ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗ ಎಂಬ ಮೂರು ಅಂಗಗಳಿದ್ದು, ಈ ಮೂರು ಅಂಗಗಳನ್ನು ದೇಶದ ಸಂವಿಧಾನ ಪ್ರಕಾರ ನಡೆಸಲಾಗುತ್ತಿದೆ. ಇವುಗಳ ಜೊತೆಗೆ ಪತ್ರಿಕಾ ರಂಗವು ಒಂದು ಅಂಗವಾಗಿದೆ ಎಂದು ಹೇಳಲಾಗಿದೆ. ಶಾಸಕಾಂಗವು ವಿಧಾನ ಮಂಡಲದಲ್ಲಿ ಅಥವಾ ಸಂಸತ್ತಿನಲ್ಲಿ ರೈತರಿಗೆ ಕೂಲಿಕಾರರಿಗೆ ಸೇರಿದಂತೆ ದೇಶದ ಸದ್ಪ್ರಜೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ರೀತಿಯ ಉತ್ತಮ ಯೋಜನೆಗಳನ್ನ ಜಾರಿಗೆ ತರಲು ತೀರ್ಮಾನ ಕೈಗೊಳ್ಳಲಾಗುವುದು, ಕಾರ್ಯಾಂಗವು ಶಾಸಕಾಂಗ ರೂಪಿಸಿದ ಯೋಜನೆಗಳನ್ನ ಕಾರ್ಯಕ್ರಮಗಳನ್ನ ಯಥಾವತ್ತಾಗಿ ಜಾರಿಗೆ ತಂದು. ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ನ್ಯಾಯಾಂಗವು ಈ ಎರಡು ಅಂಗಗಳು ತೆಗೆದು ಕೊಂಡು ನಿರ್ಣಯವು ಸಂವಿಧಾನಾತ್ಮಕವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿದಿಯೋ ಇಲ್ಲವೋ ಸರಿ ತಪ್ಪುಗಳನ್ನ ಹಾಗೂ ವಿವಿಧ ಲೋಪದೋಷಗಳನ್ನು ಎತ್ತಿ ಹಿಡಿದು ನ್ಯಾಯ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ನಾಲ್ಕನೇ ಅಂಗವಾದ ಪತ್ರಿಕಾ ರಂಗವು, ಶಾಸಕಾಂಗ ನ್ಯಾಯಾಂಗ ಕಾರ್ಯಾಂಗಗಳು ತೆಗೆದು ಕೊಂಡು ನಿರ್ಣಯಗಳನ್ನು ಮತ್ತು ಎಲ್ಲಾ ಅಂಶಗಳನ್ನು ಸಮಗ್ರವಾದ ಮಾಹಿತಿಗಳನ್ನು ದೇಶದ ಜನತೆಗೆ ತೋರಿಸುವ ಅಥವಾ ಬಿತ್ತರಿಸುವ ಕೈಗನ್ನಡಿಯಾಗಿದೆ.
ಸಾರ್ವಜನಿಕರಿಗೆ ಅಗತ್ಯವಿರುವ ವಿಷಯಗಳನ್ನು ಕುರಿತು ಮಾಹಿತಿ ನೀಡುವ ಮತ್ತು ಕೈಗನ್ನಡಿಯಾಗಿರುವ ಇಂತಹಾ ಪತ್ರಿಕಾ ರಂಗವನ್ನ ಕೆಲವು ಕಾಣದ ಕೈಗಳಿಂದ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡುವುದರಲ್ಲಿ ಅನುಮಾನವಿಲ್ಲ. ಹೌದು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ರಣಕಹಳೆಯೂದಿದಾಗ ದೇಶದ ಜನತೆಗೆ ಸ್ವಾತಂತ್ರ್ಯದ ಅರಿವು ಮೂಡಿಸುವ ಸದುದ್ದೇಶದಿಂದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ವಿವಿಧ ರೀತಿಯ ಹೋರಾಟ ನಡೆಸಿದ ಮಹಾತ್ಮ ಗಾಂಧಿಯವರಾದಿಯಾಗಿ, ಡಾ, ಬಿ, ಆರ್, ಅಂಬೇಡ್ಕರ್ ಸೇರಿದಂತೆ ಅನೇಕರು ಬ್ರಿಟಿಷರು ನಡೆಸುತ್ತಿರುವ ದಬ್ಬಾಳಿಕೆ ಮತ್ತು ಅದನ್ನು ಸದೆಬಡಿಯಲು ಪತ್ರಿಕೆಯನ್ನು ಪ್ರಾರಂಭಿಸಿದರು. ಇಂತಹ ಪತ್ರಿಕಾ ರಂಗವನ್ನ ಸದೆಬಡಿಯುವ ಪ್ರಯತ್ನ ಹಲವಾರು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ.
