ಕಸ್ತೂರಿರಂಗನ್ ವರದಿ ಮತ್ತು ಜನತಂತ್ರ ವ್ಯವಸ್ಥೆ ಮೂಲಕ. ಮಲೆನಾಡಿಗೆ ಮತ್ತೆ ಕಸ್ತೂರಿ ರಂಗನ್ ಉರುಳು-ಆತಂಕದಲ್ಲಿ ಜನರು. 

ಇದರರ್ಥ ಇಷ್ಟೇ ಇಂದಿನ ಸಮಾಜವನ್ನು ಹಣ ಮತ್ತು ಅದನ್ನು ಶೇಕಡಾ 40ರ (ಕಮಿಷನ್‍ನ) ಖಚಿತ ಲಾಭದೊಂದಿಗೆ ಬಿತ್ತಿ ಬೆಳೆಯಬಹುದಾದ ‘ಅಭಿವೃದ್ಧಿ’ಯ ಫಲಾನುಭವದ ಹಪಹಪಿ ಮಾತ್ರ ಆಳುತ್ತಿದೆ. ಏಕೆಂದರೆ ಕಸ್ತೂರಿ ರಂಗನ್ ವರದಿಯೇನೂ ಜನರ ಜೀವನವನ್ನು ಹಾಳುಗೆಡಹುವ ಉದ್ದೇಶಕ್ಕಾಗಿ ರಚಿತವಾದದ್ದಲ್ಲ. ಬದಲಿಗೆ, ಜನಸಾಮಾನ್ಯರ ಸುಸ್ಥಿರ ಅಭಿವೃದ್ಧಿ ಅದರ ಗುರಿಯಾಗಿತ್ತು. ಆದರೆ ಇದು ಅವರ ಅರಿವಿಗೇ ತಾಗಿದಂತಿಲ್ಲ. ಹಾಗಾಗಿಯೇ ಇಂದು ನಾವು ಯಾವ ಮೌಲ್ಯಗಳ ಆದ್ಯತೆಯೊಂದಿಗೆ, ಎಂತಹ ಸಮಾಜವನ್ನು ಕಟ್ಟ ಹೊರಟಿದ್ದೇವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ತುರ್ತು ಅಗತ್ಯವಿದೆ ಎಂದು ಎನಿಸುತ್ತದೆ. ಹಾಗೇಯೇ ಈ ಸಮಾಜವನ್ನು ಕಟ್ಟುವ ಹೊಣೆಯನ್ನು ಪೂರ್ತಿ ಯಾರಿಗೆ ಬಿಟ್ಟುಕೊಟ್ಟಿದ್ದೇವೆ ಮತ್ತು ಏಕೆ ಹಾಗೂ ಹೇಗೆ ಎಂಬ ಪ್ರಶ್ನೆಯನ್ನೂ.

truenews

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಲಾಗುತ್ತದೆ. ಅಂದರೆ ಪ್ರಜೆಗಳ ಇಚ್ಛೆಯಂತೆ ಪ್ರಭುತ್ವ ನಡೆಯಬೇಕು, ಸಮಾಜವನ್ನು ಕಟ್ಟಬೇಕು ಎಂಬುದು ಇದರ ಅರ್ಥವಾಗಿದೆ. ಆದರೆ ಪ್ರಜೆಗಳ ಇಚ್ಛೆ ಸಂಘಟಿತವಾಗಿ ರೂಪುಗೊಳ್ಳುವ ಬಗೆ ಹೇಗೆ ಮತ್ತು ಅದು ಪ್ರಭುತ್ವದ ಮೂಲಕ ಅನುಷ್ಠಾನಗೊಳ್ಳುವ ಪ್ರಕ್ರಿಯೆಯಲ್ಲಿ ಅದು ಪಡೆಯುವ ರೂಪಗಳ ಮೇಲೆ ನಿಗಾ ಇಡುವವರಾರು ಎಂಬ ಪ್ರಶ್ನೆಗಳನ್ನು ಕೇಳುವ ಸಂದರ್ಭ ಇಂದು ಬಂದಿದೆ ಎನಿಸುತ್ತದೆ.

