ಸಂಪುಟ ವಿಸ್ತರಣೆ/ ಪುನಾರಚನೆ: ದೆಹಲಿಯಿಂದ ಸಂದೇಶ ಬಾರದೆ ಆಕಾಂಕ್ಷಿಗಳಲ್ಲಿ ತಳಮಳ..!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ನವದೆಹಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆ- ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಂಭವವಿದೆ. ಐಟಿಬಿಟಿ ಇಲಾಖೆಯಿಂದ ಹಮ್ಮಿಕೊಂಡಿರುವ ಹೂಡಿಕೆದಾರರ ಸಮಾವೇಶದ ಪೂರ್ವ ಸಿದ್ದತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ತೆರಳುತ್ತಿದ್ದು, ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಸಂಭವವಿದೆ.

ದೆಹಲಿಗೆ ತೆರಳಿದ ಸಂದರ್ಭದಲ್ಲಿ ಬೊಮ್ಮಾಯಿ ಅವರು ಪಕ್ಷದ ಪ್ರಮುಖರನ್ನು ಭೇಟಿಯಾಗುವುದಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಅಮಿತ್ ಷಾ ಅವರು ಸಂಪುಟ ಪುನಾರಚನೆ/ವಿಸ್ತರಣೆ ಕುರಿತಂತೆ ದೆಹಲಿಗೆ ತೆರಳಿದ ನಂತರ ತಿಳಿಸುವುದಾಗಿ ಹೇಳಿದ್ದರು. ವಿದೇಶ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರಮೋದಿ ಅವರು ಸ್ವದೇಶಕ್ಕೆ ಹಿಂತಿರುಗಿ ನಾಲ್ಕೈದು ದಿನ ಕಳೆದರೂ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಯಿಂದ ಯಾವುದೇ ಸಂದೇಶ ಬಾರದೆ ಇರುವುದು ಆಕಾಂಕ್ಷಿಗಳಲ್ಲಿ ತಳಮಳ ಉಂಟು ಮಾಡಿದೆ.

 ಮೇ 10ರೊಳಗೆ ಸಂಪುಟ ಪುನಾರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಒಂದು ಕಡೆ ಸಿಎಂ ನಾಳೆ ದೆಹಲಿಗೆ ತೆರಳುತ್ತಿರುವುದು, ಮತ್ತೊಂದು ಕಡೆ ದುಬೈ ಪ್ರವಾಸ ಮುಗಿಸಿ ಬಿಎಸ್‍ವೈ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬಳಿಕ ಸಂಪುಟ ರಚನೆ ಅಥವಾ ಪುನಾರಚನೆಗೆ ಒಪ್ಪಿಗೆ ಸಿಗುವ ಸಂಭವವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಇಲ್ಲವೇ ಶುಕ್ರವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಖಚಿತ ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಸದ್ಯ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇದ್ದು ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ.

ಇದುವರೆಗೂ ಸಿಎಂ ಆಗಲಿ ಇಲ್ಲವೇ ಪಕ್ಷದ ನಾಯಕರಾಗಲಿ ಸಂಪುಟ ಪುನಾರಚನೆಯೇ ಅಥವಾ ವಿಸ್ತರಣೆಯೇ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಏನೇ ಬದಲಾವಣೆ ಮಾಡಿದರೂ ವರಿಷ್ಠರು ಅಳೆದು ತೂಗಿ ಸಾಕಷ್ಟು ಲೆಕ್ಕಾಚಾರದಲ್ಲೇ ಬದಲಾವಣೆ ಮಾಡುವ ಸಂಭವವಿದೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಯಾವುದೇ ಆದರೂ ಅಸಮಾಧಾನ ಸ್ಫೋಟಗೊಳ್ಳುವುದಂತೂ ದಿಟ. ಹಾಲಿ ಸಂಪುಟದಲ್ಲಿರುವ ಕೆಲವು ಸಚಿವರಿಗೆ ಕೋಕ್ ನೀಡಿ ಅವರನ್ನು ಪಕ್ಷದ ಸಂಘಟನೆಗೆ ನಿಯೋಜನೆ ಮಾಡಲು ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ. ಬರಲಿರುವ ಬಿಬಿಎಂಪಿ, ಜಿಪಂ, ತಾಪಂ ಹಾಗೂ 2023ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರದ ರುಚಿ ಕಂಡ ಹಿರಿಯ ತಲೆಗಳನ್ನು ಪಕ್ಷದ ಸಂಘಟನೆಗೆ ನಿಯೋಜನೆ ಮಾಡುವ ಲೆಕ್ಕಾಚಾರವೂ ಇದೆ.