ಶತಮಾನದ ಹಿಂದೆ ಆರಂಭವಾದ ಪತ್ರಿಕಾ ರಂಗವು, ಸಂವಿಧಾನದ 19 (1)(ಎ) ವಿಧಿಯ ಪ್ರಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆಯಾದರೂ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಯಾವುದೇ ವಿಶೇಷ ಉಲ್ಲೇಖದ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದರು. ಏಕೆಂದರೆ ಪತ್ರಿಕೆ ಹಾಗೂ ನಾಗರಿಕರು ಸಮಾನರಾಗಿದ್ದು, ಇಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅದೇನೆಂದರೆ ಯಾವುದೇ ನಾಗರೀಕರು ಹೇಳಿಕೆ, ಬರವಣಿಗೆ, ಮತ್ತು ದೃಶ್ಯ ಮಾಧ್ಯಮದ ಅಥವಾ ಪತ್ರಿಕೆಯ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಅದೇ ರೀತಿಯಲ್ಲಿ ನಾಗರೀಕರ ಧ್ವನಿಯಾಗಿ ಪತ್ರಿಕೆಗಳು ಕೆಲಸ ನಿರ್ವಹಿಸುತ್ತಿವೆ ಹೀಗಾಗಿ ಪತ್ರಿಕಾ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಪಂಚದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅತಿ ದೊಡ್ಡ ಸವಾರಿ ಮಾಡಿದವರೆಂದರೆ ಜವಾಹರಲಾಲ್ ನೆಹರೂರವರು. ದೇಶದ ಮೊದಲ ಪ್ರಧಾನಿಯಾದ ನೆಹರೂರವರು 1951 ರಲ್ಲಿ ಭಾರತೀಯ ಸಂವಿಧಾನಕ್ಕೆ ಒಂದನೇ ತಿದ್ದುಪಡಿ ತರಲು ಪ್ರಸ್ತಾಪಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಂದೇ ಮೊದಲ ಅಂಕುಶ ಪ್ರಯೋಗಿಸಿದ್ದರು. ಪತ್ರಿಕಾ ಕಾಯ್ದೆ 1951 ರ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದನ್ನು ಸಮರ್ಥಿಸಿಕೊಂಡರು. ಅಲ್ಲದೆ ಈ ತಿದ್ದುಪಡಿಯು ಆರ್ಟಿಕಲ್ 19 ರ ಷರತ್ತು 2 ರ ಪ್ರಕಾರ ಸ್ವಾತಂತ್ರ್ಯ ಭಾಷಣಗಳ ಮೇಲೆಯೂ ನಿರ್ಬಂಧವನ್ನು ವಿಧಿಸಲಾಯಿತು. ಆಗಿನ ಕಾಲದ ಕವಿ ಮತ್ತು ಸಾಹಿತಿ ಮಜ್ರೂಹ್ ಸುಲ್ತಾನ್ ಪುರಿ ರವರು ತಮ್ಮ ಕವಿತೆಯಲ್ಲಿ ನೆಹರೂ ರವರನ್ನು ಟೀಕಿಸಿದ್ದಕ್ಕೆ ಬಂಧನಕ್ಕೊಳಗಾಗಿ ಒಂದು ವರ್ಷ ಜೈಲು ವಾಸ ಅನುಭವಿಸುವಂತಾಯಿತು ಎನ್ನಲಾಗಿದೆ.