ಏಕೆಂದರೆ ನಮ್ಮದು ಪರೋಕ್ಷ ಪ್ರಜಾಪ್ರಭುತ್ವ. ನಮ್ಮನ್ನು ನಾವು ನಮ್ಮ ಪ್ರತಿನಿಧಿಗಳ ಮೂಲಕ ಆಳಿಕೊಳ್ಳುವ ವ್ಯವಸ್ಥೆ. ಆದರೆ ನಮ್ಮ ಪ್ರತಿನಿಧಿಗಳು ಎನಿಸಿಕೊಳ್ಳುವವರು ನಿಜವಾಗಿಯೂ ನಮ್ಮ ಪ್ರತಿನಿಧಿಗಳು ಎನಿಸಿಕೊಳ್ಳುವಷ್ಟು ನಮ್ಮವರೇ ಆಗಿರುವ ಮಟ್ಟಿಗೆ ನಮ್ಮ ಮತ್ತು ಅವರ ಸಂಬಂಧ ಸಮೀಕರಣಗಳಿಗೆ ಈ ವ್ಯವಸ್ಥೆಯಲ್ಲಿ ಅವಕಾಶವಿದೆಯೇ? ಅಂದರೆ ಪ್ರಜಾಸಮೂಹ ಮತ್ತು ಅದರ ಪ್ರತಿನಿಧಿಗಳ ನಡುವೆ ನಿರಂತರ ಮತ್ತು ಅರ್ಥಪೂರ್ಣ ಸಂವಾದ ಸಾಧ್ಯವಿದೆಯೇ?

truenews


 
ಮಧ್ಯಸ್ಥಿಕೆ ವಹಿಸಿ ಇದನ್ನು ಸಾಧ್ಯಮಾಡಬೇಕಾದ ಸಮಾಜದ ಅಭಿಪ್ರಾಯ ಮುಖಂಡರು, ಬುದ್ಧಿಜೀವಿಗಳು, ಚಿಂತಕರು, ಲೇಖಕರು- ಕಲಾವಿದರು ಇಂದು ಎಲ್ಲಿ ಹೋಗಿದ್ದಾರೆ? ಏನಾಗಿದ್ದಾರೆ ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ. ಜೊತೆಯಲ್ಲೇ ಈ ಪ್ರಶ್ನೆಗಳಿಗೆ ಉತ್ತರವಾಗಿ, ಇದಕ್ಕೆಲ್ಲ ಈ ನಮ್ಮ ಪ್ರತಿನಿಧಿ ವ್ಯವಸ್ಥೆ ಈಗ ಆಗಿರುವಂತೆ ಏಕಮುಖಿಯಾಗಿರಬಲ್ಲ ಸಾಧ್ಯತೆಗಳಿಗೆ ಅವಕಾಶವಿರುವಂತೆ ಪರೋಕ್ಷವಾಗಿರುವುದೇ ಕಾರಣವಲ್ಲವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ. ಒಮ್ಮೆ ಚುನಾಯಿತನಾದನೆಂದರೆ ಅವನ ಅವಧಿ ಮುಗಿಯುವವರೆಗೂ ಆತನಿಗೆ ಪ್ರಜೆಗಳೂ ಸೇರಿ ಎಲ್ಲರೂ ‘ಅನ್ಯ’ರೇ ಆಗಬಲ್ಲಷ್ಟು ಈ ವ್ಯವಸ್ಥೆ ಏಕಪಕ್ಷೀಯವಾಗಿದೆ.

