ಮಾರ್ಚ್ 9ರ ಕರ್ನಾಟಕ ಬಂದ್ ಹಿಂಪಡೆದ ಕಾಂಗ್ರೆಸ್..! ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹೋರಾಟ ನಡೆಸಲು ಚಿಂತನೆ.

ಬೆಂಗಳೂರು: ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಮಾರ್ಚ್ 9 ರಂದು ಕಾಂಗ್ರೆಸ್ ಕರೆ ನೀಡಿದ್ದ ಕರ್ನಾಟಕ ಬಂದ್ ಹೋರಾಟವನ್ನು ಹಿಂಪಡೆಯಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ – ಪೋಷಕರ ಮನವಿ ಮೇರೆಗೆ ಬಂದ್ ಹಿಂಪಡೆಯಲಾಗಿದೆ. ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿಯವರು ತಿಳಿಸಿದ್ದಾರೆ.

“ಪಿಯುಸಿ ಪರೀಕ್ಷೆ ಇರುವುದರಿಂದ ಕರ್ನಾಟಕ ಬಂದ್ ಹಿಂಪಡೆಯುವಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ನನ್ನನ್ನು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದರು. ಯುವಜನರೆ ನಮ್ಮ ಪ್ರಧಾನ ಆದ್ಯತೆಯಾಗಿರುವುದಿರಂದ ಮಾರ್ಚ್ 09 ರಂದು ಕಾಂಗ್ರೆಸ್ ಕರೆ ನೀಡಿದ್ದ ಕರ್ನಾಟಕ ಬಂದ್ ಹೋರಾಟವನ್ನು ವಾಪಸ್ ಪಡೆಯುತ್ತಿದ್ದೇವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಪ್ರಕರಣ ಹೊರಬಿದ್ದು 6 ದಿನಗಳಾದರೂ ಪ್ರಮುಖ ಆರೋಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಬಂಧಿಸಿಲ್ಲ ಹಾಗೂ ಸಾಲು ಸಾಲು ಭ್ರಷ್ಟಾಚಾರ ಹಗರಣಗಳ ನೈತಿಕ ಹೊಣೆ ಹೊತ್ತು ಸಿಎಂ ಬಸವರಾಜ ಬೊಮ್ಮಾಯಿಯವರು ರಾಜೀನಾಮೆ ನೀಡಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿ ಬಂದ್‌ಗೆ ಕರೆ ನೀಡಿತ್ತು. ಇದೇ ಸಮಯದಲ್ಲಿ ಕರ್ನಾಟಕ ಹೈಕೋರ್ಟ್ ಸಹ ಆರೋಪಿ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಮಧ್ಯಂತರ ಜಾಮೀನು ನೀಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಂದ್ ಹಿಂಪಡೆದಿದ್ದು ಬೇರೆ ರೀತಿಯ ಹೋರಾಟ ನಡೆಸಲು ಚಿಂತನೆ ನಡೆಸಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.