ಸಿಡಿ ಪ್ರಕರಣ ಮತ್ತೆ ಸದ್ದು: ಸಂತ್ರಸ್ತೆ ಯುವತಿಗೆ ಬಂಧನ ಭೀತಿ..!?

ಬೆಂಗಳೂರು: ರಾಜ್ಯದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ರಮೇಶ್‌ ಜಾರಕಿಹೊಳಿ ವಿರುದ್ದ ಅತ್ಯಾಚಾರದ ದೂರು ನೀಡಿರುವ ಸಿಡಿ ಸಂತ್ರಸ್ತೆ ಯುವತಿಗೆ ಬಂಧನ ಭೀತಿ ಎದುರಾಗಿದೆ ಎಂದು ಯುವತಿಯ ಪರ ವಕೀಲರು ಹೈಕೋಟ್‌ಗೆ ಹೇಳಿಕೆ ನೀಡಿದ್ದಾರೆ.

ರಮೇಶ್‌ ಜಾರಕಿಹೊಳಿ ವಿರುದ್ದ ಕೂಡಾ ಸಂತ್ರಸ್ತ ಯುವತಿ ದೂರು ನೀಡಿದ್ದರು. ಅತ್ಯಾಚಾರದ ಆರೋಪ ಹೊರಿಸಿದ್ದರು. ಪೊಲೀಸರು ಅವರನ್ನು ಇದುವರೆಗೂ ಬಂಧಿಸಿಲ್ಲ. ಆದರೆ, ಜಾರಕಿಹೊಳಿ ನೀಡಿದ ದೂರಿನಂತೆ ಯುವತಿಯನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ ಯುವತಿಯನ್ನು ಬಂಧಿಸದಂತೆ ಎಸ್‌ಐಟಿ ಪೊಲೀಸರಿಗೆ ನಿರ್ದೇಶಿಸುವಂತೆ ಹೈಕೋರ್ಟ್‌ಗೆ ಯುವತಿ ಪರ ವಕೀಲರು ಮನವಿ ಮಾಡಿದ್ದಾರೆ.

ಯುವತಿಯ ಪರವಾಗಿ ವಕೀಲರು, ಸಿಆರ್‌ಪಿಸಿ 482 ರದ್ದು ಮಾಡುವಂತೆ ಹೈಕೋರ್ಟ್‌‌ಗೆ ಕೋರಿದ್ದರು. ಆದರೆ ಸಿಆರ್‌ಪಿಸಿ 482 ಅಡಿ ಬಂಧಿಸದಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಬಂಧಿಸದಂತೆ ಇರಲು ಪ್ರತ್ಯೆಕವಾಗಿ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಲಿ ಎಂದು ಹೈಕೋರ್ಟ್ ನ್ಯಾಯಮೂರ್ತಿ‌‌ ಸುನೀಲ್ ದತ್ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲೆ ಇಂದಿರಾ ಜೈಸಿಂಗ್‌ ಅವರು ಸಂತ್ರಸ್ತೆ ಯುವತಿಯ ಪರ ವಕಾಲತು ನಡೆಸಲು ಒಪ್ಪಿಕೊಂಡಿದ್ದಾರೆ. ಇನ್ನೊಂದು ಕಡೆ ಮಾಜಿ ಸಚಿವ, ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಪ್ರಕರಣವನ್ನು ಮುಗಿಸಲು ಮತ್ತು ತನಗೆ ಸಚಿವ ಸ್ಥಾನ ಕೊಡಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಫಡ್ನವಿಸ್ ಕರ್ನಾಟಕ ರಾಜಕೀಯದಲ್ಲಿ ತಾನು ತಲೆ ಹಾಕುವುದಿಲ್ಲ. ಅವರ ಬೇಡಿಕೆಯನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದ ಸಮಯದಲ್ಲಿ ವಿಡಿಯೊದಲ್ಲಿ ಇರುವುದು ತಾನಲ್ಲ ಎಂದು ಹೇಳಿದ್ದ ಜಾರಕಿಹೊಳಿ, ಇತ್ತೀಚೆಗೆ ಎಸ್‌ಐಟಿ ಮುಂದೆ ವಿಡಿಯೊದಲ್ಲಿ ಇರುವುದು ತಾನೆ ಎಂದು ಒಪ್ಪಿಕೊಂಡಿದ್ದರು. ಆದರೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದರೂ ಆರೋಪಿ ಜಾರಕಿಹೊಳಿಯನ್ನು ಇದುವರೆಗೂ ಬಂಧಿಸಿಲ್ಲ. ಇದು ಸಂತ್ರಸ್ತೆ ಯುವತಿಯ ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದರು.

ಪ್ರಕರಣದ ಕುರಿತು ಕಾನೂನು ತಜ್ಞರು, “ಪ್ರಕರಣದ ತನಿಖೆ ಮುಂದುವರೆಯಬೇಕಾದರೆ, ಅತ್ಯಾಚಾರ ಆರೋಪಿಯ ವೈದ್ಯಕೀಯ ಸಾಕ್ಷ್ಯಗಳನ್ನು ಸಂಗ್ರಹಿಸುವ ಹಾಗೂ ಅತ್ಯಾಚಾರ ಆರೋಪಿಯ ಗಂಡಸುತನದ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿ ಆಗಲೇಬೇಕಿದೆ. ಈ ಕಾರಣದಿಂದ ತನಿಖಾಧಿಕಾರಿಯು ಆರೋಪಿಯನ್ನು ವಶಕ್ಕೆ ಪಡೆದು ವೈದ್ಯರ ಮುಂದೆ ಹಾಜರು ಪಡಿಸಬೇಕಿರುತ್ತದೆ. ಆದರೆ ಪ್ರಕರಣವು ರಾಜ್ಯದ ಪ್ರಭಾವಿ ರಾಜಕೀಯ ನಾಯಕನ ವಿರುದ್ದವೇ ಇರುವುದರಿಂದ ಈ ಪ್ರಕ್ರಿಯೆ ನಡೆಯುತ್ತಿಲ್ಲ” ಎಂದು ಅಭಿಪ್ರಾಯಪಡುತ್ತಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.