ಹೀಗೆಯೇ ಪ್ರಜೆ ಮತ್ತು ಅವನ ಪ್ರತಿನಿಧಿ (ಶಾಸಕ ಮತ್ತು ಸಂಸತ್ ಸದಸ್ಯ) ನಡುವಣ ಸಂಬಂಧ ಏಕಪಕ್ಷೀಯವಾಗಿರುವ ಕಾರಣದಿಂದಲೇ ಇಂದು ಕಸ್ತೂರಿ ರಂಗನ್ ವರದಿಗೆ ಈ ಗತಿ ಬಂದಿದೆ ಎನ್ನಬಹುದು. ಈ ವರದಿಯ ತಿರಸ್ಕಾರದ ಶಿಫಾರಸಿಗೆ ನೀಡಿರುವ, ಇದನ್ನು ನೇರ ಕ್ಷೇತ್ರ ಸಮೀಕ್ಷೆಗೆ ಬದಲಾಗಿ ಉಪಗ್ರಹ ಚಿತ್ರ ಸಮೀಕ್ಷೆಯ ಮೂಲಕ ಸಿದ್ಧಪಡಿಸಲಾಗಿದೆ ಎಂಬ ಕಾರಣವೂ ಒಟ್ಟಾರೆ ತಿರಸ್ಕಾರಕ್ಕೆ ಕಂಡುಕೊಂಡಿರುವ ಒಂದು ತಾಂತ್ರಿಕ ನೆಪ ಎನ್ನಬಹುದು. ಅದೇನೇ ಇರಲಿ, ಮೊದಲಾಗಿ ಈ ವರದಿಯ ಮತ್ತು ಇದರ ಮುಂಚೆಯ (ಮೊದಲ ನೋಟಕ್ಕೇ ತಿರಸ್ಕರಿಸಲ್ಪಟ್ಟ) ಗಾಡ್ಗೀಳ್ ವರದಿಯ ಅವಶ್ಯಕತೆಯಾದರೂ ಏಕೆ ಉಂಟಾಯಿತು ಎಂಬುದರ ಕಡೆ ಯಾರ ಗಮನವೂ ಇದ್ದಂತಿಲ್ಲ.
 
ಜಗತ್ತಿನ (ಅಂದರೆ ಈ ಜೀವಜಗತ್ತಿನ) ತಾಳಿಕೆ — ಬಾಳಿಕೆಗಳನ್ನು ನಿರ್ಧರಿಸುವ ಕೆಲವೇ ಕೆಲವು ನಿರ್ಣಾಯಕ ಭೂಭಾಗಗಳಲ್ಲಿ ನಮ್ಮ ಪಶ್ಚಿಮಘಟ್ಟಗಳ ಪ್ರದೇಶವೂ ಒಂದಾಗಿದ್ದು, ಅದು ಅಪಾಯದ ಅಂಚಿನಲ್ಲಿದೆ ಎಂಬ ಎಚ್ಚರಿಕೆಯ ಗಂಟೆ ವಿಶ್ವಸಂಸ್ಥೆಯ ಬಹುಶಿಸ್ತೀಯ ಅಧ್ಯಯನಗಳ ವೇದಿಕೆಯ ಮೂಲಕ ಕೇಳಿ ಬಂದದ್ದರಿಂದ ಈ ವರದಿಗಳು, ಸಮರ್ಥರೆಂದು ಸರ್ಕಾರ ಭಾವಿಸಿದವರಿಂದ ಸಮರ್ಥ ವಿಧಾನಗಳ ಮೂಲಕ ಸಿದ್ಧಗೊಂಡಿವೆ.