ನಂತರ ಪ್ರಧಾನಿಯಾಗಿ ಬಂದ ಇಂದಿರಾಗಾಂಧಿರವರ ನೇತೃತ್ವದಲ್ಲಿ ಪತ್ರಿಕಾ ರಂಗದ ಮೇಲೆ ನಿರಂತರ ದಾಳಿ ನಡೆಸಲಾಯಿತು.1975 ರ ತುರ್ತುಪರಿಸ್ಥಿತಿಯ ವಿರುದ್ಧ ಪತ್ರಿಕೆಗಳಲ್ಲಿ ಬರೆದಿದ್ದಕ್ಕೆ ಅನೇಕ ಪ್ರಮುಖ ಪತ್ರಕರ್ತರನ್ನ ಜೈಲಿಗೆ ಅಟ್ಟುವ ಕೆಲಸ ನಡೆಯಿತು. ಸರ್ಕಾರದ ಅನಾಚಾರ ಬಯಲಿಗೆಳೆದ್ದಿದ್ದಕ್ಕೆ ಹಲವಾರು ಸ್ವಂತ ಪತ್ರಿಕೆಗಳ ಅಸ್ತಿತ್ವ ನಶಿಸಿದವಲ್ಲದೇ ಇದರಿಂದಾಗಿ ಅನೇಕ ಮುದ್ರಣಾಲಯಕ್ಕೆ ಬೀಗ ಹಾಕಲಾಯಿತು. ತುರ್ತುಪರಿಸ್ಥಿತಿ ಘೋಷಣೆಯಿಂದಾಗಿ ಎರಡು ದಿನಗಳವರೆಗೆ ಪತ್ರಿಕೆಗಳಿಗೆ ತಡೆ ಹೇರಲಾಗಿತ್ತಲ್ಲದೇ, ಕಮ್ಯುನಿಸ್ಟ್ ಪತ್ರಿಕೆಗಳಿಗೆ ಪ್ರಾಶಸ್ತ್ಯ ನೀಡಿ ರಾಷ್ಟ್ರೀಯವಾದಿ ಪತ್ರಿಕೆಗಳಿಗೆ ನಿರ್ಭಂಧ ವಿಧಿಸಲಾಯಿತು. ರಾಜೀವ್ ಗಾಂಧಿಯವರು ಸಹ ತಮ್ಮ ಸ್ವ ಪಕ್ಷದ ಹಲವು ರಾಜಕಾರಣಿಗಳು ಮಾಡಿದ ಬೋಫೋರ್ಸ್ ಹಗರಣವನ್ನು ಮಾಧ್ಯಮದವರು ಬಯಲಿಗೆ ತಂದ ಕಾರಣ 1988 ರಲ್ಲಿ ಕಠಿಣ ಬರಹಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಜಾರಿಗೆ ತಂದು ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದರು. ಆದರೆ ಅನೇಕ ಹಿರಿಯ ಪತ್ರಕರ್ತರೆಲ್ಲರೂ ಸೇರಿ ಹೋರಾಟ ನಡೆಸಿ ಸಾಮೂಹಿಕ ಬಹಿಷ್ಕಾರ ನಡೆಸಿದರ ಫಲವಾಗಿ ರಾಜೀವ್ ಗಾಂಧಿ ಹಿಂದೆ ಸರಿಯಬೇಕಾಯಿತು.