2006, 2008 ಹಾಗೂ ಪ್ರಸ್ತುತ ಸರ್ಕಾರದಲ್ಲಿ ಸಚಿವರಾಗಿರುವವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಿ 3ಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಯುವ ಶಾಸಕರು ಹಾಗೂ ಸಂಘಟನೆ ಹಿನ್ನೆಲೆಯಿಂದ ಬಂದವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ಕೂಗು ಕೇಳಿಬಂದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಬಿಜೆಪಿಯ ಭದ್ರಕೋಟೆ ಎನಿಸಿದ ದಾವಣಗೆರೆ, ಮಡಿಕೇರಿ, ಕಲಬುರಗಿ, ವಿಜಾಪುರ, ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕೆಂಬ ಬೇಡಿಕೆ ಹೆಚ್ಚಾಗಿದೆ.

ಮೂಲಗಳ ಪ್ರಕಾರ ಸಿಎಂ ಬೊಮ್ಮಾಯಿ ಅವರು ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆ ಮಾಡಲಿದ್ದು, 4ರಿಂದ 6 ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಪ್ರತಿನಿಧಿಸುವ ಪ್ರಭಾವಿ ಇಬ್ಬರು ಸಚಿವರಿಗೆ ಕೋಕ್ ಸಿಗಲಿದೆ. ಪ್ರಬಲ ಆಕಾಂಕ್ಷಿಯಾಗಿರುವ ಸತೀಶ್ ರೆಡ್ಡಿಯನ್ನು ಬಿಬಿಎಂಪಿ ಚುನಾವಣಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಣೆ ಹಾಕಬಹುದು.

ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಶಾಸಕರಾದ ಎಸ್.ಎ.ರಾಮದಾಸ್, ಎನ್.ಮಹೇಶ್ ಸಂಪುಟಕ್ಕೆ ಸೇರ್ಪಡೆಯಾಗಬಹುದು. ಕರಾವಳಿ ಭಾಗದಿಂದ ಉಡುಪಿ ಜಿಲ್ಲೆಯ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕಿತ್ತೂರು ಕರ್ನಾಟಕದಿಂದ ಬೆಳಗಾವಿ ಜಿಲ್ಲೆಯ ಶ್ರೀಮಂತ ಪಾಟೀಲ್ ಅಥವಾ ಮಹೇಶ್ ಕುಮಟಹಳ್ಳಿ, ಹುಬ್ಬಳ್ಳಿಯಿಂದ ಅರವಿಂದ ಬೆಲ್ಲದ್, ದಾವಣಗೆರೆಯಿಂದ ಎಂ.ಪಿ.ರೇಣುಕಾಚಾರ್ಯ, ಚಿತ್ರದುರ್ಗದಿಂದ ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಕಲಬುರಗಿಯಿಂದ ದತ್ತಾತ್ರೇಯ ಪಾಟೀಲ್ ರೇವೂರ, ವಿಜಾಪುರದಿಂದ ಬಸನಗೌಡ ಪಾಟೀಲ್ ಯತ್ನಾಳ್, ಯಾದಗಿರಿಯಿಂದ ರಾಜುಗೌಡ ನಾಯಕ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ಪ್ರಕರಣವೊಂದರಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಭವಿಷ್ಯವನ್ನು ವರಿಷ್ಠರೇ ತೀರ್ಮಾನಿಸಲಿದ್ದಾರೆ.

  • ಪೊಲಿಟಿಕಲ್ ಬ್ಯೂರೋ true news ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.