truenews

ದೇಶದ ಅತ್ಯಂತ ಸಮರ್ಥ ಪರಿಸರ ವಿಜ್ಞಾನಿ ಎಂದು ಪರಿಗಣಿತರಾದ ಗಾಡ್ಗೀಳ್ ಅವರ ವರದಿಯನ್ನು ತಿರಸ್ಕರಿಸಲು ಕಾರಣವಾದ ‘ಅಭಿವೃದ್ಧಿ ವಿರೋಧಿ’ ಎಂಬುದೇ ಈಗ ಕಸ್ತೂರಿ ರಂಗನ್ ವರದಿಯನ್ನೂ ತಿರಸ್ಕರಿಸಬೇಕೆಂಬ ಕೂಗಿಗೂ ಕಾರಣವಾಗಿದೆ ಎಂದರೆ ಏನರ್ಥ? ಅಂದರೆ ಈ ‘ಅಭಿವೃದ್ಧಿ’ ಎಂದರೆ ಏನೆಂದು ಜನರ ಮನಸ್ಸಿಗೆ ತುಂಬಲಾಗಿದೆ ಮತ್ತು ಹೇಗೆ ಇದು ಸಾಧ್ಯವಾಗಿದೆ ಎಂದು ಯೋಚಿಸಬೇಕಾಗಿದೆ. ಅದೂ ಯಾರ ಸುಖ ಸವಲತ್ತುಗಳಿಗಾಗಿ ಈ ‘ಅಭಿವೃದ್ಧಿ’ ಬೇಕಾಗಿದೆ ಎನಿಸುತ್ತಿದೆಯೋ ಅದು ಅವರು ಬದುಕಿ ಬಾಳಬೇಕಾದ ಭೂಮಿಯೇ ವಾಸ ಯೋಗ್ಯವಾಗಿ ಉಳಿಯಲಾಗದ ಅಪಾಯದಲ್ಲಿದೆ ಎಂಬ ಸಂಗತಿಯ ಹಿನ್ನೆಲೆಯಲ್ಲಿಯೂ..!

ಈ ಬಗ್ಗೆ ಯೋಚಿಸಿದಾಗ ನಮ್ಮ ಈ ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಬಲ್ಯಗಳು ಎದ್ದು ಕಾಣತೊಡಗುತ್ತವೆ. ಇಂದು ಮುಖ್ಯವಾಗಿ, ಕೋವಿಡ್ — 19 ರ ಎರಡನೆಯ ದಾಳಿಯ ರುದ್ರ ಭೀಕರತೆ ಯಾರ ಮೇಲೂ ಏನೂ ಪರಿಣಾಮವನ್ನುಂಟು ಮಾಡಿಲ್ಲದಿರುವುದರಿಂದ ಆರಂಭವಾದಂತೆ. ಈ ಸಂದರ್ಭದಲ್ಲೂ ಹಲವು ಹಿತಾಸಕ್ತಿಗಳು ಒಗ್ಗೂಡಿ ಹೇಗೆ ರಾಶಿ ರಾಶಿ ಹಣ ಸಂಪಾದಿಸಿದವು ಮತ್ತು ಇದರಲ್ಲಿ ನಮ್ಮ ಈ ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆಯೂ ಹೇಗೆ ಸಕ್ರಿಯವಾಗಿ ಭಾಗಿಯಾಗಿತ್ತು ಎಂಬುದು ಈಗ ಗುಟ್ಟಿನ ವಿಷಯವಾಗೇನೂ ಉಳಿದಿಲ್ಲ.

truenews


 
ಇದು ಪಾಪದ ಹಣವೆಂದು ಇವರಿಗೆ ಅನ್ನಿಸಿಯೇ ಇಲ್ಲ. ಏಕೆಂದರೆ ಕೋವಿಡ್ — 19 ಇಂದು ತಾವೂ ಸೇರಿದಂತೆ ಜಗತ್ತು ಮಾದರಿಯಾಗಿ ಅನುಸರಿಸುತ್ತಿರುವ ಜೀವನ ಶೈಲಿಯಿಂದ ಉಂಟಾದ ರೋಗವಿರಬಹುದೆಂಬ ಜಗತ್ತಿನ ಅನೇಕ ಚಿಂತಕರು ವ್ಯಕ್ತಪಡಿಸಿದ ಆತಂಕ — ಅಭಿಪ್ರಾಯ ಇವರ ಗಮನಕ್ಕೇ ಬಂದಂತಿಲ್ಲ. ಇದಕ್ಕೆ ಮುಖ್ಯ ಕಾರಣ, ನಮ್ಮ ಪ್ರತಿನಿಧಿಗಳ ಲೋಕ ಸಮಾಜದ ಸಂವೇದನಾಶೀಲ-ಚಿಂತನಶೀಲ ಭಾಗದೊಡನೆ ಸಂಪರ್ಕ ಕಳೆದುಕೊಂಡು ಏಕಪಕ್ಷೀಯವಾಗಿ, ಬರಡಾಗಿರುವುದು.