ಹೀಗೆ ಹಲವಾರು ರೀತಿಯಲ್ಲಿ ತುಳಿತಕ್ಕೊಳಗಾದ ಪತ್ರಿಕಾ ರಂಗದ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ದೇಶದ ನ್ಯಾಯಾಲಯಗಳು ಮಹತ್ವದ ಪಾತ್ರ ವಹಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸ್ವತಃ ಅಭಿಪ್ರಾಯ ಪಟ್ಟಿದ್ದು ಹಲವು ಪ್ರಕರಣಗಳಲ್ಲಿ ಈ ಸಂಬಂಧ ಕೆಲವು ಆದೇಶಗಳನ್ನು ನೀಡಿದೆ ಎನ್ನಲಾಗುತ್ತಿದೆ. ಹೀಗಿರುವಾಗ ದೇಶದ ವಿವಿಧ ರಾಜ್ಯಗಳಲ್ಲಿ ಪತ್ರಕರ್ತರ ಮೇಲೆ ಹೆಚ್ಚು ಒತ್ತಡ ಹಾಕುವುದಲ್ಲದೇ, ಪುಂಡರಿಂದ, ರಾಜಕಾರಣಿಗಳಿಂದ ನಿರಂತರವಾಗಿ ಹಲ್ಲೆ ಜೀವ ಬೆದರಿಕೆ ಮತ್ತು ಪತ್ರಕರ್ತರಿಗೆ ಕೊಲೆ ಮಾಡಿಸುವುದು ಅಥವಾ ಕೊಲೆ ಮಾಡುವುದು ನಿರಂತರವಾಗಿ ನಡೆಯುತ್ತಿದೆಯಾದರೂ, ಪತ್ರಕರ್ತರು ಯಾವುದೇ ಕಾರಣಕ್ಕೂ ಯಾರ ಅಡಿಯಾಳಾಗದೇ, ಈಗಲೂ ಸಹಾ ಪತ್ರಿಕಾರಂಗದ ಸೈಧಾಂತಿಕ ಸಿದ್ದಾಂತವನ್ನು ಮೈಗೂಡಿಸಿಕೊಂಡು ಯಾರಿಗೂ ಹೆದರದೇ ಸುದ್ದಿ ಮಾಡುವ ಅನೇಕ ಪತ್ರಕರ್ತರಿದ್ದಾರಲ್ಲದೇ,ನೈಜ್ಯ ಹಾಗೂ ಸತ್ಯಾಂಶವಿರುವ ಸುದ್ದಿ ಮಾಡುವವರಿದ್ದಾರೆ.
ಅಂತಹ ಪತ್ರಕರ್ತರಿಗೆ ನಿರ್ಭೀತಿಯಿಂದ ಸುದ್ದಿ ಮಾಡಲು ಅನೇಕ ರಾಜಕಾರಣಿಗಳು, ಪುಡಾರಿಗಳು ಬಿಡುತ್ತಿಲ್ಲ. ಆದರೆ ಕೆಲವೇ ಕೆಲವು ಪತ್ರಕರ್ತರು ಇಲ್ಲ ಸಲ್ಲದ ಸುದ್ಧಿ ಮಾಡುವುದು, ನೈಜ್ಯ ಘಟನಾವಳಿಗಳನ್ನು ತಿರುಚಿ ಸುದ್ದಿಮಾಡುವ ಪತ್ರಕರ್ತರಿದ್ದಾರೆ. ನೈಜ್ಯ ಹಾಗೂ ಸತ್ಯಾಂಶವನ್ನು ತಿರುಚಿ ಕೆಲವರ ಮನಸ್ಸಿಗೆ ಮುದ ನೀಡುವಂತೆ ಸುದ್ದಿ ಮಾಡುವ ಪತ್ರಕರ್ತರು ಮಾಡಿದ ಸುದ್ದಿಗಳಿಂದ ಕೆಲವು ಘಟನೆಗಳು ನಡೆಯುತ್ತಿವೆ. ಇಂತಹ ಪತ್ರಕರ್ತರಿಂದ ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗುತ್ತಿದೆ. ಅಲ್ಲದೇ ಅನೇಕ ರಾಜಕಾರಣಿಗಳು ಪತ್ರಕರ್ತರನ್ನ ತಮ್ಮ ಪ್ರಚಾರಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮನೋಭಾವನೆ ಹೊಂದಿದ್ದಾರೆ. ಆದರೆ ಇದೇ ರಾಜಕಾರಣಿಗಳ ಅಥವಾ ಜನ ಪ್ರತಿನಿಧಿಗಳ ವಿರುದ್ಧ ಸುದ್ದಿಯನ್ನು ಮಾಡಿದ ಪತ್ರಕರ್ತರಿಗೆ ಜೀವ ಬೆದರಿಕೆ, ಮಾನಸಿಕ ಕಿರುಕುಳ ಮತ್ತು ಪತ್ರಕರ್ತರನ್ನೇ ನಂಬಿಕೊಂಡಂತಹಾ ಕುಟುಂಬಸ್ಥರಿಗೆ ಜೀವತೆಗೆಯುವ ಕೆಲಸ ಕಾರ್ಯಗಳು ಇತ್ತೀಚೆಗೆ ನಡೆಯುತ್ತಿರುವುದು ಕಂಡು ಬರುತ್ತಿದೆ.
