ಅಳಿವಿನಂಚಿನಲ್ಲಿರುವ ಕಪ್ಪೆ ಚಿಪ್ಪು..!?

ಮರುವಾಯಿ

ಮರುವಾಯಿ. ಕರಾವಳಿಯ ವಿಶಿಷ್ಠ ಆಹಾರ ಪದ್ಧತಿಯಲ್ಲಿ ಒಂದು. ಇದರಿಂದ ಮಾಡಿದ ಸುಕ್ಕ, ಗಸಿ, ಪುಂಡಿ ಇತ್ಯಾದಿಗಳಿಗೆ ಈ ಭಾಗದ ಖಾದ್ಯಗಳಲ್ಲಿ ವಿಶೇಷ ಸ್ಥಾನ. ಇದರ ಹೆಸರು ಕೇಳಿದ ಕೂಡಲೇ ಹಲವರಿಗೆ ಬಾಯಲ್ಲಿ ನೀರು. ಇನ್ನು ಕೆಲವರಿಗೆ ಇದನ್ನು ಹೆಕ್ಕುವುದು ಜೀವನಾಧಾರದ ಕಸುಬು. ಒಂದು ಕಾಲದಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಈ ಜಲಚರಗಳ ಸಂಖ್ಯೆ ಈಗ ಕ್ಷೀಣವಾಗಿದೆ. ಇದನ್ನೇ ನಂಬಿಕೊಂಡಿದ್ದ ಕುಟುಂಬಗಳು ಬೇರೆ ದಾರಿ ಹುಡಕಿದ್ದಾರೆ.

ತುಳುವಿನಲ್ಲಿ ಮರುವಾಯಿ. ಉಡುಪಿಯ ಕೆಲ ಭಾಗದಲ್ಲಿ ಕೊಯ್ಯೋಲ್. ಕನ್ನಡದಲ್ಲಿ ಕಪ್ಪೆಚಿಪ್ಪು. ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಈ ಜೀವಿಗಳು ಸಮುದ್ರಕ್ಕೆ ಹೊಂದಿಕೊಂಡಿರುವ ನದಿತಟದಲ್ಲಿ ವಾಸಿಸುತ್ತದೆ. ಈ ಪ್ರದೇಶದ ನೀರಿನಲ್ಲಿರುವ ಉಪ್ಪಿನಾಂಶ ಸಮತೋಲನ ಮರುವಾಯಿ ಬೆಳವಣಿಗೆಗೆ ಪೂರಕ. ಆದರೆ ಪ್ರಸ್ತುತ ಹೆಚ್ಚಾಗಿರುವ ನೀರಿನ ಮಾಲಿನ್ಯ ಇವುಗಳ ಬೆಳವಣಿಗೆಗೆ ಅಡ್ಡಿಯಾಗಿದೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇವುಗಳ ಸಂಖ್ಯೆಯಲ್ಲಿ ಹೇರಳ ಇಳಿಕೆ ಕಾಣಬಹುದು. ಇದಕ್ಕೆ ಮುಲ್ಕಿಯ ಎರಡು ನದಿಗಳು ಸಮುದ್ರ ಸೇರುವ ಪ್ರದೇಶ ಹೊರತಲ್ಲ.

jj


 
ಮೂಲ್ಕಿಯಲ್ಲಿ ಒಂದು ಕಡೆ ಶಾಂಭವಿ. ಇನ್ನೊಂದು ಕಡೆ ನಂದಿನಿ. ಎರಡು ನದಿಗಳು ಸಮುದ್ರ ಸೇರುವ ಜಾಗದಲ್ಲಿ ದಿನಕ್ಕೆ ನಾಲ್ಕು ಬಾರಿ ನೀರಿನ ಏರಿಳಿಕೆ ಗಮನಿಸಬಹುದು. ಮರುವಾಯಿ ಪ್ರಭೇದಗಳಾದ ಕೆಸ ಮರುವಾಯಿ,ದಡ್ಡ್ ಮರುವಾಯಿ, ಕಪ್ಪೆ ಮಾರುವಾಯಿ ಇಲ್ಲಿ ಲಭ್ಯ. ಇವುಗಳನ್ನು ಹೆಕ್ಕಲು ಕೇವಲ ನೀರು ಇಳಿದಾಗ ಮಾತ್ರ ಸಾಧ್ಯ.  ಏರಿಕೆಯಾದ ಸಮಯದಲ್ಲಿ ಇದು ಅಪಾಯಕಾರಿ.  