ಹಾಗಾಗಿಯೇ ಸದ್ಯದ ವಿಧಾನ ಪರಿಷತ್ ಚುನಾವಣೆಗಳಲ್ಲಿ ಕಾಣುತ್ತಿರುವ ಕುಟುಂಬ ರಾಜಕಾರಣವಾಗಲೀ ಕುಬೇರ ರಾಜಕಾರಣವಾಗಲೀ ಅವನಲ್ಲಿ ಅಸಹ್ಯ, ಜುಗುಪ್ಸೆ ಅಥವಾ ಸಿಟ್ಟು ಹುಟ್ಟಿಸಿಲ್ಲ. ಏಕೆಂದರೆ ಇದಾವುದೂ ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ಮಾದರಿಗೆ ಆಧಾರವಾಗಿರುವ ಸಂವಿಧಾನಕ್ಕೆ ವಿರುದ್ಧವಾಗಿಲ್ಲ. ಇದೆಲ್ಲ ಸಂವಿಧಾನಬದ್ಧವೇ ಆದ ‘ಅಭಿವೃದ್ಧಿ’ಯ ಹಲವು ‘ಸೃಜನಶೀಲ’ ಮಾದರಿಗಳ ಫಲಾನುಭವಗಳ ಪರಿಣಾಮಗಳಷ್ಟೆ..! ಅಂದರೆ, ಭಾರತದ ಪ್ರಜೆಯಾಗಿ ಬದುಕುವ ಅತ್ಯುತ್ತಮ ಮಾದರಿ ಇದು ಎಂಬುದನ್ನು ಈ ವ್ಯವಸ್ಥೆಯೇ ಅವನಿಗೆ ಹೇಳುತ್ತಿದೆ. ಇದಕ್ಕೆ ಅಡ್ಡಿ ಬರುವ ಯಾವ ವರದಿಯೂ ಪಾಠವೂ ಅವನಿಗೆ ಅಪ್ರಸ್ತುತ ಮತ್ತು ತಿರಸ್ಕಾರಾರ್ಹವೆನಿಸುತ್ತದೆ.

ದೇಶ ಸಾಗಿರುವ ಈ ಆತ್ಮಹತ್ಯಾತ್ಮಕ ‘ಅಭಿವೃದ್ಧಿ’ಯ ದಾರಿಯಿಂದ ಪಾರಾಗಲು ಈ ವ್ಯವಸ್ಥೆಯಲ್ಲಿ ಸದ್ಯಕ್ಕೆ ಕಾಣುತ್ತಿರುವ ಒಂದೇ ಮಾರ್ಗವೆಂದರೆ, ಈ ವ್ಯವಸ್ಥೆಯಲ್ಲೇ ಈ ಹಿಂದೆಯೇ ಈ ಯಾವ ಆತ್ಮಹತ್ಯಾತ್ಮಕ ದುರ್ಲಕ್ಷಣಗಳೂ ದುರ್ಗಣಗಳೂ ಇಲ್ಲದೆ ನಾವು ಬದುಕಿದ್ದೆವು ಎಂಬ ಅರಿವಿಗೆ ತೆರೆದುಕೊಂಡು, ಈ ವ್ಯವಸ್ಥೆಯನ್ನು ಮತ್ತು ಅದರೊಳಗಿನ ಮನುಷ್ಯನನ್ನು ಏಕಮುಖಗೊಳಿಸದಂತೆ ತಡೆದಿದ್ದ ಅಂದಿನ ಬಹುಸ್ತರದ ಸಾಮಾಜಿಕ ಸಂವಾದಗಳಿಗೆ, ಬಹು ಅಭಿಪ್ರಾಯಗಳ ಮುಖಾಮುಖಿಗೆ ಸೂಕ್ತವಾದ ವಾತಾವರಣವನ್ನು ನಿರ್ಮಿಸುವುದೇ ಆಗಿದೆಯೂ..!

  • ಸುಕುಮಾರ್ ಎಂ ಶಿವಮೊಗ್ಗ 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.