ಷಣೆ ಯ ಹೊಣೆಹೊತ್ತು ತನ್ನ ಮನೆಗೇ ತಂದು ಲಾಲನೆ ಪಾಲನೆ ಮಾಡುತ್ತಾರೆ. ನಾಲ್ಕೈದು ಮರಿಗಳು ಸತ್ತರೆ ಉಳಿದವು ಚೇತರಿಸುತ್ತವೆ..ಕೆಲವೇ ದಿನದಲ್ಲದು ಚೇತರಿಸಿ ಹಾರಾಡಬಹುದು. ಆ ಬಳಿಕ ಅದಕ್ಕೆ ಸ್ವಚ್ಛಂದ ಬದುಕು. ಆಕಾಶವೆಲ್ಲ ಅದರದ್ದೇ ಆಗುವಂತೆ ಹಾರಾಡಲೀ.. ಎನ್ನುತ್ತಾರೆ ರಾಜು ಮಾಸ್ತರ್. 

true 02. 06.10.2021 photos

ಒಟ್ಟಿನಲ್ಲಿ ಪರಿಸರ ಪ್ರೇಮಿಗಳು ಸಂತೋಷ ಪಡುವ ಸುದ್ದಿಯೊಂದು ಗಡಿನಾಡಿನ ಹೆದ್ದಾರಿಯಲ್ಲಿ ನಡೆದಿದೆ. ಮಾನವರಂತೆಯೇ ಜೀವಜಾಲಕ್ಕೂ ಈ ಜಗದಲ್ಲಿ ಬದುಕುವ ಹಕ್ಕಿದೆ. ನಾವದಕ್ಕೆ ಈ ಅವಕಾಶ ಒದಗಿಸಬೇಕಾಗಿದೆ ಅಷ್ಟೇ...  ನಾವಿದನ್ನು ಮರೆತಿದ್ದೇವೆ ಅಲ್ವೇ..?

 


  - ಎಂ. ನಾ. ಚಂಬಲ್ತಿಮಾರ್ 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.