ಇತ್ತೀಚೆಗಷ್ಟೇ ಪತ್ರಕರ್ತರು ಕೊರೋನ ಮಹಾಮಾರಿಯ ಸಂದರ್ಭದಲ್ಲಿ ದೇಶವೇ ಲಾಕ್ ಡೌನ್ ಮಾಡಿದಾಗ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶದ ವಿದೇಶಗಳ ಸುದ್ದಿಗಳನ್ನು ಓದುಗರಿಗೆ ಅಥವಾ ವೀಕ್ಷಕರಿಗೆ ನಿರಂತರವಾಗಿ ರೋಗ ರುಜಿನಗಳ, ಸಾವು ನೋವುಗಳಲ್ಲದೇ ಎಲ್ಲಾ ರೀತಿಯ ನೈಜ್ಯ ಸ್ಥಿತಿಗಳ ವಿಷಯಗಳ ಕುರಿತು ಕ್ಷಣ ಕ್ಷಣದಲ್ಲಿ ಮಾಹಿತಿ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರವು ಪತ್ರಕರ್ತರೆಲ್ಲರೂ ಕೊರೋನ ವಾರಿಯರ್ಸ್ ತಂಡ ಎಂದು ಘೋಷಿಸಲಾಯಿತು. ಆದರೆ ಇಂತಹ ಪತ್ರಕರ್ತರಿಗೆ ಅಥವಾ ಸರ್ಕಾರವೇ ಘೋಷಿಸಿದ ಕೊರೋನ ವಾರಿಯರ್ಸ್ ಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡಲಾಗಲಿಲ್ಲ. ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವರಿಗೆ ಯಾವುದೇ ರೀತಿಯ ವೇತನವಾಗಲೀ, ಮಾಶಾಸನವಾಗಲೀ ಸಿಗುತ್ತಿಲ್ಲ. ಪತ್ರಕರ್ತರು ಶೋಷಣೀಯ ಪರಿಸ್ಥಿತಿಯಲ್ಲಿದ್ದಾರೆ. ಪತ್ರಕರ್ತರ ವೃತ್ತಿ ಕೇವಲ ಸಮಾಜ ಸೇವೆಯಾಗಿದೆ ಹೊರತು ಅವರಿಗೆ ಸಾರ್ವಜನಿಕರು ನೀಡುವ ಜಾಹೀರಾತು ಬಿಟ್ಟರೆ ಬೇರೇನೂ ಆದಾಯವಿಲ್ಲ. ರಾಜ್ಯದ ಎಲ್ಲಾ ಪತ್ರಕರ್ತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರಗಳು ಪತ್ರಕರ್ತರಿಗೆ ಗೌರವ ಧನವನ್ನು ನೀಡುವ ಮೂಲಕ ಅವರಿಗೆ ನೆರವಾಗಬೇಕಲ್ಲದೇ, ಪತ್ರಕರ್ತರಿಗೆ ಸರ್ಕಾರ ನೀಡುತ್ತಿರುವ ಆಯುಷ್ಮಾನ್ ಕಾರ್ಡ್ ಗಿಂತ ಯಶಸ್ವಿನಿ ಯೋಜನೆಯ ಸೌಲಭ್ಯ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳು ಆರಂಭವಾಗಿ ನಿಜವಾದ ಪತ್ರಕರ್ತರಿಗೆ ಗೌರವವೇ ಇಲ್ಲದಂತಾಗಿದೆಯಲ್ಲದೇ, ಅನೇಕ ಪತ್ರಕರ್ತರು ಪತ್ರಿಕೆಯ ಅಸ್ತಿತ್ವ ಉಳಿವಿಗಾಗಿ ಮತ್ತು ಓದುಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸ್ವತಃ ತಾವೇ ಪತ್ರಿಕೆ ಉಚಿತವಾಗಿ ಹಂಚುವ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರೆಂದರೆ ಅನೇಕರಿಗೆ ಆಲಸ್ಯ ಜಿಗುಪ್ಸೆಯುಂಟಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
- ವಿಶೇಷ ಲೇಖನ :ಸುಕುಮಾರ್ ಎಂ.
- :ಶಿವಮೊಗ್ಗ ಜಿಲ್ಲೆ.