ಸುಮಾರು ಎಂಟು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಇದರ ಸಂಖ್ಯೆ ಧಾರಾಳವಾಗಿತ್ತು. ಅದರ ವ್ಯಾಪಾರವನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿದ್ದವು. ಇನ್ನು ನೀರಿಗಿಳಿದು ಈ ಕಪ್ಪೆಚಿಪ್ಪು ತೆಗೆಯಲು ಕೆಲ ನಿಯಮಗಳು ಜಾರಿಯಲ್ಲಿತ್ತು. ಕಬ್ಬಿಣ ಸಾಮಾಗ್ರಿಗಳನ್ನು ಉಪಯೋಗಿಸಿ ಇದನ್ನು ತೆಗೆಯುವುದು ನಿಷೇಧ. ಆದರೆ ಮಳೆಗಾಲದಲ್ಲಿ ಇದು ಸುಲಭವಾಗಿ ಸಿಗದ ಕಾರಣ ಈ ನಿಯಮಗಳನ್ನು ಉಲ್ಲಂಘಿಸಲಾಯಿತು. ಕ್ರಮೇಣ ಕೆಲ ದಿನಗಳಲ್ಲಿ ಇವುಗಳ ಸಂತತಿ ನಾಶವಾಯಿತು.

ಇದಾಗಿ ಆರು ವರ್ಷಗಳ ನಂತರ ಮತ್ತೆ ಇಲ್ಲಿ ಕಪ್ಪೆಚಿಪ್ಪುಗಳು ಕಾಣಿಸಿಕೊಂಡಿದೆ. "ಕೇರಳ ಹಾಗೂ ತಮಿಳುನಾಡಿನಿಂದ ಮರುವಾಯಿ ಹೆಕ್ಕಿ ಮುಲ್ಕಿಗೆ ತರಲಾಯಿತು. ಶಾಂಭವಿ ಹೊಳೆಯಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಇರಿಸಿ, ಬಳಿಕ ಅವುಗಳನ್ನು ಗೋವಾ ಮುಂಬೈಗೆ ಕೊಂಡೊಯ್ಯುವ ವ್ಯಾಪಾರ. ಆ ಸಂದರ್ಭದಲ್ಲಿ ನದಿ ಮೂಲೆಯಲ್ಲಿದ್ದ ಕಪ್ಪೆಚಿಪ್ಪುಗಳು ಮರಿ ಹಾಕಿರಬಹುದು" ಎನ್ನುತ್ತಾರೆ ಅಲ್ಲಿನ  ಹಿರಿಯ ಮೀನುಗಾರರು.

ಆದರೆ ಇವತ್ತು ಬೇರೆಲ್ಲಾ ಪ್ರದೇಶದಂತೆ ಇಲ್ಲಿರುವ ಮರುವಾಯಿಗಳೂ ಅಳಿವಿನಂಚಿನಲ್ಲಿದೆ. ಕಾರಣ ಜಲ ಮಾಲಿನ್ಯ. ಶಾಂಭವಿ ನದಿಯ ಬಳಿ ಮೀನು ಸಾಕಾಣಿಕೆ ಹಾಗೂ ಸಿಗಡಿ ಸಾಕಾಣಿಕೆ ಬಹಳಷ್ಟಿವೆ. ಅವುಗಳಿಗೆ ರಾಸಾಯನಿಕ ಆಹಾರ ಬಳಕೆಯಾಗುತ್ತೆ. ಇದು ಕಪ್ಪೆಚಿಪ್ಪು ಗಳಿಗೆ ಹಾನಿ ಉಂಟು ಮಾಡುತ್ತಿವೆ. 

ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಒಟ್ಟು ಕರಾವಳಿ ಪ್ರದೇಶದಲ್ಲಿ ಮರುವಾಯಿ ಸಂತತಿ ಅಳಿವಿನ ಅಂಚಿನಲ್ಲಿದೆ. ಹತ್ತು ವರ್ಷಗಳ ಹಿಂದೆ ವಾರ್ಷಿಕವಾಗಿ ಸುಮಾರು 13,000 ಟನ್ ಮರುವಾಯಿ ಸಿಗುತ್ತಿತ್ತು. ಇದೀಗ ವಾರ್ಷಿಕವಾಗಿ ಪ್ರಮಾಣ 2000 ಟನ್ ಗೆ ಇಳಿಕೆಯಾಗಿದೆ. ಕರಾವಳಿ ಆಹಾರ ಪದ್ಧತಿಯಲ್ಲಿ ವಿಶೇಷ ಸ್ಥಾನ ಹೊಂದಿರುವ ಈ ಜಲಚರಗಳು ಕಾಣೆಯಾಗುತ್ತಿವೆ.

  • ಲೇಖನ: ಕೆ.ಎನ್ .ಕಾರ್ತಿಕ್
     

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.